ಸಾರಾಂಶ
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ವಿವಿಧ ಇಲಾಖೆ ಅಧಿಕಾರಿಗಳ ಸಭೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಮೂಗ್ತಿಹಳ್ಳಿಯಿಂದ ಮೂಡಿಗೆರೆವರೆಗಿನ ರಾಷ್ಟ್ರೀಯ ಹೆದ್ದಾರಿ 173 ರ ಅಭಿವೃದ್ಧಿಗೆ ಅಗತ್ಯವಿರುವ ಭೂ ಸ್ವಾಧೀನ ಸಂಬಂಧ ಈ ತಿಂಗಳ ಅಂತ್ಯದೊಳಗಾಗಿ ರಾಜ್ಯದ ಕಂದಾಯ ಇಲಾಖೆಗೆ ವರದಿ ಸಲ್ಲಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಉಡುಪಿ- ಚಿಕ್ಕಮಗಳೂರು ಸಂಸದ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದರು.
ಹೆದ್ದಾರಿ ಅಭಿವೃದ್ಧಿ ಸಂಬಂಧ ಗುರುವಾರ ಅಪರ ಜಿಲ್ಲಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿ ಸೇರಿದಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ವಿವಿಧ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ನಂತರ ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು. ಎನ್‌ಎಚ್ 173 ರ ಅಗಲೀಕರಣ ಮತ್ತು ಅಭಿವೃದ್ಧಿ ಕುರಿತು ಪರಿಶೀಲನೆ ನಡೆಸಿದ್ದೇವೆ. ಕಂದಾಯ, ಅರಣ್ಯ, ತೋಟಗಾರಿಕೆ, ಸರ್ವೇ ಇಲಾಖೆ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ್ದೇವೆ. ಮೂಗ್ತಿಹಳ್ಳಿಯಿಂದ ಮೂಡಿಗೆರೆ ವರೆಗೆ 26.32 ಕಿ.ಮೀ. ರಸ್ತೆಗೆ ₹400.69 ಕೋಟಿ ಗಳಿಗೆ ಅನುಮೋದನೆ ನೀಡಲಾಗಿತ್ತು. ಇದಕ್ಕೆ ಒಂದು ಬಾರಿ ಟೆಂಡರ್ ಆಗಿತ್ತು. ಆದರೆ ಭೂಸ್ವಾಧೀನ ಪ್ರಕ್ರಿಯೆ ಅಪೂರ್ಣಗೊಂಡಿರುವುದರಿಂದ ಟೆಂಡರನ್ನು 2025ರ ಮಾರ್ಚ್ 21 ಕ್ಕೆ ಮುಂದೂಡಲಾಗಿತ್ತು. ಅಷ್ಟರೊಳಗಾಗಿ ಭೂ ಸ್ವಾಧೀನ ಪ್ರಕ್ರಿಯೆಗಳು ಮುಗಿದಿ ಅವರಿಗೆ ವರದಿ ಹೋಗಬೇಕೆನ್ನುವುದು ನಿಯಮ ಎಂದು ಹೇಳಿದರು.ಈ ಸಂಬಂಧ ಮೂಡಿಗೆರೆ ಭಾಗದ ಸರ್ವೇ ನಂಬರ್‌ಗಳಿಂದ ಮೂಗ್ತಿಹಳ್ಳಿ ವರೆಗೆ ಜಂಟೀ ಸರ್ವೇಗಳನ್ನು ಮುಗಿಸಿ ವರದಿ ಹಸ್ತಾಂತರಿಸುವುದಾಗಿ ಸರ್ವೇ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಈ ಪೈಕಿ ಮೂಡಿಗೆರೆ ಭಾಗದ ಸರ್ವೇ ಮುಗಿದಿದೆ. ಚಿಕ್ಕಮಗಳೂರು ಭಾಗದ ಸರ್ವೇ ವರದಿಯನ್ನು ಇಂದು ಸಂಜೆ ಒಳಗಾಗಿ ಹಸ್ತಾಂತರಿಸುವುದಾಗಿ ತಿಳಿಸಿದ್ದಾರೆ ಎಂದರು.
ಒಟ್ಟು 231 ಮಂದಿ ರೈತರಿಗೆ ಭೂಸ್ವಾಧೀನದ ಪರಿಹಾರ ಸಿಗಬೇಕಿದೆ. ಇನ್ನುಳಿದ ಸರ್ಕಾರಿ ಭೂಮಿಯೂ ಇದೆ. ಬಹುತೇಕ ರೈತರು ಭೂಮಿ ನೀಡಲು ಸಿದ್ದರಿದ್ದೇವೆ. ಸಕಾಲದಲ್ಲಿ ಪರಿಹಾರ ನೀಡಿ ಎಂದು ಹೇಳುತ್ತಿದ್ದಾರೆ. ಈ ಎಲ್ಲಾ ಹಿನ್ನೆಲೆಯಲ್ಲಿ 26 ಕಿ.ಮೀ.ರಸ್ತೆಗೆ ಸಂಬಂಧಿಸಿದಂತೆ ಯೋಜನೆ ರೂಪಿಸಲಾಗುತ್ತಿದೆ ಎಂದು ಹೇಳಿದರು.ಈ ರಸ್ತೆಯಲ್ಲಿ ಕೆಲವು ಕಡೆಗಳಲ್ಲಿ ಅತ್ಯಂತ ತಿರುವುಗಳು ಹೆಚ್ಚಿವೆ. ಕೆಲವು ಬೈಪಾಸ್ ರಸ್ತೆಗಳ ಸಮಸ್ಯೆಯೂ ಇದೆ. ಕೆಲವೆಡೆ ಭೂ ಕುಸಿತ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ಇದೆಲ್ಲವನ್ನೂ ಪರಿಶೀಲಿಸಲು ವಿವಿಧ ಇಲಾಖೆ ಅಧಿಕಾರಿಗಳ ಜೊತೆ ಸ್ಥಳಕ್ಕೆ ಭೇಟಿ ನೀಡಲಿದ್ದೇವೆ. ಒಟ್ಟಾರೆ ಈ ತಿಂಗಳ ಅಂತ್ಯದೊಳಗೆ ಭೂಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿದ ಪೂರ್ಣ ವರದಿ ಬೆಂಗಳೂರಿನ ಆರ್‌ಓ ಕಚೇರಿ ತಲುಪಲಿದೆ ಎಂದು ಹೇಳಿದರು.
ನಂತರ ದೆಹಲಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅನುಮೋದನೆ ಪಡೆದುಕೊಂಡು ಭೂಮಿ ಸಂಬಂಧ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು. ಬಹಳ ವೇಗವಾಗಿ ಈ ಕಾಮಗಾರಿಗೆ ಚಾಲನೆ ಸಿಗಲಿದೆ ಎಂಬ ಭರವಸೆ ಇದೆ ಎಂದು ತಿಳಿಸಿದರು.ಚಿಕ್ಕಮಗಳೂರು ನಗರದಲ್ಲಿರುವ ಒಂದು ಬೈಪಾಸ್ ರಸ್ತೆಯನ್ನು ಬದಲಿಸಬೇಕು ಎನ್ನುವ ಪ್ರಸ್ತಾವನೆ ಇದೆ. ಅದರ ಬಗ್ಗೆ ಕೆಲವು ತಿದ್ದುಪಡಿ ಸೂಚಿಸಿ ವಾಪಾಸ್ ಕಳುಹಿಸಿದ್ದಾರೆ. ಅದನ್ನೂ ನೋಡಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. 6 ಕೆಸಿಕೆಎಂ 7ಚಿಕ್ಕಮಗಳೂರು- ಮೂಡಿಗೆರೆಯ ರಾಷ್ಟ್ರೀಯ ಹೆದ್ದಾರಿ 173 ರಸ್ತೆಯನ್ನು ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಅವರು ಗುರುವಾರ ಪರಿಶೀಲಿಸಿದರು.