ತಾಲೂಕಿನ ಕಡವಾಡ ಗ್ರಾಮದ ಮಾಡಿಬಾಗ ತಳೇಬಾಂದ ಕೆರೆ ಅಭಿವೃದ್ಧಿ ಕಾಮಗಾರಿ ಕುರಿತು ಸೂಕ್ತ ತನಿಖೆ ನಡೆಸಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಸೋಮವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಕಾರವಾರ
ತಾಲೂಕಿನ ಕಡವಾಡ ಗ್ರಾಮದ ಮಾಡಿಬಾಗ ತಳೇಬಾಂದ ಕೆರೆ ಅಭಿವೃದ್ಧಿ ಕಾಮಗಾರಿ ಕುರಿತು ಸೂಕ್ತ ತನಿಖೆ ನಡೆಸಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಸೋಮವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.ಕಡವಾಡ ಗ್ರಾಮದ ಸರ್ವೆ ನಂ. 396ರಲ್ಲಿ ಇರುವ ಹಳೆಯ ಕೆರೆಯು ಹಿಂದಿನಿಂದಲೂ ಜಾನುವಾರುಗಳಿಗೆ ನೀರಿನ ಮೂಲವಾಗಿದ್ದು, ಸುತ್ತಮುತ್ತಲಿನ ಕುಡಿಯುವ ನೀರಿನ ಬಾವಿಗಳ ಜಲಮಟ್ಟ ಕಾಪಾಡುವಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತಿತ್ತು. ಹಲವು ವರ್ಷಗಳ ಹಿಂದೆ ಕೆರೆಯಲ್ಲಿ ಹೂಳು ತುಂಬಿಕೊಂಡಿದ್ದು, 2005ರಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಉದ್ಯೋಗ ಖಾತ್ರಿ ಯೋಜನೆಯಡಿ ಕೆರೆಯ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿತ್ತು.
ಆ ಸಂದರ್ಭ ಕೆರೆಯಲ್ಲಿದ್ದ ಸುಮಾರು 3 ಅಡಿ ಹೂಳು ತೆಗೆಯುವುದರೊಂದಿಗೆ ಕಲ್ಲಿನ ಪಿಚ್ಚಿಂಗ್ ಕಾಮಗಾರಿ ನಡೆಸಲಾಗಿತ್ತು. ಕೆರೆಯ ನಾಲ್ಕು ಬದಿಗಳಲ್ಲೂ ಕಲ್ಲಿನ ಪಿಚ್ಚಿಂಗ್, ಏರಿಯ ಮೇಲೆ ಮಣ್ಣು ತುಂಬಿಸುವುದು ಹಾಗೂ ರಸ್ತೆ ಬದಿಯಲ್ಲಿ ಸಾರ್ವಜನಿಕರು ಮತ್ತು ಶಾಲಾ ಮಕ್ಕಳು ಸಂಚರಿಸಲು ಅನುಕೂಲವಾಗುವಂತೆ ಚೀರೇಕಲ್ಲಿನ ಗೋಡೆ ನಿರ್ಮಿಸಲಾಗಿತ್ತು.ಆದರೆ, 2025ರಲ್ಲಿ ಚಿಕ್ಕ ನೀರಾವರಿ ಇಲಾಖೆಯ ಉಪವಿಭಾಗದಿಂದ ಇದೇ ಕೆರೆಯನ್ನು ಅಭಿವೃದ್ಧಿಪಡಿಸುವ ಹೆಸರಿನಲ್ಲಿ ಮತ್ತೆ ಕಾಮಗಾರಿ ಆರಂಭಿಸಲಾಗಿದೆ. ಈ ವೇಳೆ ಕೆರೆಯಲ್ಲಿದ್ದ ಹೂಳನ್ನು ತೆಗೆದು ಪಕ್ಕದಲ್ಲಿ ಹಾಕಿ, ಹಿಂದೆ ನಿರ್ಮಿಸಲಾಗಿದ್ದ ಕಲ್ಲಿನ ಪಿಚ್ಚಿಂಗ್ ಅನ್ನು ಮಣ್ಣಿನಿಂದ ಮುಚ್ಚಲಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ರಸ್ತೆ ಬದಿಯಲ್ಲಿದ್ದ ಚಿರೆಕಲ್ಲಿನ ಗೋಡೆಯನ್ನೂ ಕೆಡವಲಾಗಿದ್ದು, ಅದನ್ನು ಪುನಃ ನಿರ್ಮಿಸದೇ ಹಾಗೆಯೇ ಬಿಡಲಾಗಿದೆ ಎಂದು ದೂರಲಾಗಿದೆ.
ಇದರಿಂದ ಮಳೆಗಾಲದಲ್ಲಿ ಕೆರೆಯ ನೀರು ರಸ್ತೆಯ ಮೇಲೆ ಹರಿದು ಶಾಲಾ ಮಕ್ಕಳು ಹಾಗೂ ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಕೆರೆಯಲ್ಲಿ ಸುರಕ್ಷತಾ ಕ್ರಮಗಳ ಕೊರತೆಯಿಂದ ಯಾರಾದರೂ ಆಕಸ್ಮಿಕವಾಗಿ ಬಿದ್ದು ಅಪಾಯ ಸಂಭವಿಸುವ ಸಾಧ್ಯತೆಯೂ ಇದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.ಈ ಕುರಿತು 2025ರ ಜೂ. 5ರಂದು ಕಡವಾಡ ಗ್ರಾಪಂಗೆ ತಕರಾರು ಅರ್ಜಿ ಸಲ್ಲಿಸಲಾಗಿತ್ತು. ಪಂಚಾಯಿತಿಯಿಂದ ಸಂಬಂಧಪಟ್ಟ ಇಲಾಖೆಗೆ ನೋಟಿಸ್ ನೀಡಲಾಗಿದ್ದು, 2025ರ ಮಳೆಗಾಲದ ನಂತರ ಕಾಮಗಾರಿ ಪೂರ್ಣಗೊಳಿಸುವುದಾಗಿ ಇಲಾಖೆ ತಿಳಿಸಿತ್ತು. ಆದರೆ 2026ರಲ್ಲಿ ಮತ್ತೆ ಕಾಮಗಾರಿ ಆರಂಭಿಸಿದಂತೆ ಮಾಡಿ, ಕೇವಲ ಎರಡು ದಿನಗಳ ಬಳಿಕ ಕೆಲಸ ಸ್ಥಗಿತಗೊಳಿಸಲಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
ಸದ್ಯ ಕೆರೆಯಲ್ಲಿ ನೀರು ಸಂಪೂರ್ಣವಾಗಿ ತುಂಬಿರುವುದರಿಂದ ಯಾವುದೇ ಕ್ಷಣದಲ್ಲಿ ಅನಾಹುತ ಸಂಭವಿಸುವ ಆತಂಕವಿದೆ. ಹೀಗಾಗಿ ಜಿಲ್ಲಾಡಳಿತ ತಕ್ಷಣ ಸ್ಥಳ ಪರಿಶೀಲನೆ ನಡೆಸಿ, ಕೆರೆ ಅಭಿವೃದ್ಧಿ ಕಾಮಗಾರಿಗೆ ಮಂಜೂರಾದ ಅನುದಾನದ ಬಳಕೆ ಕುರಿತು ಸಮಗ್ರ ತನಿಖೆ ನಡೆಸಬೇಕು ಹಾಗೂ ಅಪೂರ್ಣ ಕಾಮಗಾರಿಯನ್ನು ಪೂರ್ಣಗೊಳಿಸಿ ಸಾರ್ವಜನಿಕರ ಸುರಕ್ಷತೆಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.ದೇವಿದಾಸ ಲಿಂಗು ತಳೇಕರ, ಉತ್ತಮ್ ವಿ. ರೇವಣಕರ, ವಿದ್ಯಾ ವಿ. ರೇವಣಕರ, ರಾಜೇಶ ರೇವಣಕರ, ರೋಷನಿ ರೇವಣಕರ, ವಿನಯ ರೇವಣಕರ ಹಾಗೂ ವಿನೋದ ಗಣೇಶ ವೈಂಗಣಕರ ಉಪಸ್ಥಿತರಿದ್ದರು.