ಸೀತೂರು ಕೃಷಿ ಸಂಘ ಚುನಾವಣೆಗೆ ಬೆಂಬಲಿಸಲು ಮನವಿ: ಯಡಗೆರೆ ಸುಬ್ರಮಣ್ಯ

| Published : Jan 15 2025, 12:47 AM IST

ಸೀತೂರು ಕೃಷಿ ಸಂಘ ಚುನಾವಣೆಗೆ ಬೆಂಬಲಿಸಲು ಮನವಿ: ಯಡಗೆರೆ ಸುಬ್ರಮಣ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಕೃಷಿ ಗ್ರಾಮೀಣ ಸಹಕಾರ ಸಂಘದ ಆಡಳಿತ ಮಂಡಳಿಯ ಚುನಾವಣೆಯು ಜ.19 ರಂದು ನಡೆಯಲಿದ್ದು ಸಹಕಾರಿ ಭಾರತಿ ನೇತ್ರತ್ವದಲ್ಲಿ ಸ್ಪರ್ಧಿಸಿರುವ 11 ಅಭ್ಯರ್ಥಿಗಳ ತಂಡವನ್ನು ಗೆಲ್ಲಿಸಬೇಕು ಎಂದು ರಾಜ್ಯ ಸಹಕಾರಿ ಭಾರತಿ ಉಪಾಧ್ಯಕ್ಷ ಯಡಗೆರೆ ಸುಬ್ರಮಣ್ಯ ಸದಸ್ಯರಿಗೆ ಮನವಿ ಮಾಡಿದರು. ನರಸಿಂಹರಾಜಪುರದಲ್ಲಿ ಯೋಜನೆಗಳ ಕಾರ್ಯಸೂಚಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.

ಚುನಾವಣಾ ಪ್ರಣಾಳಿಕೆ ಬಿಡುಗಡೆ । ಸಹಕಾರಿ ಭಾರತಿಯ 11 ಮಂದಿ ಗೆಲ್ಲಿಸುವಂತೆ ಕೋರಿಕೆ । ಜ.19ರಂದು ನಡೆಯಲಿರುವ ಚುನಾವಣೆ

ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ

ಸೀತೂರು ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ಆಡಳಿತ ಮಂಡಳಿಯ ಚುನಾವಣೆಯು ಜ.19 ರಂದು ನಡೆಯಲಿದ್ದು ಸಹಕಾರಿ ಭಾರತಿ ನೇತ್ರತ್ವದಲ್ಲಿ ಸ್ಪರ್ಧಿಸಿರುವ 11 ಅಭ್ಯರ್ಥಿಗಳ ತಂಡವನ್ನು ಗೆಲ್ಲಿಸಬೇಕು ಎಂದು ರಾಜ್ಯ ಸಹಕಾರಿ ಭಾರತಿ ಉಪಾಧ್ಯಕ್ಷ ಯಡಗೆರೆ ಸುಬ್ರಮಣ್ಯ ಸದಸ್ಯರಿಗೆ ಮನವಿ ಮಾಡಿದರು.

ಕಮಲಾಪುರ ಗ್ರಾಮದ ಯಡಗೆರೆಯಲ್ಲಿ ಮಂಗಳವಾರ ಸೀತೂರು ವಿ.ಎಸ್‌.ಎಸ್‌ನ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಗೆದ್ದರೆ ಅನುಷ್ಠಾನಗೊಳಿಸುವ ಯೋಜನೆಗಳ ಕಾರ್ಯಸೂಚಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಸಹಕಾರಿ ಭಾರತಿಯು ಎಲ್ಲರಿಗಾಗಿ ನಾನು, ನನಗಾಗಿ ಎಲ್ಲರೂ ಎಂಬ ಸಹಕಾರ ಮೂಲ ತತ್ವಕ್ಕೆ ಅನುಗುಣವಾಗಿ ಸಂಘದ ಸದಸ್ಯರ ಆಶೋತ್ತರಗಳ ಈಡೇರಿಕೆಗಾಗಿ ಶ್ರಮಿಸುತ್ತಿದೆ. ಈ ಮಹತ್ವಪೂರ್ಣ ಪ್ರಯಾಣದಲ್ಲಿ ಸದಸ್ಯರ ಸಹ ಭಾಗಿತ್ವ ಹಾಗೂ ಸಹಕಾರವನ್ನು ಸದಾ ನೆನೆಯುತ್ತಿದೆ ಎಂದು ಹೇಳಿದರು.

ಸಹಕಾರಿ ಭಾರತಿಯು ಸಹಕಾರ ವ್ಯವಸ್ಥೆಯ ಶುದ್ಧೀಕರಣದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದು ಯಾವುದೇ ರೂಪದಲ್ಲಿ ಭ್ರಷ್ಟಾಚಾರ ಮತ್ತು ಭೇದ ಭಾವವಿಲ್ಲದೆ ಸದಸ್ಯರಿಗೆ ಸೇವೆ ನೀಡುತ್ತಿದೆ. ಸಹಕಾರ ಭಾರತಿಯು ಸ್ವಯಂ ಸೇವಾ ಸಂಸ್ಥೆಯಾಗಿರುತ್ತದೆ. ಜ.19 ರಂದು ಸೀತೂರು ಸಹಕಾರ ಸಂಘದ ಆಡಳಿತ ಮಂಡಳಿಯ 11 ಸದಸ್ಯರಿಗಾಗಿ ಚುನಾವಣೆ ನಡೆಯುತ್ತಿದೆ. ಒಬ್ಬ ಸದಸ್ಯರು ಈಗಾಗಲೇ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಹಕಾರಿ ಭಾರತಿ ನೇತ್ರತ್ವದ 11 ಸದಸ್ಯರು ಚುನಾವಣೆ ಕಣದಲ್ಲಿದ್ದಾರೆ. ಕಳೆದ 25 ವರ್ಷಗಳಲ್ಲಿ ನಾನು ಸೀತೂರು ಸಹಕಾರ ಸಂಘದ ಅಧ್ಯಕ್ಷನಾಗಿ ಸದಸ್ಯರು ಸದಾ ನೆನಪಿನಲ್ಲಿ ಉಳಿಯುವಂತೆ ಸಾಧನೆ ಮಾಡಿದ್ದೇನೆ ಎಂದರು.

ಸೀತೂರು ಸಹಕಾರ ಸಂಘದಲ್ಲಿ ಅಡಿಕೆ ಸಂಸ್ಕರಣಾ ಘಟಕ ಪ್ರಾರಂಭಿಸಲಾಗಿದ್ದು ವ್ಯವಸ್ಥಿತವಾಗಿ ಅದನ್ನು ಮುಂದುವರಿಸಿದ್ದೇವೆ.ಸೀತೂರು, ಬೆಳ್ಳೂರು, ಬಿ.ಎಚ್.ಕೈಮರ ಹಾಗೂ ಮೂಡಬಾಗಿಲು ಶಾಖೆಯಲ್ಲಿ ಮಿನಿ ಸೂಪರ್‌ ಬಜಾರ್ ಪ್ರಾರಂಭಿಸಿದ್ದೇವೆ.ಸಂಸ್ಥೆಯ ಹೆಸರಿನಲ್ಲಿ ಸ್ವಂತ ಗೊಬ್ಬರ ತಯಾರಿಸಿ ಮಾರುಕಟ್ಟೆಗೆ ಬಿಟ್ಟಿದ್ದೇವೆ ಎಂದರು.

ಸಹಕಾರಿ ಭಾರತಿ ನೇತ್ಪತ್ವದ ತಂಡವನ್ನು ಗೆಲ್ಲಿಸಿದರೆ ಮುಂದೆ ಸಹಕಾರಿ ಬಂಡವಾಳವನ್ನು ಹೆಚ್ಚಿಸಲಿದ್ದೇವೆ. ಸಹಕಾರ ಸಂಘಗಳಿಗೆ ಕೇಂದ್ರ ಸರ್ಕಾರದ ಸಹಕಾರ ಮಂತ್ರಾಲಯ ಅನುಷ್ಠಾನಗೊಳಿಸಲಿರುವ ಯೋಜನೆಗಳನ್ನು ಅಳಡಿಸಿಕೊಳ್ಳಲು ಪ್ರಯತ್ನಿಸುತ್ತೇವೆ. ಸದಸ್ಯರು ಬೆಳೆದ ಅಡಿಕೆ, ಕಾಫಿ, ಕಾಳು ಮೆಣಸು ಮಾರಾಟ ಮಾಡುವ ಬಗ್ಗೆ ಅವಕಾಶ ನೀಡುತ್ತೇವೆ. ಅಲ್ಲದೆ ಅಡಿಕೆ, ಕಾಳುಮೆಣಸು, ಕಾಫಿ ಬೆಳೆಗಳ ಬಗ್ಗೆ ತಜ್ಞರಿಂದ ಸದಸ್ಯರಿಗೆ ಮಾಹಿತಿ ಒದಗಿಸುತ್ತೇವೆ. ಹಲಸಿನ ಬೆಳೆಯ ಮೌಲ್ಯವರ್ಧನೆಗೆ ಶ್ರಮಿಸಿ ಸೂಕ್ತ ಮಾರುಕಟ್ಟೆ ಒದಗಿಸುತ್ತೇವೆ ಎಂದರು.

ಸಹಕಾರಿ ಭಾರತಿ ನೇತ್ರತ್ವದ ತಂಡದ ಅಭ್ಯರ್ಥಿಗಳಾದ ಉಪೇಂದ್ರರಾವ್‌, ಎಂ.ಎಸ್.ಗೀತಾ,ಕೆ.ಎಂ.ಜಗದೀಶ್, ಜಿ.ಕೆ.ಜಯರಾಮ್‌, ಎಚ್‌.ಎಚ್.ನಾರಾಯಣ, ಬೆಮ್ಮನೆ ಮೋಹನ್‌, ಕೆ.ಜಿ.ರಮೇಶ್, ವೈ.ವಿ.ಲೋಲಾಕ್ಷಿ, ಎಚ್‌.ಎನ್‌.ಸತೀಶ್‌, ಎಚ್.ವಿ.ಸಂದೀಪ್‌ ಕುಮಾರ್‌, ಸುಧಾಕರ, ಬಿಜೆಪಿ ಪಕ್ಷದ ಮುಖಂಡರಾದ ಜಯಶ್ರೀ ಮೋಹನ್‌, ಎಚ್.ಜಿ.ದಿವಾಕರ, ಖಂಡಕ ಉಮೇಶ್, ಮೂಡ್ಲಿ ಶ್ರೀಧರ್, ಯಡಗೆರೆ ವೆಂಕರಮಣ, ಕೈಮರ ಸುಬ್ಬಣ್ಣ, ಮಾವಿನ ಮನೆ ಮಂಜುನಾಥ್‌, ಕೆ.ಎಸ್.ಹರೀಶ್‌, ಕುಣುಜ ಶ್ರೀನಿವಾಸ್ ಮತ್ತಿತರರು ಇದ್ದರು.