ರಾಜ್ಯ ಸರ್ಕಾರದ ಆಯ-ವ್ಯಯ ಖಂಡಿಕೆ 111(ಐ)ರ ಅನ್ವಯ ಪೂರ್ವ ಪ್ರಾಥಮಿಕ ಶಿಕ್ಷಣ ಬಲಪಡಿಸಲು ಎಲ್‌ಜಿ, ಯುಕೆಜಿ ತರಗತಿಗಳನ್ನು ಪ್ರಾರಂಭಿಸುವಂತೆ ಸೂಚನೆ ನೀಡಿದೆ

ಹನುಮಸಾಗರ: ಗ್ರಾಮದ ಕೆಪಿಎಸ್ ಸರ್ಕಾರಿ ಉನ್ನತೀಕರಿಸಿದ ಉರ್ದು ಪ್ರೌಢಶಾಲೆಯಲ್ಲಿ 2025-26ನೇ ಶೈಕ್ಷಣಿಕ ಸಾಲಿನಲ್ಲಿ ಜಿಲ್ಲೆಯಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ತರಗತಿಗಳನ್ನು ಒಂದೇ ವೇಳೆ ಪ್ರಾರಂಭಿಸುವಂತೆ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ನಾಮನಿರ್ದೇಶಿತ ಸದಸ್ಯ ಮೊಹ್ಮದ್ ನಜೀರಸಾಬ ಮೂಲಿಮನಿ ಅವರ ನೇತೃತ್ವದಲ್ಲಿ ಡಿಡಿಪಿಐ ಸೋಮಶೇಖರ ಗೌಡ ಅವರಿಗೆ ಗುರುವಾರ ಮನವಿ ಸಲ್ಲಿಸಲಾಯಿತು.

ನಜೀರಸಾಬ ಮೂಲಿಮನಿ ಮಾತನಾಡಿ, ರಾಜ್ಯ ಸರ್ಕಾರದ ಆಯ-ವ್ಯಯ ಖಂಡಿಕೆ 111(ಐ)ರ ಅನ್ವಯ ಪೂರ್ವ ಪ್ರಾಥಮಿಕ ಶಿಕ್ಷಣ ಬಲಪಡಿಸಲು ಎಲ್‌ಜಿ, ಯುಕೆಜಿ ತರಗತಿಗಳನ್ನು ಪ್ರಾರಂಭಿಸುವಂತೆ ಸೂಚನೆ ನೀಡಿದೆ. ಆದರೆ ಜಿಲ್ಲೆಯಲ್ಲಿ ಕೇವಲ ಎಲ್‌ಕೆಜಿ ಮಾತ್ರ ಆರಂಭಿಸುವ ಕ್ರಮ ಕೈಗೆತ್ತಿಕೊಳ್ಳಲಾಗಿದೆ ಎಂಬ ವಿಷಯವನ್ನು ಮನವಿಯಲ್ಲಿ ಉಲ್ಲೇಖಿಸಿ, ಯುಕೆಜಿಯನ್ನೂ ಸಮಕಾಲದಲ್ಲಿ ಆರಂಭಿಸಿದರೆ ವಿದ್ಯಾರ್ಥಿಗಳ ಭವಿಷ್ಯಕ್ಕೆ ಅನುಕೂಲವಾಗುವ ಜತೆಗೆ 1ನೇ ತರಗತಿಯಲ್ಲಿನ ಪ್ರವೇಶ ಸಂಖ್ಯೆ ಕುಗ್ಗುವ ಸಾಧ್ಯತೆಯೂ ತಪ್ಪುತ್ತದೆ ಎಂದರು.

ಗ್ರಾಮದ ಪ್ರಮುಖರು ಮಾತನಾಡಿ, ಹನುಮಸಾಗರದ ಉರ್ದು ಹಿರಿಯ ಪ್ರಾಥಮಿಕ ಶಾಲೆಗೆ ಈಗಾಗಲೇ ಎಲ್‌ಕೆಜಿ ಮಂಜೂರಾಗಿದ್ದು, ಯುಕೆಜಿಗೂ ಮಕ್ಕಳ ದಾಖಲೆ ಇರುವುದರಿಂದ ಅದರ ಆರ್ಥಿಕ ಹೊಣೆಗಾರಿಕೆಯನ್ನು ಎಸ್‌ಡಿಎಂಸಿ ಮತ್ತು ಸ್ಥಳೀಯ ಸಮುದಾಯ ಭರಿಸಲು ಸಿದ್ಧವಿದೆ ಎಂದು ಮನವಿಯಲ್ಲಿ ಸ್ಪಷ್ಟಪಡಿಸಲಾಗಿದೆ. ಎಲ್‌ಕೆಜಿಗೆ ನಿಯೋಜಿಸಿರುವ ಅತಿಥಿ ಶಿಕ್ಷಕಿ ಮತ್ತು ಸಹಾಯಕಿಯ ನೆರವಿನಿಂದ ಯುಕೆಜಿಯನ್ನೂ ಸುಗಮವಾಗಿ ನಡೆಸಬಹುದು ಎಂದು ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿ ಡಿಡಿಪಿ ಸೋಮಶೇಖರ ಗೌಡ ಅವರು, 20ಕ್ಕಿಂತ ಹೆಚ್ಚು ಮಕ್ಕಳ ಹಾಜರಾತಿ ಇದ್ದರೆ ಇದೇ ಶೈಕ್ಷಣಿಕ ವರ್ಷದಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ತರಗತಿಗಳನ್ನು ಪ್ರಾರಂಭಿಸಲಾಗುವುದು ಎಂದರು.

ಪ್ರಮುಖರಾದ ಬಿ.ಎಂ. ಸವದತ್ತಿ, ಡಯಟ್ ಹಿರಿಯ ಉಪನ್ಯಾಸ ಇಕ್ಬಾಲ್ ಡಾಲಾಯತ, ಲಂಕಪ್ಪ ವಾಲಿಕಾರ, ಅಮರೇಶ ತಮ್ಮಣ್ಣವರ, ಕಿಶನರಾವ್‌ ಕುಲಕರ್ಣಿ, ರಾಮಚಂದ್ರ ಬಡಿಗೇರ, ತಬಸ್ಸುಮ್, ಸಿರಾಜ ಚಳಗೇರಿ, ಹಾಸನಸಾಬ ಮೂಲಿಮನಿ, ನಾಗರಾಜ ಇತರರು ಇದ್ದರು.