ಹಾನಗಲ್ಲ: ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಮುಸ್ಲಿಂ ಸಮುದಾಯದ ಬಗೆಗೆ ಅವಹೇಳನಕಾರಿಯಾಗಿ ಆಡಿದ ಮಾತುಗಳನ್ನು ವಿರೋಧಿಸಿ ಹಾನಗಲ್ಲಿನಲ್ಲಿನ ಕರ್ನಾಟಕ ಮುಲ್ಲಾ ಅಸೋಸಿಯೇಶನ್ ಹಾನಗಲ್ಲ ತಾಲೂಕು ಘಟಕ ತಹಸೀಲ್ದಾರ್ ಮೂಲಕ ರಾಜ್ಯದ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದೆ.
ಸೋಮವಾರ ಹಾನಗಲ್ಲಿನಲ್ಲಿ ಮನವಿ ಸಲ್ಲಿಸಿದ ಅವರು, ನೀಟ್ ಪರೀಕ್ಷೆ ಹಗರಣದ ಕುರಿತು ನಡೆದ ಹೋರಾಟದಲ್ಲಿ ಎಲ್ಲ ಸಮುದಾಯದವರು ಭಾಗಿಯಾಗಿದ್ದರು. ಆದರೆ ಸಿ.ಟಿ. ರವಿ ಅವರು ಮುಸ್ಲಿಂ ಸಮುದಾಯದವರನ್ನು ಗುರಿಯಾಗಿಟ್ಟುಕೊಂಡು, ಅದರಲ್ಲೂ ಮುಸ್ಲಿಂ ಸಮುದಾಯದ ಮುಲ್ಲಾಗಳ ಅವಮಾನದ ಮಾತುಗಳನ್ನಾಡಿರುವುದು ಖಂಡನೀಯ. ಪದೇ ಪದೇ ಮುಸ್ಲಿಂ ಸಮುದಾಯದ ಬಗ್ಗೆ ಸಿ.ಟಿ. ರವಿ ಅವರು ಅವಹೇಳನಾಕರಿಯಾಗಿ ಹೇಳಿಕೆ ನೀಡುತ್ತಿರುವುದನ್ನು ನೋಡಿದರೆ ಅವರಿಗೆ ಸಂವಿಧಾನದ ಮೌಲ್ಯಗಳ ಅರಿವಿಲ್ಲ ಎಂದೆನಿಸುತ್ತಿದೆ. ಇದರಿಂದ ಮುಸ್ಲಿಂ ಸಮುದಾಯದ ಭಾವನೆಗಳಿಗ ಧಕ್ಕೆಯಾಗಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.ಅವರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿ ಸಿ.ಟಿ. ರವಿ ಅವರ ಮೇಲೆ ಸೂಕ್ತ ಕ್ರಮ ಜರುಗಿಸಬೇಕು. ಸಮಾಜದಲ್ಲಿ ಶಾಂತಿ, ಸೌಹಾರ್ದ ಕಾಪಾಡುವ ವಿಷಯದಲ್ಲಿ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು. ಭವಿಷ್ಯದಲ್ಲಿ ಇಂತಹ ಹೇಳಿಕೆಗಳಿಗೆ ಕಡಿವಾಣ ಹಾಕಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಮನವಿ ಸಲ್ಲಿಸುವ ಸಂದರ್ಭದಲ್ಲಿ ಮುಸ್ಲಿಂ ಸಮುದಾಯದ ಎಂ.ಎಂ. ಮುಲ್ಲಾ, ಸುಲೇಮಾನ ಮುಲ್ಲಾ, ಜಿ.ಎಂ. ಮುಲ್ಲಾ, ಗೌಸ್ ಮೊದ್ದೀನ ಮುಲ್ಲಾ, ಶೇಖ್ ಅಲಿ ಮುಲ್ಲಾ, ಅನ್ವರ್ ಸಾಬ್ ಮುಲ್ಲಾ, ಮಕ್ಬೂಲ್‌ಅಹಮ್ಮದ್ ಮುಲ್ಲಾ, ಮಹಮ್ಮದ್ ಜಾಫರ್ ಬಾಳೂರ, ಅಬ್ದುಲ್ ರಹೆಮಾನ್ ಅತ್ತಾರ, ಮಹಮ್ಮದಹನೀಫ್ ಮುಲ್ಲಾ, ನಜೀರಖಾನ್ ಮುಲ್ಲಾ, ಮಹಮ್ಮದ್ ಮುಲ್ಲಾ, ಮೆಹಬೂಬ ಮುಲ್ಲಾ, ಅಲ್ಲಾವುದ್ದೀನ ದರ್ಗಾ, ಅಕ್ಬರ್‌ಸಾಬ ಹಂಚಿನಮನಿ, ಹಂಜಾ ಹೊಂಡದ ಮೊದಲಾದವರು ಇದ್ದರು.