ಸಾರಾಂಶ
ಕನ್ನಡಪ್ರಭ ವಾರ್ತೆ ಕಾರಟಗಿ
ಸುಪ್ರೀಂ ಕೋರ್ಟ್ ತೀರ್ಪು ಗೌರವಿಸಿ ಕೂಡಲೇ ಒಳಮೀಸಲಾತಿ ಜಾರಿ ಮಾಡಬೇಕು. ಈ ಕುರಿತು ಸದನದಲ್ಲಿ ಧ್ವನಿ ಎತ್ತಬೇಕು ಎಂದು ಆಗ್ರಹಿಸಿ ಮಾದಿಗ ಮತ್ತು ಮಾದಿಗ ಉಪಜಾತಿಗಳ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಪಟ್ಟಣದಲ್ಲಿ ಸಚಿವ ಶಿವರಾಜ ತಂಗಡಗಿ ನಿವಾಸದ ಮುಂದೆ ತಮಟೆ ಬಾರಿಸಿ ಸಚಿವರಿಗೆ ಮನವಿ ಸಲ್ಲಿಸಿದರು.ಒಕ್ಕೂಟದ ಪ್ರಮುಖರಾದ ಗಂಗಣ್ಣ ಸಿದ್ದಾಪುರ ಹಾಗೂ ದಲಿತ ವಿಮೋಚನಾ ಸೇನೆ ತಾಲೂಕು ಅಧ್ಯಕ್ಷ ಮೌನೇಶ ಭಜರಂಗಿ ಮಾತನಾಡಿ. ಆ. ೧ರಂದು ಸುಪ್ರೀಂ ಕೋರ್ಟ್ ತೀರ್ಪು ಪ್ರಕಟಿಸಿದೆ. ಹರಿಯಾಣ ಬಿಜೆಪಿ ಸರ್ಕಾರ ಒಂದೇ ವಾರದಲ್ಲಿ ಮೀಸಲಾತಿ ಜಾರಿಗೊಳಿಸಿದೆ. ಆದರೆ, ಕರ್ನಾಟಕದ ಕಾಂಗ್ರೆಸ್ ಸರ್ಕಾರ ಮೀನಮೇಷ ಎಣಿಸುತ್ತಿದೆ. ಸರ್ಕಾರ ಅಧಿಕಾರಕ್ಕೆ ಬಂದ ಮೊದಲ ವಾರದಲ್ಲೇ ಒಳ ಮೀಸಲಾತಿ ಜಾರಿ ಮಾಡುತ್ತೇವೆ ಎಂದು ನಮಗೆಲ್ಲ ಭರವಸೆ ನೀಡಿ, ಇದೀಗ ಒಳಮೀಸಲಾತಿ ಜಾರಿಗೆ ನೂರಾರು ಕಾರಣಗಳನ್ನು ಮುಂದಿಟ್ಟು ತಡೆಯುವ ಮೂಲಕ ನಮ್ಮ ತಾಳ್ಮೆ ಪರೀಕ್ಷಿಸಲಾಗುತ್ತಿದೆ ಎಂದು ಒಕ್ಕೂಟದ ಪದಾಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದರು.
ಕೂಡಲೇ ನೀವು ಸದನದಲ್ಲಿ ಈ ವಿಷಯದ ಮೇಲೆ ಮಾತನಾಡಬೇಕು. ನಮಗೆ ಬೆಂಬಲಿಸಿ ನಮ್ಮ ಪರವಾಗಿ ಧ್ವನಿ ಎತ್ತಿ ನಮಗೆ ನ್ಯಾಯ ಒದಗಿಸಬೇಕು ಎಂದು ಮನವಿ ಮಾಡಿದರು.ಮನವಿ ಸ್ವೀಕರಿಸಿ ಮಾತನಾಡಿದ ಸಚಿವರು, ಸರ್ಕಾರದ ಭಾಗವಾಗಿರುವ ನಾನು ಈ ವಿಷಯದ ಕುರಿತು ಮಾತನಾಡಲು ಬರುವುದಿಲ್ಲ. ಆದರೆ, ನಿಮ್ಮ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ. ಮುಖ್ಯಮಂತ್ರಿಗಳು ಈ ಬಗ್ಗೆ ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ಒಳಮೀಸಲಾತಿ ಹಂಚಿಕೆಗೆ ಪರಿಶಿಷ್ಠ ಜಾತಿಯಲ್ಲಿರುವ ಉಪಜಾತಿಗಳ ಜನಸಂಖ್ಯೆಯ ಎಂಪೆರಿಕಲ್ ಡೇಟಾ (ದತ್ತಾಂಶ) ಅಗತ್ಯವಿದೆ. ಈ ದತ್ತಾಂಶಗಳು ಕೈ ಸೇರುತ್ತಿದ್ದಂತೆ ಒಳಮೀಸಲಾತಿಯನ್ನು ಸಮರ್ಪಕವಾಗಿ ಜಾರಿಗೊಳಿಸಲಾಗುತ್ತದೆ. ಇದರ ಬಗ್ಗೆ ಯಾವುದೇ ಸಂಶಯ ಬೇಡ ಎಂದು ತಿಳಿಸಿದರು.
ಈ ವೇಳೆ ಒಕ್ಕೂಟದ ಶಿವಣ್ಣ ಈಳಿಗನೂರು, ಗಂಗಪ್ಪ ಇಂದಿರಾನಗರ, ಮಹಾದೇವ್ ಬಡಿಗೇರ್, ಜಯಪ್ಪ ಬಸವಣ್ಣಕ್ಯಾಂಪ್, ಆಂಜನೇಯ ಈಳಿಗನೂರು, ಶರಣಪ್ಪ ಸಿದ್ದಾಪುರ, ಹುಲ್ಲೇಶ ಇಂದಿರಾನಗರ, ಶಾಂತಪ್ಪ ಬಸರಿಗಿಡ ಸೇರಿದಂತೆ ಇತರರಿದ್ದರು.