ಪಟ್ಟಣದ ಸಾವಿರಾರು ಭಕ್ತರ ಪವಿತ್ರ ಸ್ಥಳವಾಗಿರುವ ಸೋಮೇಶ್ವರ ದೇವಾಲಯದ ಪಕ್ಕದಲ್ಲಿ ಮಾಂಸ ಮಾರಾಟ ಮಾಡುವ ಅಂಗಡಿಗಳು ಇರುವುದರಿಂದ ದೇವಾಲಯದ ಪಾವಿತ್ರ್ಯತೆಗೆ ಧಕ್ಕೆ ಬರುತ್ತದೆ ಎಂದು ಹೋರಾಟಗಾರರು ತಿಳಿಸಿದರು.
ಲಕ್ಷ್ಮೇಶ್ವರ: ಇತಿಹಾಸ ಪ್ರಸಿದ್ಧ ಸೋಮೇಶ್ವರ ದೇವಾಲಯದ ಪಕ್ಕದಲ್ಲಿರುವ ಮಾಂಸ ಮಾರಾಟದ ಅಂಗಡಿಗಳನ್ನು ಸ್ಥಳಾಂತರಿಸುವಂತೆ ಪಟ್ಟಣದ ಹಿಂದೂಪರ ಸಂಘಟನೆಗಳ ಸದಸ್ಯರು ಪುರಸಭೆ ಮುಖ್ಯಾಧಿಕಾರಿ ಪರಶುರಾಮ ಗುಡದಾರಿ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ಈ ವೇಳೆ ಬಸವೇಶ ಮಹಾಂತಶೆಟ್ಟರ ಮಾತನಾಡಿ, ಹಿಂದೂಗಳ ಪವಿತ್ರ ದೇವಾಲಯಗಳ ಅನತಿ ದೂರದಲ್ಲಿ ಮಾಂಸ ಮಾರಾಟ ಮಾಡುವ ಅಂಗಡಿಗಳು ಹಾಗೂ ಕಸಾಯಿಖಾನೆಗಳಿರುವುದು ಅತ್ಯಂತ ನೋವಿನ ಸಂಗತಿ. ಪಟ್ಟಣದ ಸಾವಿರಾರು ಭಕ್ತರ ಪವಿತ್ರ ಸ್ಥಳವಾಗಿರುವ ಸೋಮೇಶ್ವರ ದೇವಾಲಯದ ಪಕ್ಕದಲ್ಲಿ ಮಾಂಸ ಮಾರಾಟ ಮಾಡುವ ಅಂಗಡಿಗಳು ಇರುವುದರಿಂದ ದೇವಾಲಯದ ಪಾವಿತ್ರ್ಯತೆಗೆ ಧಕ್ಕೆ ಬರುತ್ತದೆ. ಸಾಕಷ್ಟು ಸಾರಿ ಮಾಂಸದ ಚೀಲಗಳನ್ನು ಹಿಡಿದುಕೊಂಡು ದೇವಾಲಯದ ಆವರಣದಲ್ಲಿ ಹೋಗಿರುವ ಉದಾಹರಣೆಗಳಿವೆ. ಇನ್ನೊಂದು ತಿಂಗಳಲ್ಲಿ ದೇವಸ್ಥಾನದ ಅಕ್ಕಪಕ್ಕ ಇರುವ ಮಾಂಸ ಮಾರಾಟ ಮಾಡುವ ಅಂಗಡಿಗಳನ್ನು ಬೇರೆಡೆಗೆ ಸ್ಥಳಾಂತರ ಮಾಡಬೇಕು, ಇಲ್ಲವಾದಲ್ಲಿ ಪುರಸಭೆ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.ಈ ವೇಳೆ ಗಂಗಾಧರ ಮೆಣಸಿನಕಾಯಿ, ಚಂಬಣ್ಣ ಬಾಳಿಕಾಯಿ, ಸೋಮಣ್ಣ ಉಪನಾಳ, ಈರಣ್ಣ ಪೂಜಾರ, ವಿಜಯಕುಮಾರ ಹತ್ತಿಕಾಳ ಹಾಗೂ ಮಂಜುನಾಥ ಹೊಗೆಸೊಪ್ಪಿನ ಮಾತನಾಡಿ, ಸೋಮೇಶ್ವರ ದೇವಾಲಯದ ಪಕ್ಕದಲ್ಲಿರುವ ಇರುವ ಮಾಂಸ ಮಾರಾಟ ಮಾಡುವ ಅಂಗಡಿಗಳನ್ನು ತೆರವುಗಳಿಸಬೇಕು. ಪುರಸಭೆಗೆ ಈ ಕುರಿತು ಹಲವು ವರ್ಷಗಳಿಂದ ಹಿಂದೂಪರ ಸಂಘಟನೆಗಳು ಮನವಿ ಸಲ್ಲಿಸಿದರೂ ಅಧಿಕಾರಿಗಳು ಜಾಣ ಮೌನ ವಹಿಸಿದ್ದರ ಹಿಂದಿನ ಮರ್ಮವೇನು ಎಂದು ಪ್ರಶ್ನಿಸಿದ ಅವರು, ಶೀಘ್ರದಲ್ಲಿ ಮಾಂಸ ಮಾರಾಟ ಮಾಡುವ ಅಂಗಡಿಗಳನ್ನು ತೆರವುಗೊಳಿಸಬೇಕು. ಇಲ್ಲವಾದಲ್ಲಿ ಹೋರಾಟಕ್ಕೆ ನಾವು ಸಿದ್ದರಾಗಿದ್ದೇವೆ ಎಂದರು.
ಪುರಸಭೆ ಮುಖ್ಯಾಧಿಕಾರಿ ಪರಶುರಾಮ ಗುಡದಾರಿ ಮನವಿ ಸ್ವೀಕರಿಸಿ ಮಾತನಾಡಿ, ಪುರಸಭೆಯ ಆಡಳಿತಾಧಿಕಾರಿ, ಉಪವಿಭಾಗಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಗಮನಕ್ಕೆ ತಂದು ಅಂಗಡಿಗಳ ತೆರವುಗೊಳಿಸುವ ಕಾರ್ಯ ಮಾಡಲಾಗುವುದು ಎಂದರು.ಈ ವೇಳೆ ಕುಬೇರಪ್ಪ ಮಹಾಂತಶೆಟ್ಟರ, ಬಸವರಾಜ ಚಕ್ರಸಾಲಿ, ದುಂಡೇಶ ಕೊಟಗಿ, ರಾಜು ಅಂದಲಗಿ, ಬಸವರಾಜ ಕುಂಬಾರ, ಗುರುರಾಜ ಪಾಟೀಲ ಕುಲಕರ್ಣಿ, ಪುಂಡಲೀಕ ಲಮಾಣಿ, ಶಿವಣ್ಣ ಲಮಾಣಿ, ಥಾವರೆಪ್ಪ ಲಮಾಣಿ, ಉಳವೇಶ ಪಾಟೀಲ, ವಿಶಾಲ ಬಟಗುರ್ಕಿ, ಪ್ರಕಾಶ ಪ್ರವೀಣ ಬೋಮಲೆ, ನಾಗಪ್ಪ ಮುಳಗುಂದ, ಶಕ್ತಿ ಕತ್ತಿ, ಮಹಾದೇವಪ್ಪ ಅಣ್ಣಿಗೇರಿ, ವೀರೇಶ ಸಾಸಲವಾಡ, ರಮೇಶ ಹಾಳತೋಟದ, ಸಂತೋಷ ಜಾವೂರ, ಗಿರೀಶ ಚೌರೆಡ್ಡಿ, ಸುಮಂಗಲಾ ಕುಂಬಾರ, ಗೀತಾ ಬಡಿಗೇರ, ಶೋಭಾ ಇಟಗಿ ಇದ್ದರು.