ಘಟಪ್ರಭಾದಿಂದ ಕುಷ್ಟಗಿಯವರೆಗೆ ನರಗುಂದ ಮಾರ್ಗವಾಗಿ ಹೊಸ ರೈಲ್ವೆ ಮಾರ್ಗ ಪ್ರಾರಂಭಿಸಬೇಕು.

ನರಗುಂದ: ನರಗುಂದ ಪಟ್ಟಣಕ್ಕೆ ಹೊಸ ರೈಲ್ವೆ ಮಾರ್ಗ ಪ್ರಾರಂಭಿಸಬೇಕೆಂದು ದಿ. ಜಗನ್ನಾಥರಾವ್ ಜೋಶಿ ಹಾಗೂ ಎಫ್.ಎಂ. ಹಸಬಿ ರೈಲ್ವೆ ಹೋರಾಟ ಸಮಿತಿಯ ಪದಾಧಿಕಾರಿಗಳು ಕೇಂದ್ರ ರಾಜ್ಯ ರೈಲ್ವೆ ಸಚಿವ ವಿ. ಸೋಮಣ್ಣ ಅವರಿಗೆ ಮನವಿ ಸಲ್ಲಿಸಿದರು.

ಶುಕ್ರವಾರ ಪಟ್ಟಣದ ಶಾಸಕ ಸಿ.ಸಿ. ಪಾಟೀಲರ ನಿವಾಸಕ್ಕೆ ಭೇಟಿ ನೀಡಿದ್ದ ರೈಲ್ವೆ ಸಚಿವ ವಿ. ಸೋಮಣ್ಣ ಅವರಿಗೆ ಮನವಿ ನೀಡಿದ ರೈಲ್ವೆ ಹೋರಾಟ ಸಮಿತಿ ಪದಾಧಿಕಾರಿಗಳು ಮಾತನಾಡಿ, ಘಟಪ್ರಭಾದಿಂದ ಕುಷ್ಟಗಿಯವರೆಗೆ ನರಗುಂದ ಮಾರ್ಗವಾಗಿ ಹೊಸ ರೈಲ್ವೆ ಮಾರ್ಗ ಪ್ರಾರಂಭಿಸಬೇಕು. ಸದ್ಯ ನರಗುಂದ ಆರ್ಥಿಕವಾಗಿ ಈ ಭಾಗದಲ್ಲಿ ವೇಗವಾಗಿ ಬೆಳೆಯುತ್ತಿರುವ ಪಟ್ಟಣವಾಗಿದೆ. ಮೇಲಾಗಿ ಈ ಭಾಗದ ರೈತರು ಬೆಳದೆ ದವಸ ಧಾನ್ಯಗಳನ್ನು ರೈಲ್ವೆ ಮೂಲಕ ಬೇರೆ ಕಡೆ ಸಾಗಾಣಿಕೆ ಮಾಡಲು ಅನುಕೂಲವಾಗುವುದು ಎಂದರು.

ಈ ಭಾಗದಲ್ಲಿರುವ ಸವದತ್ತಿ ಯಲ್ಲಮ್ಮದೇವಿ, ಗೊಡಚಿ ವೀರಭದ್ರಶ್ವರ, ರೋಣ ತಾಲೂಕಿನ ಇಟಗಿ ಭೀಮಾಂಬಿಕಾದೇವಿ ದೇವಸ್ಥಾನಕ್ಕೆ ಪ್ರತಿವರ್ಷ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಈ ಭಕ್ತರಿಗೆ ರೈಲ್ವೆಯಿಂದ ಅನುಕೂಲವಾಗುವುದು. ಈ ಭಾಗದ ವಿದ್ಯಾರ್ಥಿಗಳು ಬೇರೆ ಪಟ್ಟಣಕ್ಕೆ ಹೋಗಿ ಶಿಕ್ಷಣ ಕಲಿಯಲು ಅನುಕೂಲವಾಗುತ್ತದೆ. ಆದ್ದರಿಂದ ಕೇಂದ್ರ ಸಚಿವ ವಿ. ಸೋಮಣ್ಣ ಅವರು ಹಾಗೂ ನರಗುಂದ ಕ್ಷೇತ್ರದ ಶಾಸಕ ಸಿ.ಸಿ. ಪಾಟೀಲ ಅವರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಿ ಯೋಜನೆ ಪ್ರಾರಂಭಿಸಬೇಕೆಂದು ಆಗ್ರಹಿಸಿದರು.

ಸಚಿವ ವಿ ಸೋಮಣ್ಣ ಅವರು ಹೋರಾಟಗಾರರ ಮನವಿ ಸ್ವೀಕರಿಸಿ, ಯೋಜನೆ ಜಾರಿ ಮಾಡಲು ಪ್ರಯತ್ನ ಮಾಡುತ್ತೇನೆಂದು ಭರವಸೆ ನೀಡಿದರು.

ಇದೇ ಸಂದರ್ಭದಲ್ಲಿ ಕೇಂದ್ರ ಖಾತೆ ರಾಜ್ಯ ರೈಲ್ವೆ ಸಚಿವ ವಿ. ಸೋಮಣ್ಣ ಅವರನ್ನು ಸನ್ಮಾನಿಸಲಾಯಿತು. ರೈಲ್ವೆ ಹೋರಾಟ ಸಮಿತಿಯ ಅಧ್ಯಕ್ಷ ಚನ್ನಬಸಪ್ಪ ನಂದಿ, ಉಪಾಧ್ಯಕ್ಷ ರಾಘವೇಂದ್ರ ಗುಜಮಾಗಡಿ, ಜಿ.ಆರ್. ಕದಂ, ಪ್ರಧಾನ ಕಾರ್ಯದರ್ಶಿ ಮಾರುತಿ ಭೋಸಲೆ, ಸೀಮಣ್ಣ ಗೋವೇಶ್ವರ, ಶಿವಪುತ್ರಪ್ಪ ಹುಂಬಿ, ಶಿವಪ್ಪ ಬೋಳಶೆಟ್ಟಿ, ವಾಸು ಜೋಗಣ್ಣವರ, ನಂದೀಶ ಮಠದ, ಮನೋಹರ ಹುಯಿಲಗೋಳ, ಬಸಣ್ಣ ಗೋವೇಶ್ವರ, ವಾಸುರೆಡ್ಡಿ ಹೆಬ್ಬಾಳ, ಎಸ್.ಆರ್. ಪಾಟೀಲ, ಚಂದ್ರು ದಂಡಿನ, ಉಮೇಶಗೌಡ ಪಾಟೀಲ, ಮಂಜುನಾಥ ದೊಡಮನಿ, ಎಂ.ಎಂ. ಖಾಜಿ ಮುಂತಾದವರು ಇದ್ದರು.