ಚಿಕ್ಕಮಗಳೂರು : ಮೊಬೈಲ್ ನೆಟ್‌ವರ್ಕ್ ಸಮಸ್ಯೆ ಪರಿಹಾರಕ್ಕೆ ದೂರ ಸಂಪರ್ಕ ಸಚಿವರಿಗೆ ಮನವಿ

| N/A | Published : Apr 01 2025, 12:49 AM IST / Updated: Apr 01 2025, 12:33 PM IST

ಚಿಕ್ಕಮಗಳೂರು : ಮೊಬೈಲ್ ನೆಟ್‌ವರ್ಕ್ ಸಮಸ್ಯೆ ಪರಿಹಾರಕ್ಕೆ ದೂರ ಸಂಪರ್ಕ ಸಚಿವರಿಗೆ ಮನವಿ
Share this Article
  • FB
  • TW
  • Linkdin
  • Email

ಸಾರಾಂಶ

 ದೂರಸಂಪರ್ಕ ಇಲಾಖೆ ಮೊಬೈಲ್ ನೆಟ್‌ವರ್ಕ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುತ್ತಿರುವ ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಇದೀಗ ಜಿಲ್ಲೆಯಲ್ಲಿ 4 ಜಿ ಸೇವೆಗೆ ದೂರ ಸಂಪರ್ಕ ಸಚಿವ ಜ್ಯೋತಿರಾದಿತ್ಯ ಸಿಂಧ್ಯಾರಿಗೆ ಮನವಿ  

 , ಚಿಕ್ಕಮಗಳೂರು : ದೂರಸಂಪರ್ಕ ಇಲಾಖೆ ಮೊಬೈಲ್ ನೆಟ್‌ವರ್ಕ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುತ್ತಿರುವ ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಇದೀಗ ಜಿಲ್ಲೆಯಲ್ಲಿ ೪ ಜಿ ಸೇವೆಗೆ ದೂರ ಸಂಪರ್ಕ ಸಚಿವ ಜ್ಯೋತಿರಾದಿತ್ಯ ಸಿಂಧ್ಯಾರಿಗೆ ಮನವಿ ಮಾಡಿದ್ದು, ಕೂಡಲೇ ೪ಜಿ ಸೇವೆ ಕಾರ್ಯಾರಂಭಕ್ಕೆ ಬಿಎಸ್‌ಎನ್‌ಎಲ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಕೋಟಾ ಶ್ರೀನಿವಾಸ ಪೂಜಾರಿ ಈ ಹಿಂದೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಬಿ.ಎಸ್.ಎನ್.ಎಲ್. ನಿಂದ ಕೇವಲ ೨ಜಿ ಮತ್ತು ೩ಜಿ ಸೇವೆ ಮಾತ್ರ ದೊರೆಯುತ್ತಿದ್ದು, ಗ್ರಾಹಕರು ಸುಮಾರು ವರ್ಷಗಳಿಂದ ೪ಜಿ ಸೇವೆಗಾಗಿ ಕಾಯುತ್ತಿದ್ದರು. ಈ ವಿಷಯ ತಿಳಿಯುತ್ತಲೇ ಕೇಂದ್ರ ಸರ್ಕಾರದ ದೂರ ಸಂಪರ್ಕ ಸಚಿವ ಜ್ಯೋತಿರಾದಿತ್ಯ ಸಿಂಧ್ಯಾ ಮತ್ತು ಬಿ.ಎಸ್.ಎನ್.ಎಲ್‌ನ ಕೇಂದ್ರ ಸರ್ಕಾರದ ಉನ್ನತ ಅಧಿಕಾರಿ, ಬಿ.ಎಸ್.ಎನ್.ಎಲ್ ಚೇರ್‌ಮೆನ್ ಎ.ರಾಬರ್ಟ್ ಜೆ. ರವಿ ಅವರನ್ನು ಭೇಟಿ ಮಾಡಿ ಚಿಕ್ಕಮಗಳೂರಿನ ಎಲ್ಲಾ 217  ಟವರ್‌ಗಳಿಗೂ ೪ಜಿ ಸೇವೆ ನೀಡುವಂತೆ ಮನವಿ ಮಾಡಿದ್ದೆ. ನನ್ನ ಮನವಿ ಫಲವಾಗಿ ಇದೀಗ ಚಿಕ್ಕಮಗಳೂರಿನ ೨೧೭ ಟವರ್ ನಲ್ಲಿ 165 ಕ್ಕೂ ಹೆಚ್ಚು ಟವರ್‌ಗಳಲ್ಲಿ ೪ಜಿ ಸೇವೆ ಕಾರ್ಯರಂಭ ಮಾಡಿದ್ದು ಉಳಿದ ಟವರ್‌ಗಳಿಗೂ ಉಪಕರಣ ಅಳವಡಿಕೆ ಕಾರ್ಯ ಪ್ರಗತಿಯಲ್ಲಿದೆ ಎಂದಿದ್ದಾರೆ.

ಜಿಲ್ಲೆಯಲ್ಲಿ ಯಾವುದೇ ರೀತಿ ಸಂಪರ್ಕವಿರದ ಅನೇಕ ಹಳ್ಳಿಗಳಿಗೆ ಮೊಬೈಲ್ ಟವರ್‌ನ ಅಗತ್ಯತೆ ಮನಗಂಡು ೨೬ ಹಳ್ಳಿಗಳಿಗೆ ಹೊಸ ೪ಜಿ ಟವರ್‌ನ ಕಾರ್ಯಕ್ಕೆ ಅಗತ್ಯವಿದ್ದ ಜಾಗವನ್ನು ಕಂದಾಯ ಮತ್ತು ಅರಣ್ಯ ಇಲಾಖೆಯಿಂದ ಮಂಜೂರು ಮಾಡಿಸಿ ದ್ದಲ್ಲದೆ, ಕೇಂದ್ರ ಸರ್ಕಾರ ಮತ್ತು ಬಿ.ಎಸ್.ಎನ್.ಎಲ್. ಅಧಿಕಾರಿಗಳೊಂದಿಗೆ ನಿರಂತರ ಹತ್ತಾರು ಸಭೆ ನಡೆಸಿದ್ದರ ಫಲವಾಗಿ ಈಗಾಗಲೇ 17  ಟವರ್‌ನಲ್ಲಿ ೪ಜಿ ಸೇವೆ ಕಾರ್ಯಾರಂಭವಾಗುವಂತೆ ಮಾಡಲಾಗಿದೆ. ಉಳಿದ 9 ಸ್ಥಳಗಳಲ್ಲಿ ಉಪಕರಣ ಅಳವಡಿಕೆ ಕಾರ್ಯ ಪ್ರಗತಿಯಲ್ಲಿದೆ ಎಂದು ತಿಳಿಸಿದ್ದಾರೆ.

ಶೀಘ್ರದಲ್ಲಿ ೪ಜಿ ಸೇವೆ ನೀಡಲಾಗುವುದು. ೪ಜಿ ಟವರ್ ಸಂಪರ್ಕಕ್ಕೆ ಅಗತ್ಯ ಓ.ಎಫ್.ಸಿ ಅಥವಾ ಮೈಕ್ರೋಲಿಂಕ್ ದೊರೆಯ ದಂತಹ ಹಳ್ಳಿಯಾದ ಮೂಡಿಗೆರೆ ತಾಲೂಕಿನ, ಅಲೆಖಾನ್ ಹೊರಟ್ಟಿ ಗ್ರಾಮಕ್ಕೆ ಕೇಂದ್ರ ಸರ್ಕಾರದ ನೆರವಿನಿಂದ ಉಪಗ್ರಹ (ಸೆಟಲೈಟ್)ನ ಮೂಲಕ ಸಂಪರ್ಕ ಕಲ್ಪಿಸಿ ಗ್ರಾಹಕರಿಗೆ ೪ಜಿ ಸೇವೆ ನೀಡಲಾಗಿದೆ. ಇದು ರಾಜ್ಯದಲ್ಲೇ ಪ್ರಥಮ ಉಪಗ್ರಹ ಸಂಪರ್ಕವೆಂದು ಪರಿಗಣಿಸಲಾಗಿದೆ ಎಂದು ಹೇಳಿದ್ದಾರೆ.

ಬಿ.ಎಸ್.ಎನ್.ಎಲ್.ನ ಟವರ್‌ ಗಳಿಗೆ ಅಗತ್ಯ ಬ್ಯಾಟರಿ ಇಲ್ಲದಿರುವುದನ್ನು ಮನಗಂಡು ನವದೆಹಲಿಯಲ್ಲಿ ಬಿ.ಎಸ್.ಎನ್.ಎಲ್‌ನ ಉನ್ನತ ಅಧಿಕಾರಿಗಳನ್ನು ಭೇಟಿಮಾಡಿ, ಚಿಕ್ಕಮಗಳೂರು ಜಿಲ್ಲೆಗೆ ಮೊದಲ ಹಂತದಲ್ಲಿ ಸುಮಾರು ೫೧ ಸ್ಥಳಕ್ಕೆ ಬ್ಯಾಟರಿ ಮಂಜೂರು ಮಾಡಿಸಿದ್ದು, ಈ ಎಲ್ಲಾ ಬ್ಯಾಟರಿಗಳು ಈಗ ಜಿಲ್ಲೆಗೆ ಪೂರೈಕೆಯಾಗಿ ಭರದಿಂದ ಅಳವಡಿಕೆ ಕಾರ್ಯ ನಡೆಯುತ್ತಿದೆ ರಾಜ್ಯಕ್ಕೆ ಒಟ್ಟು ಬಿಡುಗಡೆಯಾದ ೯೨ ಬ್ಯಾಟರಿಗಳಲ್ಲಿ ಶೇ.೫೦ಕ್ಕೂ ಹೆಚ್ಚು ಬ್ಯಾಟರಿಗಳು ಚಿಕ್ಕಮಗಳೂರು ಜಿಲ್ಲೆಗೆ ಬಂದಿವೆ ಎಂದು ಹೇಳಿಕೆಯಲ್ಲಿ ವಿವರಿಸಿದರು.

ಇನ್ನೂ ೪೩ ಹಳ್ಳಿಗಳಿಗೆ ಹೊಸ ೪ಜಿ ಟವರ್‌ನ ಬೇಡಿಕೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದು, ಸರ್ವೆ ಕಾರ್ಯ ಪ್ರಗತಿಯಲ್ಲಿದೆ. ಇಷ್ಟೆಲ್ಲಾ ಟವರ್‌ಗಳೂ ಬಂದರೂ ಇನ್ನೂ ಕೆಲವು ಕುಗ್ರಾಮದ ಗ್ರಾಹಕರಿಗೆ ಸಂಪರ್ಕ ಸಿಗದೇ ಇರಬಹುದೆಂಬ ಕಾರಣಕ್ಕೆ ಅಂತಹ ಗ್ರಾಹಕರಿಗೆ ನೇರವಾಗಿ ಉಪಗ್ರಹದ ಮೂಲಕ ಸಂಪರ್ಕ ಕಲ್ಪಿಸುವ ಬಿ.ಎಸ್.ಎನ್.ಎಲ್‌ನ ಯೋಜನೆ ಜಿಲ್ಲೆಗೂ ವಿಸ್ತರಿಸುವಂತೆ ಕೇಂದ್ರದ ಮಂತ್ರಿ ಮತ್ತು ಬಿ.ಎಸ್.ಎನ್.ಎಲ್ ನ ಅಧಿಕಾರಿಗಳಿಗೆ ನಿರಂತರ ಮನವಿ ಸಲ್ಲಿಸಿದ್ದು ಆಶಾದಾಯಕ ಫಲಿತಾಂಶ ನೀರಿಕ್ಷಿಸಲಾಗುತ್ತಿದೆ. ಚಿಕ್ಕಮಗಳೂರು ಜಿಲ್ಲೆಗೆ ಮೂರು ಎಫ್.ಎಂ ರೇಡಿಯೊ ಕೇಂದ್ರ ಮಂಜೂರಾಗಿದ್ದು, ಆದಷ್ಟು ಶೀಘ್ರ ಸ್ಥಾಪನೆ ಮಾಡುವಂತೆ ಸಂಬಂಧಪಟ್ಟ ಕೇಂದ್ರ ಸರ್ಕಾರದ ಸಚಿವರಿಗೆ ಮನವಿ ಮಾಡಿದ್ದೇನೆ ಎಂದಿದ್ದಾರೆ.

ಮಲೆನಾಡು ಭಾಗದ ಗ್ರಾಮಗಳಲ್ಲಿ ವಿದ್ಯುತ್ ಸಮಸ್ಯೆಯಿಂದ ಬಿ.ಎಸ್.ಎನ್.ಎಲ್‌ನ ಸೇವೆಯಲ್ಲಿ ವ್ಯತ್ಯಯವಾಗುತ್ತಿದ್ದು, ಮೆಸ್ಕಾಂ ಇಲಾಖೆಯೊಂದಿಗೆ ಹಲವಾರು ಸಭೆಗಳನ್ನು ನಡೆಸಿದ್ದು, ನಿರಂತರ ವಿದ್ಯುತ್‌ನ್ನು ಬಿ.ಎಸ್.ಎನ್.ಎಲ್‌ಗೂ ಕೊಡ ಬೇಕೆಂಬ ಪ್ರಸ್ತಾಪನೆ ರಾಜ್ಯ ಸರ್ಕಾರದ ಮುಂದಿದೆ. ರಸ್ತೆ ಅಭಿವೃದ್ಧಿ, ನೀರಿನ ಪೈಪ್ ಜೋಡಣೆ ಮತ್ತು ಮೆಸ್ಕಾಂ ಕಂಬಗಳ ದುರಸ್ತಿ ಸಮಯದಲ್ಲಿ ಬಿ.ಎಸ್.ಎನ್.ಎಲ್ ಮುಖ್ಯ ಓ.ಎಫ್.ಸಿ ಕೇಬಲ್‌ಗಳಿಗೆ ಹಾನಿಯಾಗುತ್ತಿದ್ದು, ಅದರಿಂದ ಸಂಪರ್ಕ ಕಡಿತದ ಸಮಸ್ಯೆ ಆಗುತ್ತಿದ್ದು, ಈ ಎಲ್ಲಾ ಇಲಾಖೆಯೊಂದಿಗೆ ಸಮನ್ವಯ ಸಭೆಗಳನ್ನು ನಡೆಸುವ ಮೂಲಕ ಸಮಸ್ಯೆಗಳನ್ನು ಪರಿಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಸೂಚನೆಯಿಲ್ಲದೆ ಅಗೆದು ಕೇಬಲ್ ಕಡಿತ ಮಾಡಿದರೆ, ಅಂತವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಬಿ.ಎಸ್.ಎನ್.ಎಲ್ ನ ಗ್ರಾಹಕರಿಗೆ ಉತ್ತಮ ಸೇವೆ ನೀಡುವ ಗುರಿ ಹೊಂದಿದ್ದು, ಅದಕ್ಕೆ ಅವಶ್ಯವಿರುವ ಎಲ್ಲಾ ಕಾರ್ಯಗಳನ್ನು ನಿರಂತರವಾಗಿ ಮಾಡಲಾಗುತ್ತಿದೆ. ಆದರೂ ಖಾಂಡ್ಯ ಹೋಬಳಿ ಬಿದಿರೆ ಗ್ರಾಮದ ಬಿ.ಎಸ್.ಎನ್.ಎಲ್ ಟವರ್ ಸೇರಿದಂತೆ, ಚಿಕ್ಕಮಗಳೂರಿನ ಪ್ರತಿ ಟವರ್‌ನಿಂದಲೂ ಗುಣಮಟ್ಟದ ಸೇವೆ ನೀಡಲು ಇಲಾಖೆಯನ್ನು ಅಣಿಗೊಳಿಸುತ್ತಿರುವುದಾಗಿ ಹೇಳಿದ್ದಾರೆ.