ರೋಣ: ಐತಿಹಾಸಿಕ ಹಿನ್ನೆಲೆಯುಳ್ಳ ಉತ್ತರ ಕರ್ನಾಟಕ ವಿಶಿಷ್ಟ ಜಾತ್ರೆಗಳಲೊಂದಾದ ಅಕ್ಕ ತಂಗಿಯರ ಜಾತ್ರೆ ಎಂದು ಕರೆಸಿಕೊಳ್ಳುವ ತಾಲೂಕಿನ ಅರಹುಣಸಿ ಗ್ರಾಮದೇವತೆ ದೇವಮ್ಮದೇವಿಯರ ಜಾತ್ರೆ ಜು. 28ರಂದು ಸಾಯಂಕಾಲ 4 ಗಂಟೆಗೆ ವಿಜೃಂಭಣೆಯಿಂದ ಜರುಗಲಿದೆ.

ದೇವಮ್ಮದೇವಿಯವರ ಜಾತ್ರೆಗೆ ತನ್ನದೆಯಾದ ವಿಶಿಷ್ಟತೆಯಿದೆ. ದೇವತೆಯರಿಬ್ಬರು ಕುಂಭ ಹೊತ್ತು ಪುರ ಪ್ರವೇಶ ಮಾಡುವುದೇ ಜಾತ್ರಾ ವಿಶೇಷ. ಗದ್ದುಗೆಯಿಂದ ದೇವತೆಯರನ್ನು ಪುರ ಪ್ರವೇಶಿಸುವ ದೃಶ್ಯವನ್ನು ಕಣ್ತುಂಬಿಕೊಳ್ಳಲು ಸಹಸ್ರಾರು ಭಕ್ತರು ದಾರಿಯುದ್ದಕ್ಕು ನಿಂತಿರುತ್ತಾರೆ. 2 ಕಿಮೀಯಿಂದ ನಡೆದುಕೊಂಡು ದೇವತೆಯರು ಗ್ರಾಮದೊಳಕ್ಕೆ ಪ್ರವೇಶಿಸುವ ವೇಳೆ ದೇವತೆಯರು ಪ್ರತಿ ಹೆಜ್ಜೆಗೂ ಒಂದು ಕಾಯಿಯನ್ನು ಒಡೆಯುತ್ತಾರೆ. ಸುಮಾರು 10 ಸಾವಿರಕ್ಕೂ ಹೆಚ್ಚು ಕಾಯಿ ಒಡೆಯುತ್ತಾರೆ. 2 ಕಿಮೀ ದೂರದಿಂದ ಕುಂಭ ಹೊತ್ತು ಸಹೊದರಿ ದೇವತೆಯರು ಪುರ ಪ್ರವೇಶವನ್ನು ಕಣ್ತುಂಬಿಕೊಳ್ಳಲು 20 ಸಾವಿರಕ್ಕೂ ಹೆಚ್ಚು ಭಕ್ತರು ಆಗಮಿಸುತ್ತಾರೆ.

ದೇವಮ್ಮದೇವಿಯರ ಜಾತ್ರಾ ಮಹೋತ್ಸವ ಅಂಗವಾಗಿ ಜು. 28ರಂದು ರಾತ್ರಿ 9.30ಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಭಗತ್ ಸಿಂಗ್ ಯುವ ಸಂಘ ಹಾಗೂ ಗುದ್ನೇಶ್ವರ ದೇವಸ್ಥಾನ ಟ್ರಸ್ಟ್‌ ಸಮಿತಿ ಸಹಯೋಗದೊಂದಿಗೆ ಕಲಾ ನಡಿಗೆ ನಿಮ್ಮ ಬಳಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದೆ.

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅರುಣೊದಯ ಕಲಾ ತಂಡ ಕೊತಬಾಳ ಹಾಗೂ ಕಲಾವಿದ ಗೋಡಚಯ್ಯ ಹಾಗೂ ಸಂಗಡಿಗರಿಂದ ಜನಪದ ನೃತ್ಯಗಳು, ಸಮೂಹ ನೃತ್ಯಗಳು ಜರುಗಲಿವೆ. ಸಾನ್ನಿಧ್ಯವನ್ನು ನನ್ನಯ್ಯಸ್ವಾಮಿ ಹಿರೇಮಠ, ಅಧ್ಯಕ್ಷತೆಯನ್ನು ಕೆ.ಪಿ. ಪಾಟೀಲ ವಹಿಸುವರು. ಶಾಸಕ ಜಿ.ಎಸ್. ಪಾಟೀಲ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಮಿಥುನ ಜಿ.ಪಾಟೀಲ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಿಲ್ಲಾ ಸಹಾಯಕ ನಿರ್ದೇಶಕ ಬಸವರಾಜ ಬಳ್ಳಾರಿ, ಜನಪದ ಆಕಾಡೆಮಿ ಸದಸ್ಯ ಶಂಕ್ರಣ್ಣ ಸಂಕಣ್ಣವರ ಸೇರಿದಂತೆ ಮುಂತಾದವರು ಉಪಸ್ಥಿತರಿರುವರು.ಗೋ ಆಧರಿತ ಕೃಷಿ ಕುರಿತು ಜಾಗೃತಿ

ಗದಗ: ಗದಗ- ಬೆಟಗೇರಿ ಇನ್ನರ್‌ವೀಲ್ ಕ್ಲಬ್ ವತಿಯಿಂದ ಗೋ ಆಧರಿತ ಕೃಷಿ ಕುರಿತು ವಿಶೇಷ ಅರಿವು ಕಾರ್ಯಕ್ರಮ ಜರುಗಿತು.ಸಂಪನ್ಮೂಲ ವ್ಯಕ್ತಿ, ಕೃಷಿ ತಜ್ಞ ರವಿ ಹಡಪದ ಮಾತನಾಡಿ, ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳ ಅತಿಯಾದ ಬಳಕೆಯಿಂದ ಮಣ್ಣಿನ ಆರೋಗ್ಯ ಕುಸಿಯುತ್ತಿದೆ. ಇಂತಹ ಸಂದರ್ಭದಲ್ಲಿ ಗೋಮಯ, ಗೋಮೂತ್ರ, ಪಂಚಗವ್ಯ, ಜೀವಾಮೃತ ಹಾಗೂ ಬೀಜಾಮೃತದಂತಹ ನೈಸರ್ಗಿಕ ಉತ್ಪನ್ನಗಳ ಬಳಕೆ ಅಗತ್ಯ. ಇವು ಮಣ್ಣಿನ ಫಲವತ್ತತೆ ಹೆಚ್ಚಿಸಿ, ಕೃಷಿ ವೆಚ್ಚವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತವೆ. ರೈತರು ಸ್ಥಳೀಯ ಸಂಪನ್ಮೂಲ ಬಳಸಿ ಸ್ವಾವಲಂಬಿ ಕೃಷಿಯತ್ತ ಹೆಜ್ಜೆ ಇಡಬೇಕು ಎಂದರು.ಅಧ್ಯಕ್ಷತೆಯನ್ನು ಇನ್ನರ್‌ವಿಲ್‌ ಕ್ಲಬ್‌ನ ಅಧ್ಯಕ್ಷೆ ಮಂಜುಳಾ ಅಕ್ಕಿ ವಹಿಸಿದ್ದರು. ಕಾರ್ಯದರ್ಶಿ ಪೂಜಾ ಭೂಮಾ ನಿರೂಪಿಸಿದರು. ಪ್ರೇಮಾ ಗುಳಗೌಡರ ಮುಂತಾದವರು ಇದ್ದರು. ಲಲಿತಾ ಇಂಗಳಹಳ್ಳಿ ಅವರು ಎಸ್. ಜಾನಕಿ ಅವರ ಸ್ಮರಣಾರ್ಥ ಗೀತೆಗಳನ್ನು ಹಾಡಿದರು. ಇದೇ ಸಂದರ್ಭದಲ್ಲಿ ನಾರಿ ಸಮ್ಮಾನ್ ಪ್ರಶಸ್ತಿ ಪಡೆದ ಸುವರ್ಣಾ ಮದರೀಮಠ ಅವರನ್ನು ಕ್ಲಬ್ ವತಿಯಿಂದ ಸತ್ಕರಿಸಲಾಯಿತು.