ಮತಾಂತರ ತಡೆಗೆ ಕಠಿಣ ಕ್ರಮಕ್ಕೆ ಆಗ್ರಹಿಸಿ ತಹಸೀಲ್ದಾರರಿಗೆ ಮನವಿ

| Published : Nov 22 2025, 02:30 AM IST

ಮತಾಂತರ ತಡೆಗೆ ಕಠಿಣ ಕ್ರಮಕ್ಕೆ ಆಗ್ರಹಿಸಿ ತಹಸೀಲ್ದಾರರಿಗೆ ಮನವಿ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲಾದ್ಯಂತ ಹಿಂದುಗಳನ್ನು ಬಲವಂತದಿಂದ ಮುಸ್ಲಿಮರು, ಕ್ರೈಸ್ತ ಮಿಷನರಿಗಳು ನಾನಾ ಆಮಿಷಗಳನ್ನು ಒಡ್ಡಿ ಮತಾಂತರ ಮಾಡಿಸುತ್ತಿದ್ದಾರೆ.

ಶಿರಹಟ್ಟಿ: ತಾಲೂಕು ಮತ್ತು ಜಿಲ್ಲೆಯಲ್ಲಿ ಮತಾಂತರ ಮಾಡಿಸುವ ಹುನ್ನಾರ ನಿರಂತರವಾಗಿ ನಡೆಯುತ್ತಿದ್ದು, ಇದರ ವಿರುದ್ಧ ಕಠಿಣ ಕಾನೂನು ಜಾರಿಗೆ ತರಬೇಕು ಎಂದು ಒತ್ತಾಯಿಸಿ ರಾಜ್ಯ ಹಿಂದುಪರ ಸಂಘಟನೆಗಳ ಒಕ್ಕೂಟದ ತಾಲೂಕು ಸಂಚಾಲಕ ಸಂತೋಷ ಕುರಿ ನೇತೃತ್ವದಲ್ಲಿ ತಹಸೀಲ್ದಾರ್‌ ಮೂಲಕ ಮನವಿ ಸಲ್ಲಿಸಲಾಯಿತು.

ಈ ವೇಳೆ ಸಂತೋಷ ಕುರಿ ಮಾತನಾಡಿ, ಜಿಲ್ಲಾದ್ಯಂತ ಹಿಂದುಗಳನ್ನು ಬಲವಂತದಿಂದ ಮುಸ್ಲಿಮರು, ಕ್ರೈಸ್ತ ಮಿಷನರಿಗಳು ನಾನಾ ಆಮಿಷಗಳನ್ನು ಒಡ್ಡಿ ಮತಾಂತರ ಮಾಡಿಸುತ್ತಿದ್ದಾರೆ. ಕಳೆದ ಕೆಲ ತಿಂಗಳ ಹಿಂದೆ ಗದುಗಿನ ಗಾಂಧಿ ನಗರದಲ್ಲಿನ ವಿಶಾಲ ಕೃಷ್ಣಪ್ಪ ಗೋಕಾವಿ ಎಂಬ ಯುವಕನನ್ನು ಪ್ರೀತಿಯ ಬಲೆಯಲ್ಲಿ ಬೀಳಿಸಿದ ಮುಸ್ಲಿಂ ಯುವತಿ ಮತಾಂತರಗೊಳಿಸಿ ಲವ್ ಜಿಹಾದ್ ನಡೆಸಿದ್ದಾಳೆ ಎಂದು ಆರೋಪಿಸಿದರು.

ಲಕ್ಷ್ಮೇಶ್ವರದ ಹಿಂದೂ ಯುವತಿಯನ್ನು ಮುಸ್ಲಿಂ ಯುವಕ ಪುಸಲಾಯಿಸಿ ಮತಾಂತರಗೊಳಿಸಿ ಲವ್ ಜಿಹಾದ್ ನಡೆಸಿದ್ದಾನೆ. ಯುವತಿಯ ತಂದೆ- ತಾಯಿಗಳು ನಿತ್ಯ ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ. ಈ ಘಟನೆ ಮಾಸುವ ಮುನ್ನವೇ ಲಕ್ಷ್ಮೇಶ್ವರದ ಅಪ್ರಾಪ್ತನನ್ನು ಅದೇ ಪಟ್ಟಣದಲ್ಲಿ ಚಹಾದ ಅಂಗಡಿ ನಡೆಸುತ್ತಿರುವ ಸುಹೇಲ್ ಅಬ್ದುಲ್‌ ಅಜೀಜ ರಿತ್ತಿ ಎಂಬಾತ ಬೆದರಿಸಿ ಮತಾಂತರಕ್ಕೆ ಯತ್ನಿಸಿ ತಮ್ಮ ಹೋಟೆಲ್‌ನಲ್ಲಿ ಕೆಲಸಕ್ಕೆ ಸೇರಿಸಿಕೊಂಡಿದ್ದಾರೆ ಎಂದು ದೂರಿದರು.

ಲವ್ ಜಿಹಾದ್ ಮತ್ತು ಮತಾಂತರದ ಮೂಲಕ ಹಿಂದುಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ತಡೆಗಟ್ಟಲು ಕಠಿಣ ಕಾನೂನು ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು. ನಂತರ ಶಿರಸ್ತೇದಾರರಾದ ಗಿರಿಜಾ ಪೂಜಾರ ಅವರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಗೂಳಪ್ಪ ಕರಿಗಾರ, ಪರಶುರಾಮ ಡೊಂಕಬಳ್ಳಿ, ರಮೆಶ ಬಟ್ಟೂರ, ಬೀರೇಶ ಬಟ್ಟೂರ, ಕಾರ್ತಿಕ, ಸಂತೋಷ ಕಂಬಳಿ, ಮಾರುತಿ ಕುಳಗೇರಿ, ಮಲ್ಲಪ್ಪ, ನಾಗರಾಜ, ಮುತ್ತು, ಲೋಕೇಶ, ಪ್ರಶಾಂತ, ಆತ್ಮನಂದ ಇತರರು ಇದ್ದರು.