ನರಗುಂದ: ಪಟ್ಟಣದ ವೀರರಾಣಿ ಕಿತ್ತೂರು ಚೆನ್ನಮ್ಮ ಮಾಲಕರ ವ ಚಾಲಕರ ಟ್ಯಾಕ್ಸಿ ಸ್ಟ್ಯಾಂಡ್ ಸಂಘದಿಂದ ವೈಟ್ ಬೋರ್ಡ್ ವಾಹನಗಳನ್ನು ಬಾಡಿಗೆ ವಾಹನಗಳನ್ನಾಗಿ ಓಡಿಸುವುದನ್ನು ಕೂಡಲೇ ಬಂದ್ ಮಾಡಿಸಬೇಕು ಎಂದು ಆಗ್ರಹಿಸಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ, ಜಿಲ್ಲಾ ಸಾರಿಗೆ ಆಯುಕ್ತರು, ತಹಸೀಲ್ದಾರರು, ಕ್ಷೇತ್ರ ಶಿಕ್ಷಣಾಧಿಕಾರಿ, ಪೋಲಿಸ್ ಠಾಣೆ ಸೇರಿದಂತೆ ವಿವಿಧ ಇಲಾಖೆಗಳಿಗೆ ಮನವಿ ಸಲ್ಲಿಸಲಾಯಿತು.ಇದೇ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಶರಣಪ್ಪ ಹೂಗಾರ ಮಾತನಾಡಿ, ಅನೇಕ ವರ್ಷಗಳಿಂದ ಬಿಳಿ ಬೋರ್ಡ್ ವಾಹನವನ್ನು ಪ್ಯಾಸೆಂಜರ್ ಬಾಡಿಗೆ ವಾಹನಗಳನ್ನಾಗಿ ಓಡಿಸಲಾಗುತ್ತಿದೆ. ವೈಟ್ ಬೋರ್ಡ್ ವಾಹನದ ಮಾಲೀಕರು ರಸ್ತೆ ತೆರಿಗೆ, ವಿಮೆ, ಜಿಪಿಎಸ್ ಪ್ಯಾನಿಕ್ ಬಟನ್ ಹಾಗೂ ಪರ್ಮಿಟ್‌ಗಾಗಿ ಹಣ ಕಟ್ಟದೆ ಸರ್ಕಾರಕ್ಕೆ ವಂಚನೆ ಮಾಡುತ್ತ ಹಾಗೂ ಟ್ರಾಕ್ಸಿ ಪರ್ಮಿಟ್ ವಾಹನದ ಮಾಲೀಕರಿಗೂ ವಂಚನೆ ಮಾಡುತ್ತ ಬಾಡಿಗೆ ನಡೆಸುತ್ತಿದ್ದಾರೆ. ಆದ್ದರಿಂದ ಟ್ಯಾಕ್ಸಿ ಪರ್ಮಿಟ್ ವಾಹನದ ಮಾಲೀಕರಿಗೆ ಆಗುತ್ತಿರುವ ತೊಂದರೆಗಳನ್ನು ಕೂಡಲೇ ಸರಿಪಡಿಸಬೇಕು ಎಂದು ಅಧಿಕಾರಿಗಳಗೆ ಒತ್ತಾಯಿಸಿದರು.
ಕಾರ್ಯದರ್ಶಿ ಬಸವರಾಜ ಬಿಜಾಪುರ ಮಾತನಾಡಿ, ಹಳದಿ ಬೋರ್ಡ್ ಮಾಲೀಕರು ಟ್ಯಾಕ್ಸ್ ಪರ್ಮಿಟ್ ಹಾಗೂ ಜಿಪಿಎಸ್ ಪ್ಯಾನಿಕ್ ಬಟನ್ ಹಾಗೂ ವಿಮಾ ಎಲ್ಲ ಸೇರಿ ಸರ್ಕಾರಕ್ಕೆ ವರ್ಷಕ್ಕೆ ₹60,000ದಿಂದ ₹70,000ರ ವರೆಗೆ ಹಣ ಪಾವತಿಸುತ್ತಾರೆ. ಬಾಡಿಗೆ ಮಾತ್ರ ವೈಟ್ ಬೋರ್ಡ್ ವಾಹನಗಳ ಮಾಲೀಕರು ಪಡೆಯುತ್ತಿದ್ದಾರೆ. ಹಳದಿ ಬೋರ್ಡ್ ವಾಹನ ಮಾಲೀಕರಿಗೆ ಬಾಡಿಗೆ ಇಲ್ಲದ ಕಾರಣದಿಂದ ಮನೆಯಲ್ಲಿ ಕೂರುವ ಪರಸ್ಥಿತಿ ಬಂದಿದೆ. 15 ದಿನಗಳ ಒಳಗಾಗಿ ಬಿಳಿಯ ಬೋರ್ಡ್ ವಾಹನದ ಮಾಲೀಕರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳದಿದ್ದರೆ ನಾವು ರಸ್ತೆಯ ಮೇಲೆ ಕುಳಿತು ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು. ಟ್ಯಾಕ್ಸಿ ಸ್ಟ್ಯಾಂಡ್ ಸಂಘದವರ ಮನವಿ ಸ್ವೀಕರಿಸಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಿಪಿಐ ಮಂಜುನಾಥ ನಡುವಿನಮನಿ ಹೇಳಿದರು.ಈ ಸಂದರ್ಭದಲ್ಲಿ ಈರಣ್ಣ ವಡ್ಡಿಗೇರಿ, ಮಂಜುನಾಥ ಲಂಗೆಣ್ಣವರ, ಅಣ್ಣಪ್ಪ ಅಂಬಣ್ಣವರ, ರಾಮು ಸಣ್ಣಗೌಡ್ರ, ಮಂಜು ನಾಗನೂರ, ನಾಗರಾಜ ತಡಸಿ, ಮುತ್ತಣ್ಣ ಕೊಳ್ಳಿಯವರ, ಎಚ್.ಎಂ. ಪಾಣಿಗಟ್ಟಿ, ಉಮೇಶ ತಡಸಿ, ವಿಜಯ ಗಡ್ಡದೇವರಮಠ, ಹನುಮಂತ ಅಬ್ಬಿಗೇರಿ, ಶಶಿಧರ ಸಾತಿಹಾಳ, ಮಂಜುನಾಥ ಭೋವಿ, ಸಿಖಂದರ ನವಲಗುಂದ, ಲಿಂಗಯ್ಯ ಪತ್ರಿ, ಶೇಖರ ಗಡೇಕಾರ, ರಾಮು ನರಗುಂದ, ಶ್ರೀಕಾಂತ ಜೋಗಿ, ಇತರರಿದ್ದರು.