ಮಧ್ಯಂತರ ಪರಿಹಾರ ನೀಡುವಂತೆ ಸರ್ಕಾರದತ್ತ ಮೊರೆ

| Published : Oct 17 2025, 01:00 AM IST

ಸಾರಾಂಶ

ಚಳ್ಳಕೆರೆ ನಗರದ ತಾಲೂಕು ಕಚೇರಿ ಮುಂಭಾಗದಲ್ಲಿ ರೈತ ಸಂಘ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಚಳ್ಳಕೆರೆ

ಕರ್ನಾಟಕ ರಾಜ್ಯ ರೈತಸಂಘ ರಾಜ್ಯ ಹಿರಿಯ ಉಪಾಧ್ಯಕ್ಷ ಕೆ.ಪಿ.ಭೂತಯ್ಯ ನೇತೃತ್ವದಲ್ಲಿ ಗುರುವಾರ ತಾಲೂಕು ಕಚೇರಿ ಮುಂಭಾಗದಲ್ಲಿ ಚಳ್ಳಕೆರೆ ತಾಲೂಕನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸಬೇಕು. ಶೇಂಗಾ, ಈರುಳ್ಳಿ, ತೊಗರಿ ಬೆಳೆನಷ್ಟ ಪರಿಹಾರ, ಬೆಳೆವಿಮೆ, ಮಧ್ಯಂತರ ಪರಿಹಾರ, ರೈತ ಸಾಲಮನ್ನಾ, ರೈತರ ಬ್ಯಾಂಕ್ ಖಾತೆಗೆ ನೇರಹಣ ಜಮಾ ಕುರಿತು ಹಮ್ಮಿಕೊಂಡಿದ್ದ ಧರಣಿ ಸತ್ಯಾಗ್ರಹ ಯಶಸ್ವಿಯಾಗಿ ನಡೆಯಿತು.ತಹಸೀಲ್ದಾರ್ ರೇಹಾನ್‌ ಪಾಷ ಪ್ರತಿಭಟನಾ ನಿರತ ರೈತರೊಂದಿಗೆ ಚರ್ಚೆ ನಡೆಸಿ, ತಮ್ಮ ಬೇಡಿಕೆಗಳ ಬಗ್ಗೆ ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದು, ಬಹುತೇಕ ರೈತರ ಬೇಡಿಕೆಗಳು ಸಕರಾತ್ಮಕವಾಗಿವೆ. ಬೆಳೆ ನಷ್ಟ ಪರಿಹಾರ, ಬೆಳೆವಿಮೆ, ಸಾಲ ಮನ್ನಾ, ರೈತರ ಬ್ಯಾಂಕ್ ಖಾತೆಗೆ ಹಣಜಮಾ ಮುಂತಾದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕೃಷಿ, ತೋಟಗಾರಿಕೆ, ಬ್ಯಾಂಕ್ ಹಾಗೂ ಖಾಸಗಿ ಇನ್ಯೂರೆನ್ಸ್ ಕಂಪನಿಗಳೊಂದಿಗೆ ಚರ್ಚೆ ನಡೆಸಲಾಗಿದೆ. ರೈತರು ಈಗಾಗಲೇ ನಷ್ಟಕ್ಕೊಳಗಾಗಿದ್ದು ಸರ್ಕಾರದಿಂದ ಪರಿಹಾರ ನಿರೀಕ್ಷೆ ಮಾಡುತ್ತಿದ್ದಾರೆ. ಈ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿಗಳಿಗೂ ಮಾಹಿತಿ ನೀಡಲಾಗಿದೆ ಎಂದರು.

ಸಹಾಯಕ ಕೃಷಿ ನಿರ್ದೇಶಕ ಡಾ.ಜೆ.ಅಶೋಕ್ ಮಾತನಾಡಿ, ರೈತರು ಬೆಳೆನಷ್ಟ ಪರಿಹಾರ ಬಗ್ಗೆ ಮನವಿ ಮಾಡುತ್ತಾ ಬಂದಿದ್ದಾರೆ. ಇತ್ತೀಚಿಗಷ್ಟೇ ಖಾಸಗಿ ಇನ್ಯೂರೆನ್ಸ್ ಕಂಪನಿ, ರೈತಸಂಘ ಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸಲಾಗಿದೆ. ಮಧ್ಯಂತರ ಪರಿಹಾರ ನೀಡುವ ಕುರಿತು ಸಮೀಕ್ಷೆ ನಡೆಸಲು ಉದ್ದೇಶಿಸಿದೆ, ಈಗಾಗಲೇ ಖಾಸಗಿ ಕಂಪನಿಗಳಿಗೆ ವಿಮೆ ಹಣಪಾವತಿ ಮಾಡಿದ ರೈತರಿಗೆ ಕಂಪನಿ ನಿಯಮದಡಿ ಪರಿಹಾರ ದೊರೆಯುತ್ತದೆ. ತಾಲೂಕಿನಲ್ಲಿ ಈಗಾಗಲೇ 49 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಮಳೆ ತಡವಾಗಿ ಆರಂಭವಾದ ಹಿನ್ನೆಲೆಯಲ್ಲಿ ಬೆಳೆ ಸಂಪೂರ್ಣ ನೆಲಕಚ್ಚಿವೆ. ಈಗಾಗಲೇ ಹಿರಿಯ ಅಧಿಕಾರಿಗಳಿಗೆ ವರದಿ ನೀಡಲಾಗಿದೆ, ಸರ್ಕಾರ ಈ ತಾಲೂಕನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸಿದರೆ ರೈತರಿಗೆ ಹೆಚ್ಚಿನ ಪರಿಹಾರ ನೀಡಲು ಸಾಧ್ಯವೆಂದರು.

ಲೀಡ್‌ ಬ್ಯಾಂಕ್ ಮಾರ್ಗಸೂಚಿ ವ್ಯವಸ್ಥಾಪಕ ರಾಘವೇಂದ್ರ ಮಾತನಾಡಿ, ಯಾವುದೇ ಕಾರಣಕ್ಕೂ ಸರ್ಕಾರದಿಂದ ರೈತರಿಗೆ ಬಂದ ಪರಿಹಾರದ ಹಣವನ್ನು ರೈತರ ಸಾಲವಿದ್ದಲ್ಲಿ ಸಾಲಕ್ಕೆ ಜಮಾಮಾಡಿಕೊಳ್ಳದಂತೆ ಈಗಾಗಲೇ ನಿರ್ದೇಶನ ನೀಡಲಾಗಿದೆ. ರೈತರ ಬೆಳೆವಿಮೆ, ಬೆಳೆನಷ್ಟ ಕುರಿತಂತೆ ಸರ್ಕಾರದಿಂದ ಯಾವುದೇ ಸೂಚನೆ ಬಂದರೂ ಬ್ಯಾಂಕ್ ಪಾಲಿಸುತ್ತದೆ ಎಂದರು.

ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ಪಿ.ಭೂತಯ್ಯ ಮಾತನಾಡಿ, ತಾಲೂಕಿನಾದ್ಯಂತ ನೂರಾರು ಸಂಖ್ಯೆಯಲ್ಲಿ ರೈತರು ತಮ್ಮ ಹೊಲದಲ್ಲಿ ಶೇಂಗಾ ಬೆಳೆ ವಿಫಲವಾಗಿರುವುದನ್ನು ಎಲ್ಲರಿಗೂ ತೋರಿಸಲು ಶೇಂಗಾ ಬಳ್ಳಿಯನ್ನು ತಂದಿದ್ದಾರೆ. ಒಂದು ಬಳ್ಳಿಯಲ್ಲಿ ಎರಡ್ಮೂರು ಎಳೆಕಾಯಿ ಮಾತ್ರವಿದೆ. ರೈತರು ಏನೂ ಮಾಡದ ಸ್ಥಿತಿ ತಲುಪಿದ್ದಾರೆ. ಸರ್ಕಾರ ಬರಗಾಲವೆಂದು ಘೋಷಿಸಿ ಮಧ್ಯಂತರ ಪರಿಹಾರ ನೀಡಿದರೆ ಮಾತ್ರ ರೈತರು ನೆಮ್ಮದಿಯಿಂದ ಬದುಕಲು ಸಾಧ್ಯ. ಅಧಿಕಾರಿಗಳು ಕೇವಲ ಕಾನೂನನ್ನು ಹೇಳಿ ರೈತರನ್ನು ಸಮದಾನ ಪಡಿಸಿದರೆ ಸಾಲದು. ಮಧ್ಯಂತರ ಪರಿಹಾರ ಹೆಕ್ಟೇರ್‌ಗೆ ಕನಿಷ್ಠ 25 ಸಾವಿರ ನೀಡಬೇಕೆಂದು ಒತ್ತಾಯಿಸಿದರು.

ತಾಲೂಕು ತೊಗರಿ ಬೆಳೆ ಬೆಳೆಗಾರರ ಸಂಘದ ಅಧ್ಯಕ್ಷ, ನಿವೃತ್ತ ಪ್ರಾಂಶುಪಾಲ ಸಿ.ಶಿವಲಿಂಗಪ್ಪ ಮಾತನಾಡಿ, ರೈತರು ಕಳೆದ ಕೆಲವು ವರ್ಷಗಳಿಂದ ನಿರಂತರ ನಷ್ಟವನ್ನು ಅನುಭವಿಸಿ ಕಂಗಾಲಾಗಿದ್ದಾರೆ. ಭಾರವಾದ ಮನಸ್ಸಿನಿಂದ ದಿಕ್ಕು ತೋಚದೆ ಜೀವನ ನಡೆಸುತ್ತಿದ್ದಾರೆ. ಬೆಳೆ ಬೆಳೆಯಲು ಲಕ್ಷಾಂತರ ರು. ಸಾಲಮಾಡಿ ಸಾಲಗಾರರಾಗಿದ್ದಾರೆ. ಶೇಂಗಾ ಬಳ್ಳಿಯಲ್ಲಿ ಗಟ್ಟಿಕಾಯಿ ಕಟ್ಟಿದರೆ ಮಾತ್ರ ರೈತರ ಬದುಕು ಗಟ್ಟಿಯಾಗುತ್ತದೆ. ಆದರೆ, ಈಗಾಗಲೇ ರೈತ ಸಂಪೂರ್ಣವಾಗಿ ಸೋತು ನೆಲಕಚ್ಚಿದ್ದಾನೆ. ಇಂತಹ ಸಂದರ್ಭದಲ್ಲಾದರೂ ಸರ್ಕಾರ ರೈತರ ಸಹಾಯಕ್ಕೆ ಬರಬೇಕೆಂದರು.

ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಧನಂಜಯ, ವಿ.ಶ್ರೀನಿವಾಸ್, ಡಿ.ಗುರುಮೂರ್ತಿ, ಕೆ.ಶಿವಣ್ಣ, ಎ.ರಾಜಣ್ಣ, ಬಸ್ತಿಹಳ್ಳಿ ಜಿ.ಸುರೇಶ್‌ಬಾಬು, ಎಚ್.ರಾಮಚಂದ್ರಪ್ಪ, ರುದ್ರಪ್ಪ, ಶಿವಕುಮಾರ್, ತೋಟಗಾರಿಕೆ ಅಧಿಕಾರಿ ಕುಮಾರ್, ಕಂದಾಯಾಧಿಕಾರಿ ತಿಪ್ಪೇಸ್ವಾಮಿ, ಗ್ರಾಮಲೆಕ್ಕಾಧಿಕಾರಿ ಪ್ರಕಾಶ್ ಮುಂತಾದವರು ಉಪಸ್ಥಿತರಿದ್ದರು.