ಸಾರಾಂಶ
ಕಳೆದ 30 ವರ್ಷಗಳಿಂದ ಯಾವುದೇ ಮೂಲಭೂತ ಸೌಕರ್ಯಗಳಿಲ್ಲದೇ ಇಲ್ಲಿನ ಜನ ಪರದಾಡುತ್ತಿದ್ದಾರೆ
ಲಕ್ಷ್ಮೇಶ್ವರ: ಪಟ್ಟಣದ 23ನೇ ವಾರ್ಡ್‌ನ ವ್ಯಾಪ್ತಿಯಲ್ಲಿನ ಮಂಜಲಾಪುರದಲ್ಲಿ ಯಾವುದೇ ಮೂಲ ಸೌಲಭ್ಯ ಇಲ್ಲದೆ ಸಾರ್ವಜನಿಕರು ಪರದಾಡುತ್ತಿದ್ದಾರೆ. ರಸ್ತೆ, ಚರಂಡಿ, ಸಾರ್ವಜನಿಕ ಶೌಚಾಲಯ ಇಲ್ಲದೆ ನರಕಯಾತನೆ ಅನುಭವಿಸುತ್ತಿದ್ದಾರೆ. ಆದ್ದರಿಂದ ಶೀಘ್ರದಲ್ಲಿ ಮೂಲ ಸೌಲಭ್ಯ ಕೊಡುವಂತೆ ಆಗ್ರಹಿಸಿ ಕರವೆ ಸ್ವಾಭಿಮಾನಿ ಸೇನೆಯ ಸದಸ್ಯರು ಶುಕ್ರವಾರ ಪುರಸಭೆ ಮುಖ್ಯಾಧಿಕಾರಿ ಮಹೇಶ ಹಡಪದ ಅವರಿಗೆ ಮನವಿ ಸಲ್ಲಿಸಿದರು.
ಕಳೆದ 30 ವರ್ಷಗಳಿಂದ ಯಾವುದೇ ಮೂಲಭೂತ ಸೌಕರ್ಯಗಳಿಲ್ಲದೇ ಇಲ್ಲಿನ ಜನ ಪರದಾಡುತ್ತಿದ್ದಾರೆ. ಇಲ್ಲಿ ಸುಮಾರು 400 ಮನೆಗಳಿದ್ದು, ಸುಮಾರು 3000 ಜನರು ಇಲ್ಲಿ ವಾಸಿಸುತ್ತಿದ್ದಾರೆ. ಈ ಕುರಿತು ಪುರಸಭೆಗೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಶೀಘ್ರದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ, ಮಹಿಳೆಯರಿಗೆ ಸುಲಭ ಶೌಚಾಲಯದ ವ್ಯವಸ್ಥೆ, ಗಟಾರು ವ್ಯವಸ್ಥೆ, ರಸ್ತೆ ನವೀಕರಣ ಹಾಗೂ ಊರಿನ ಮಧ್ಯಭಾಗದಲ್ಲಿ (ಮಸೀದಿಯ ಹತ್ತಿರ) ಸಾರ್ವಜನಿಕ ನಳ ಹಾಕಬೇಕು. ಈ ಮೇಲ್ಕಾಣಿಸಿದ ಎಲ್ಲ ಮೂಲಭೂತ ಸೌಕರ್ಯ ಒದಗಿಸಿಕೊಡಬೇಕು. ಒಂದು ವೇಳೆ ಈ ಮೂಲ ಸೌಲಭ್ಯ ಕೊಡದೇ ಹೋದಲ್ಲಿ ಸಾರ್ವಜನಿಕರು ಹಾಗೂ ನಮ್ಮ ಜಿಲ್ಲಾ ಘಟಕದ ಸಹಯೋಗದೊಂದಿಗೆ ಲಕ್ಷೇಶ್ವರ ಪುರಸಭೆ ಆವರಣದಲ್ಲಿ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.ಈ ವೇಳೆ ಶರಣು ಗೋಡಿ, ನಾಗೇಶ ಅಮರಾಪೂರ, ಅಶ್ಫಾಕ್ ಬಾಗೋಡಿ, ನವೀನ ಉಮಚಗಿ ಇಸ್ಮಾಯಿಲ್ ಅಡೂರು ಸೇರಿದಂತೆ ಅನೇಕರು ಇದ್ದರು.