ಹಾನಗಲ್ಲ: ಸಾಮಾಜಿಕ ಸ್ವಾಸ್ಥ್ಯಕ್ಕೆ ಸಾಕ್ಷಿಯಾಗುವ ಜೀವನ ಸಂದೇಶಗಳನ್ನು ಅಭಿವ್ಯಕ್ತಿಸುವ ನಾಟಕ ಪರಂಪರೆ ಎಲ್ಲ ಕಾಲಕ್ಕೂ ಸಲ್ಲುವ ಮನರಂಜನೆಯೊಂದಿಗೆ ಕದಡಿದ ಮನಸ್ಸುಗಳನ್ನು ತಿದ್ದಿ ತೀಡುವ ಶಕ್ತಿ ಹೊಂದಿವೆ ಎಂದು ಸಾಹಿತಿ ಪ್ರೊ.ಮಾರುತಿ ಶಿಡ್ಲಾಪೂರ ತಿಳಿಸಿದರು.

ಹಾನಗಲ್ಲ ತಾಲೂಕಿನ ರಂಗಗ್ರಾಮ ಶೇಷಗಿರಿಯ ಸಿ.ಎಂ. ಉದಾಸಿ ಕಲಾಕ್ಷೇತ್ರದಲ್ಲಿ ಗಜಾನನ ಯುವಕ ಮಂಡಳ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತವಾಗಿ ಆಯೋಜಿಸಿದ ಪ್ರಸನ್ನ ಅವರ ರಚನೆಯ, ಯತೀಶ ಎನ್.ಕೊಳ್ಳೇಗಾಲ ಅವರ ನಿರ್ದೇಶನದ ಜಂಗಮ ಬದುಕು ನಾಟಕ ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಅವರು, ಆತ್ಮಸಾಕ್ಷಿಯ ಬದುಕು ಇಂದಿನ ತೀರ ಅಗತ್ಯವಾಗಿದೆ. ಕೌಟುಂಬಿಕ ಸಾಮರಸ್ಯಗಳು ನಮ್ಮ ಸಾಂಪ್ರದಾಯಿಕ ಮಾದರಿಯಲ್ಲಿ ಉಳಿಯಬೇಕಾಗಿದೆ. ಮೊಂಡು ಪ್ರತಿಷ್ಠೆಗೆ ಸಮಾಜದ ಹಿತವೇ ಬಲಿ ಕೊಡುವ ಸಂಗತಿಗಳು ದೂರಾಗಬೇಕು. ಕೌಟುಂಬಿಕ ಸಾಖ್ಯದ ಸಂಸ್ಕಾರ ಬೇಕು. ಅದಕ್ಕೆ ರಂಗ ಭೂಮಿ ಇನ್ನಷ್ಟು ಕ್ರಿಯಾಶೀಲವಾಗಿ ಸಮಾಜದಲ್ಲಿ ಜಾಗೃತಿಗೆ ಬೇರೂರಬೇಕಾಗಿದೆ ಎಂದರು.

ಅಧ್ಯಕ್ಷತೆವಹಿಸಿ ಮಾತನಾಡಿದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಂಗ ಕಲಾವಿದ ಪ್ರಭು ಗುರಪ್ಪನವರ, ಶೇಷಗಿರಿ ರಂಗ ವೈಭವ ಇಲ್ಲಿನ ಕೃಷಿ ಕಾರ್ಮಿಕರು, ಊರಿನ ಜನರ ಪ್ರೀತಿ ವಿಶ್ವಾಸ, ರಂಗಾಭಿಮಾನಿಗಳ ಬೆಂಬಲದಿಂದ ಭವ್ಯವಾಗಿದೆ.ಶೇಷಗಿರಿ ರಂಗ ಭೂಮಿಯಲ್ಲಿ ನಮ್ಮ ಕನಸು ನನಸಾಗಿದೆ. ಇನ್ನೂ ಹೆಚ್ಚು ನಾಟಕಗಳು ಇಲ್ಲಿ ನಡೆಯುವುದರೊಂದಿಗೆ ರಂಗ ತರಬೇತಿ ಆರಂಭಿಸಬೇಕೆಂಬ ಬಯಕೆ ಈಡೇರಬೇಕಾಗಿದೆ. ನಮ್ಮ ಗ್ರಾಮದ ಪ್ರತಿ ಮನೆಗಳ ರಂಗ ಪ್ರೀತಿ, ಇಲ್ಲಿನ ಕಲಾವಿದರ ಪಾಲ್ಗೊಳ್ಳುವಿಕೆಯೇ ರಂಗಭೂಮಿಯ ಎಲ್ಲ ಸಂಪತ್ತು ಎಂದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ಶಿಕ್ಷಕ ಸಾಹಿತಿ ಸುಭಾಸ ಹೊಸಮನಿ, ಗ್ರಾಮೀಣ ರಂಗಭೂಮಿಯ ವೈಭವಕ್ಕೆ ಶೇಷಗಿರಿ ಸಾಕ್ಷಿಯಾಗಿದೆ. ನಾಟಕಗಳು ನಮ್ಮ ಬದುಕಿನ ಚಿತ್ರಣಗಳೇ ಆಗಿದ್ದು, ಇವುಗಳ ಮೂಲಕ ಜೀವನ ಸಂದೇಶಗಳನ್ನು ಪಡೆಯಲು ಸಾಧ್ಯ. ಮಕ್ಕಳ ರಂಗಭೂಮಿ ಬೆಳೆಸುವಲ್ಲಿ ಈಗ ಹೆಚ್ಚಿನ ಆದ್ಯತೆ ನೀಡುವ ಅಗತ್ಯವಿದೆ, ಶಾಲಾ ಹಂತದಲ್ಲಿಯೇ ಮಕ್ಕಳಲ್ಲಿ ರಂಗ ಪ್ರೀತಿ ಜಾಗೃತವಾಗಬೇಕು. ನಾಟಕ ರಂಗ ಬದುಕಿನ ರಂಗವನ್ನೇ ಸುವ್ಯವಸ್ಥಿತಗೊಳಿಸುವ ಶಕ್ತಿ ಹೊಂದಿದೆ ಎಂದರು.

ನಿವೃತ್ತ ಪ್ರಾಚಾರ್ಯ ಸಿ. ಮಂಜುನಾಥ, ರಂಗ ನಿರ್ದೇಶಕ ಯತೀಶ ಕೊಳ್ಳೇಗಾಲ ಅತಿಥಿಗಳಾಗಿದ್ದರು. ಸಿದ್ದಪ್ಪ ರೊಟ್ಟಿ ಸ್ವಾಗತಿಸಿದರು. ಜಮೀರ ಪಠಾಣ ಕಾರ್ಯಕ್ರಮ ನಿರೂಪಿಸಿದರು.


ಸಂವಾದ: ನಾಟಕದ ನಂತರ ನಡೆದ ನಾಟಕ ಕುರಿತ ಸಂವಾದದಲ್ಲಿ ಡಾ,ಎಂ.ಪ್ರಸನ್ನಕುಮಾರ, ಸೋಮು ಗುರಪ್ಪನವರ, ಉಮೇಶ ಬಿಚ್ಚುಗತ್ತಿ, ನರಸಿಂಹ ಕೋಮಾರ, ಶೇಖರ ಭಜಂತ್ರಿ, ಕೆ.ರೇಣುಕಾ, ಗಂಗಾ ಕೋಮಾರ, ವಿ.ಆರ್.ಚಕ್ರಸಾಲಿ, ಅಶೋಕ, ಮುತ್ತಣ್ಣ ಮುಚ್ಚಂಡಿ, ಕರಬಸಪ್ಪ ಗೊಂದಿ, ನಾಗರಾಜ ಪಾಲ್ಗೊಂಡಿದ್ದರು.