ಜಿಲ್ಲೆಯ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಲು ಮನವಿ

| Published : Aug 20 2025, 01:30 AM IST

ಸಾರಾಂಶ

ರಾಮನಗರ ಶಾಸಕ ಇಕ್ಬಾಲ್‌ ಹುಸೇನ್, ನಮ್ಮ ಕ್ಷೇತ್ರ ಅಭಿವೃದ್ಧಿಯಲ್ಲಿ ಸಾಕಷ್ಟು ಹಿಂದುಳಿದಿದೆ. ಜಿಲ್ಲಾ ಕೇಂದ್ರಕ್ಕೆ ಸೂಕ್ತ ರಸ್ತೆ ಹಾಗೂ ಮೂಲಸೌಕರ್ಯ ಕಾಮಗಾರಿ ಕಲ್ಪಿಸಬೇಕು. ಇದಕ್ಕಾಗಿ ಹೆಚ್ಚಿನ ಅನುದಾನ ಬೇಕಿದೆ ಎಂದು ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ ರಾಮನಗರ

ಶಾಸಕರಿಗೆ ನೀಡುವ 50 ಕೋಟಿ ರುಪಾಯಿ ಅನುದಾನದ ಜೊತೆಗೆ ಕ್ಷೇತ್ರಗಳಲ್ಲಿ ಮೂಲಸೌಕರ್ಯ ಕಾಮಗಾರಿಗಳಿಗಾಗಿ ವಿಶೇಷ ಅನುದಾನ ನೀಡುವಂತೆ ಜಿಲ್ಲೆಯ ಶಾಸಕರು ಸಿಎಂ ಮತ್ತು ಡಿಸಿಎಂಗೆ ಮನವಿ ಮಾಡಿದ್ದಾರೆ.

ವಿಧಾನಸೌಧದ ಮುಖ್ಯಮಂತ್ರಿ ಕಚೇರಿಯಲ್ಲಿ ಸೋಮವಾರ ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಡೆಸಿದ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಅವರೊಂದಿಗೆ ಭಾಗಿಯಾದ ಜಿಲ್ಲೆಯ ಶಾಸಕರು ಬೆಂಗಳೂರು ದಕ್ಷಿಣ ಜಿಲ್ಲೆಯ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಬೇಕು ಎಂದು ಒತ್ತಾಯಿಸಿದರು.

ಬಸ್ ನಿಲ್ದಾಣ ನಿರ್ಮಾಣಕ್ಕೆ ಮನವಿ:

ಸಭೆಯಲ್ಲಿ ಮಾತನಾಡಿದ ರಾಮನಗರ ಶಾಸಕ ಇಕ್ಬಾಲ್‌ ಹುಸೇನ್, ನಮ್ಮ ಕ್ಷೇತ್ರ ಅಭಿವೃದ್ಧಿಯಲ್ಲಿ ಸಾಕಷ್ಟು ಹಿಂದುಳಿದಿದೆ. ಜಿಲ್ಲಾ ಕೇಂದ್ರಕ್ಕೆ ಸೂಕ್ತ ರಸ್ತೆ ಹಾಗೂ ಮೂಲಸೌಕರ್ಯ ಕಾಮಗಾರಿ ಕಲ್ಪಿಸಬೇಕು. ಇದಕ್ಕಾಗಿ ಹೆಚ್ಚಿನ ಅನುದಾನ ಬೇಕಿದೆ ಎಂದು ಮನವಿ ಮಾಡಿದರು.

ಜಿಲ್ಲಾ ಕೇಂದ್ರ ರಾಮನಗರದಲ್ಲಿ ಇರುವ ಬಸ್‌ ನಿಲ್ದಾಣವನ್ನು ಹಿಂದೆ ಇದ್ದ ಜನಸಂಖ್ಯೆಗೆ ಅನುಗುಣವಾಗಿ ನಿರ್ಮಿಸಲಾಗಿದೆ. ಇಲ್ಲಿಗೆ ಸೂಕ್ತ ಬಸ್‌ ನಿಲ್ದಾಣ ಬೇಕಾಗಿದೆ. ಮೈಸೂರು ಕಡೆಗೆ ಹೋಗಲು ಬಸ್‌ ನಿಲ್ದಾಣ ಇಲ್ಲದೆ ಪ್ರಯಾಣಿಕರಿಗೆ ಸಮಸ್ಯೆಯಾಗುತ್ತಿದೆ. ಬಸ್‌ ನಿಲ್ದಾಣಕ್ಕೆ ಜಾಗದ ಸಮಸ್ಯೆ ಇದ್ದು ಎಲ್ಲವನ್ನು ನಿವಾರಿಸಿ ಬಸ್‌ ನಿಲ್ದಾಣ ಮಂಜೂರು ಮಾಡಬೇಕು ಎಂದು ಇಕ್ಬಾಲ್‌ಹುಸೇನ್ ಕೋರಿದರು.ಇನ್ನು ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ ಸಹ ಮಾಗಡಿ ಪಟ್ಟಣಕ್ಕೆ ಸುಜ್ಜಿತ ಬಸ್‌ನಿಲ್ದಾಣ ಬೇಕಿದ್ದು, ನಮಗೆ ಬಸ್‌ ನಿಲ್ದಾಣವನ್ನು ಮಂಜೂರು ಮಾಡುವಂತೆ ಕೇಳಿದ್ದಾರೆ. ಚನ್ನಪಟ್ಟಣ ಶಾಸಕ ಯೋಗೇಶ್ವರ್ ನನೆಗುದಿಗೆ ಬಿದ್ದಿರುವ ಖಾಸಗಿ ಬಸ್‌ ಟರ್ಮಿನಲ್ ಕಾಮಗಾರಿಗೆ ಅನುದಾನ ನೀಡುವಂತೆ ಬೇಡಿಕೆ ಇಟ್ಟಿದ್ದಾರೆಂದು ಗೊತ್ತಾಗಿದೆ.

ನಾಲೆಗಳ ಆಧುನೀಕರಣಕ್ಕೆ 50 ಕೋಟಿ ನೀಡಿ:

ಮಂಚನಬೆಲೆ ಜಲಾಶಯದ ಎಡ ಮತ್ತು ಬಲದಂಡೆ ನಾಲೆಗಳನ್ನು ಆಧುನೀಕರಣ ಮಾಡಬೇಕಿದೆ. ಇದಕ್ಕಾಗಿ ಸುಮಾರು 50 ಕೋಟಿ ರು. ವೆಚ್ಚವಾಗಲಿದ್ದು, ಸರ್ಕಾರ ಈ ಹಣವನ್ನು ನೀಡಿದರೆ ರೈತರಿಗೆ ಅನುಕೂಲವಾಗಲಿದೆ. ಕೂಡಲೇ ನಾಲೆಗಳ ಆಧುನೀಕರಣಕ್ಕೆ ಹಣ ಬಿಡುಗಡೆ ಮಾಡುವಂತೆ ಶಾಸಕ ಇಕ್ಬಾಲ್‌ಹುಸೇನ್ ಒತ್ತಾಯಿಸಿದ್ದಾರೆ.

ಭಕ್ಷಿಕೆರೆ ಕೆರೆಯ ಏರಿಯನ್ನು ಮತ್ತೆ ಮಣ್ಣಿನಿಂದ ನಿರ್ಮಾಣ ಮಾಡಲಾಗುತ್ತಿದೆ. ಇದು ಸರಿಯಲ್ಲ ಭಕ್ಷಿಕೆರೆಗೆ ಶಾಶ್ವತವಾದ ಪರಿಹಾರ ಬೇಕಿದ್ದು, ಇದಕ್ಕಾಗಿ ಕಾಂಕ್ರೀಟ್ ವಾಲ್ ನಿರ್ಮಿಸಲು ಸರ್ಕಾರ ಅನುದಾನ ನೀಡಬೇಕು ಎಂದು ಇಕ್ಬಾಲ್ ಹುಸೇನ್ ಮನವಿ ಮಾಡಿದ್ದಾರೆ.

ನಿವೇಶನಕ್ಕೆ ಮನವಿ:

ತಮ್ಮ ಕ್ಷೇತ್ರದಲ್ಲಿ ವಸತಿ ರಹಿತರಿಗೆ ವಸತಿ ಹಾಗೂ ಬಡ ನಿರ್ಗತಿಕರಿಗೆ ನಿವೇಶನ ನೀಡಲು ಸರ್ಕಾರದಿಂದ ಹೆಚ್ಚಿನ ಅವಕಾಶ ನೀಡಬೇಕು ಎಂದು ಮೂವರು ಶಾಸಕರು ಮನವಿ ಸಲ್ಲಿಸಿದ್ದಾರೆ.

ಸಭೆಯಲ್ಲಿ ಶಾಸಕರ ಅಹವಾಲುಗಳನ್ನು ಆಲಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಬೆಂಗಳೂರು ದಕ್ಷಿಣ ಜಿಲ್ಲೆಯ ಅಭಿವೃದ್ಧಿಗೆ ಹಂತ ಹಂತವಾಗಿ ಕ್ರಮವಹಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ. ಸಭೆಯಲ್ಲಿ ಜಿಲ್ಲೆಯಲ್ಲಿ ಎಸಿಎಸ್‌ಪಿ ಮತ್ತು ಟಿಎಸ್‌ಪಿ ಕಾಮಗಾರಿಯ ಪ್ರಗತಿ, ಕೃಷಿ ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ...ಕೋಟ್ ...ನಮ್ಮ ಕ್ಷೇತ್ರದ ಅಭಿವೃದ್ಧಿಗೆ ಅಗತ್ಯವಿರುವ ಯೋಜನೆಗಳ ಬಗ್ಗೆ ಜಿಲ್ಲೆಯ ಎಲ್ಲಾ ಶಾಸಕರು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳ ಬಳಿ ಮನವಿ ಮಾಡಿಕೊಂಡಿದ್ದೇವೆ. ಇದಕ್ಕೆ ಇಬ್ಬರೂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳು ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಸರ್ಕಾರ ಸಂಪೂರ್ಣ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ.

- ಇಕ್ಬಾಲ್‌ಹುಸೇನ್ ಶಾಸಕ, ರಾಮನಗರ19ಕೆಆರ್ ಎಂಎನ್ 5.ಜೆಪಿಜಿ

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೊಂದಿಗೆ ಬೆಂ.ದಕ್ಷಿಣ ಜಿಲ್ಲೆಯ ಶಾಸಕರು ಮತ್ತು ಉಸ್ತುವಾರಿ ಸಚಿವರ ಜೊತೆ ಸಭೆ ನಡೆಸಿದರು.