ಏಳನೇ ವೇತನ ಆಯೋಗ ವರದಿ ಜಾರಿಗೊಳಿಸುವಂತೆ ಸಚಿವರಿಗೆ ಮನವಿ

| Published : Jan 29 2024, 01:39 AM IST

ಸಾರಾಂಶ

ರಾಜ್ಯ 7ನೇ ವೇತನ ಆಯೋಗದಿಂದ ಶೀಘ್ರ ವರದಿ ಪಡೆದು ರಾಜ್ಯ ಸರ್ಕಾರಿ ನೌಕರರ ವೇತನ ಬತ್ತೆಗಳನ್ನು ಪೂರ್ಣ ಪ್ರಮಾಣದಲ್ಲಿ ಪರಿಷ್ಕರಿಸಿ ಆದೇಶ ಹೊರಡಿಸಬೇಕು ಎಂದು ಸರ್ಕಾರಿ ನೌಕರರ ಸಂಘವು ಸಚಿವ ಎಂ.ಬಿ.ಪಾಟೀಲ ಅವರಿಗೆ ಮನವಿ ಸಲ್ಲಿಸಿತು.

ಕನ್ನಡಪ್ರಭ ವಾರ್ತೆ ವಿಜಯಪುರ

7ನೇ ವೇತನ ಆಯೋಗ ವರದಿಯನ್ನು ಶೀಘ್ರ ಜಾರಿಗೊಳಿಸುವಂತೆ ಒತ್ತಾಯಿಸಿ ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಘಟಕದಿಂದ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಅವರಿಗೆ ಮನವಿ ಸಲ್ಲಿಸಿದರು.

ಜಿಲ್ಲಾಧ್ಯಕ್ಷ ಸುರೇಶ ಶಡಶ್ಯಾಳ ಮಾತನಾಡಿ, ರಾಜ್ಯ 7ನೇ ವೇತನ ಆಯೋಗದಿಂದ ಶೀಘ್ರ ವರದಿ ಪಡೆದು ರಾಜ್ಯ ಸರ್ಕಾರಿ ನೌಕರರ ವೇತನ ಬತ್ತೆಗಳನ್ನು ಪೂರ್ಣ ಪ್ರಮಾಣದಲ್ಲಿ ಪರಿಷ್ಕರಿಸಿ ಆದೇಶ ಹೊರಡಿಸಬೇಕು. ಹೊಸ ಪಿಂಚಣಿ ಯೋಜನೆ ರದ್ದುಪಡಿಸಿ ಹಳೆ ಪಿಂಚಣಿ ಯೋಜನೆ ಮರು ಜಾರಿಗೊಳಿಸಬೇಕು. ಕರ್ನಾಟಕ ರಾಜ್ಯ ಆರೋಗ್ಯ ಸಂಜೀವಿನಿ ಯೋಜನೆ ಅನುಷ್ಠಾನಗೊಳಿಸಿ ಸರ್ಕಾರಿ ನೌಕರರ ಹಿತ ಕಾಪಾಡಬೇಕು ಎಂದು ಸಚಿವರಿಗೆ ಮನವಿ ಮಾಡಿದರು.

ಸರ್ಕಾರ ಈಗಾಗಲೆ ನೌಕರರಿಗೆ ನೀಡಿರುವ ಶೇ.17ರಷ್ಟು ಮಧ್ಯಂತರ ಪರಿಹಾರ ಭತ್ಯೆ ಹಾಗೂ ಶೇ.40 ಪಿಟಮೆಂಟ್ ಸೌಲಭ್ಯ 01.07.2022 ರಿಂದ ಜಾರಿಗೆ ಬರುವಂತೆ ಆದೇಶ ಹೊರಡಿಸಲು ಕ್ರಮ ಕೈಗೊಳ್ಳಬೇಕು. ರಾಜ್ಯದ ಎನ್‌ಪಿಎಸ್ ನೌಕರರ ಜೀವನ ನಿರ್ವಹಣೆ ಹಾಗೂ ಸಂಧ್ಯಾ ಕಾಲದ ಬದುಕು ಅತ್ಯಂತ ಕಷ್ಟಕರವಾಗಿರುವುದರಿಂದ ಎನ್‌ಪಿಎಸ್ ನೌಕರರನ್ನು ಒಪಿಎಸ್ ವ್ಯಾಪ್ತಿಗೆ ತರುವುದು ಸರ್ಕಾರದ ಜವಾಬ್ದಾರಿಯಾಗಿರುತ್ತದೆ. ಈಗಾಗಲೇ ಪಂಜಾಬ, ರಾಜಸ್ಥಾನ, ಛತ್ತೀಸಗಢ್‌, ಜಾರ್ಖಂಡ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ ಹಳೆ ಪಿಂಚಣಿ ಯೋಜನೆ ಜಾರಿಗೆ ತಂದಿರುವಂತೆ ಹಾಗೂ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯಂತೆ ಕರ್ನಾಟಕದಲ್ಲಿಯೂ ಎನ್‌ಪಿಎಸ್ ಯೋಜನೆಯನ್ನು ರದ್ದುಗೊಳಿಸಿ ಹಳೆ ಪಿಂಚಣಿ ಯೋಜನೆ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.

ರಾಜ್ಯ ಸರ್ಕಾರಿ ನೌಕರರು ಮತ್ತು ಅವರ ಅವಲಂಬಿತ ಕುಟುಂಬ ಸದಸ್ಯರಿಗೆ ನಗದುರಹಿತ ವೈದ್ಯಕೀಯ ಚಿಕಿತ್ಸೆ ನೀಡುವ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ್ನು ಕೂಡಲೇ ಜಾರಿಗೊಳಿಸಿ ಒತ್ತಡದ ನಡುವೆಯೂ ಕಾರ್ಯನಿರ್ವಹಿಸುವ ಸರ್ಕಾರಿ ನೌಕರರಿಗೆ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಅನುಕೂಲ ಮಡಿಕೊಡಿಬೇಕೆಂದು ವಿನಂತಿಸಿದರು.

ಮನವಿ ಸ್ವೀಕರಿಸಿದ ಸಚಿವ ಎಂ.ಬಿ.ಪಾಟೀಲ ಅವರು, ಮುಖ್ಯಮಂತ್ರಿಗಳ ಗಮನಕ್ಕೆ ತಂದು ನಿಮ್ಮ ಬೇಡಿಕೆಗಳ ಈಡೇರಿಕೆಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ನೌಕರರ ಸಂಘದ ಪದಾಧಿಕಾರಿಗಳಾದ ಜುಬೇರ ಕೆರೂರ, ವಿಜಯಕುಮಾರ ಹತ್ತಿ, ವಿಶ್ವನಾಥ ಬೆಳ್ಳೆನವರ, ರಾಜಶೇಖರ ಧೈವಾಡಿ, ಗಂಗಾಧರ ಜೆವೂರ, ರಾಮು ರಾಠೋಡ, ಆರ್.ಎಸ್.ಚವ್ಹಾಣ, ಎಚ್.ಎಸ್.ಇಂಡಿ, ನಿಜು ಮೇಲಿನಕೇರಿ, ರವಿಂದ್ರ ಉಗಾರ, ಎಸ್.ಎನ್. ಪಡಶೆಟ್ಟಿ, ಅಜೀರ್ ಅರಳಿಮಟ್ಟಿ, ಮಂಜು ಅರೇಶಂಕರ, ಬಶೀರ ನದಾಫ, ಬಿ.ಎಸ್. ಗಿರಿನಿವಾಸ, ಯಾಸೀನ ಮೋಮಿನ, ವೀರಭದ್ರಪ್ಪ, ಎಸ್.ಎಸ್. ಅಕ್ಕಿ, ಎಸ್.ಎಸ್. ಕೋರಿ ಉಪಸ್ಥಿತರಿದ್ದರು.