ಸಾರಾಂಶ
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಆರೋಗ್ಯ ನಿಧಿ ಹೆಚ್ಚಳ ಮಾಡುವಂತೆ ತಾಲೂಕು ಕಾರ್ಯನಿತರ ಪತ್ರಕರ್ತರ ಸಂಘದ ಸದಸ್ಯರು ಪುರಸಭೆ ಸದಸ್ಯರು ಹಾಗೂ ಅಧಿಕಾರಿಗಳಿಗೆ ಮನವಿ ಸಲ್ಲಿಸದರು.ಪಟ್ಟಣದ ಪುರಸಭೆ ಆವರಣದಲ್ಲಿ ಪುರಸಭಾ ಸದಸ್ಯರಾದ ಎಂ.ಎಲ್ ದಿನೇಶ್, ದಯಾನಂದ್ ಹಾಗೂ ಕಂದಾಯ ಅಧಿಕಾರಿ ಸೋಮಶೇಖರ್ ಅವರನ್ನು ಭೇಟಿ ಮಾಡಿದ ಸದಸ್ಯರು, ಈ ಹಿಂದೆ ಪತ್ರಕರ್ತರ ಆರೋಗ್ಯ ನಿಧಿಗಾಗಿ ಮೀಸಲಿಟ್ಟಿರುವ 2 ಲಕ್ಷ ರು. ಹಣವನ್ನು ಮುಂಬರುವ ಬಜೆಟ್‌ನಲ್ಲಿ 5 ಲಕ್ಷ ರು. ಗಳಿಗೆ ಹೆಚ್ಚಳ ಮಾಡುವಂತೆ ವಿನಂತಿಸಿದರು.
ಆರೋಗ್ಯ ನಿಧಿ ಹೆಚ್ಚಳ ಮಾಡುವುದರಿಂದ ಪುರಸಭಾ ವ್ಯಾಪ್ತಿಯ ಪತ್ರಕರ್ತರಿಗೆ ಅನಾರೋಗ್ಯ ಅಥವಾ ಅಪಘಾತಕ್ಕೆ ಒಳಗಾದಾಗ ಚಿಕಿತ್ಸೆ ಭರಿಸಲು ಅನುಕೂಲವಾಗಲಿದೆ. ಹಾಗಾಗಿ ಕ್ಷೇಮಾಭಿವೃದ್ಧಿ ಅಥವಾ ಆರೋಗ್ಯ ನಿಧಿಗೆ ಹೆಚ್ಚಿನ ಮೀಸಲಿಡಬೇಕಾಗಿ ಮನವಿ ಮಾಡಿದರು.ಈ ವೇಳೆ ಪತ್ರಕರ್ತರ ಸಂಘದ ಅಧ್ಯಕ್ಷ ಸೋಮಶೇಖರ್, ಜಿಲ್ಲಾ ಉಪಾಧ್ಯಕ್ಷ ನಂಜೇಗೌಡ, ತಾಲೂಕು ಪ್ರಧಾನ ಕಾರ್ಯದರ್ಶಿ ಎಲ್.ವಿ.ನವೀನ್‌ಕುಮಾರ್, ಉಪಾಧ್ಯಕ್ಷ ಕೃಷ್ಣಮೂರ್ತಿ, ಸದಸ್ಯರಾದ ಅಲ್ಲಾಪಟ್ಟಣ ಸತೀಶ್, ಗಂಜಾಂ ಮಂಜು, ಕಾರೇಕುರ ವಿನಯ್, ಎಸ್.ಕುಮಾರ್, ಕೆ.ಜೆ.ಲೋಕೇಶ್, ಬಿ.ಸಿ ಸಂತೋಷ್‌ಕುಮಾರ್ ಇದ್ದರು.
ಬಡ ಮಹಿಳೆಗೆ ಶ್ರೀಕ್ಷೇತ್ರದಿಂದ ಮಾಶಾಸನ, ಸವಲತ್ತು ವಿತರಣೆಕನ್ನಡಪ್ರಭ ವಾರ್ತೆ ನಾಗಮಂಗಲ
ಗ್ರಾಮೀಣ ಪ್ರದೇಶದ ಬಡ ಕುಟುಂಬಗಳ ಜೀವನ ನಿರ್ವಹಣೆ ಮತ್ತು ಔಷಧೋಪಚಾರಕ್ಕಾಗಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಹಲವು ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದು ಸಂಸ್ಥೆ ಬೆಳ್ಳೂರು ಹೋಬಳಿ ಮೇಲ್ವಿಚಾರಕ ಕಾರ್ತಿಕ್ ತಿಳಿಸಿದರು.ತಾಲೂಕಿನ ಅಳೀಸಂದ್ರ ಗ್ರಾಮದ ಲಕ್ಷ್ಮಮ್ಮ ಎಂಬ ಬಡಕುಟುಂಬದ ಮಹಿಳೆಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾಶಾಸನ ವಿತರಿಸಿ ಮಾತನಾಡಿ, ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರ ಆಶಯದಂತೆ ಗ್ರಾಮೀಣ ಪ್ರದೇಶದ ಅಶಕ್ತರು, ಅನಾಥರು, ನಿರ್ಗತಿಕರು ಮತ್ತು ವಿಶೇಷ ಚೇತನರನ್ನು ಗುರುತಿಸಿ ಅವರ ದಿನನಿತ್ಯದ ಜೀವನಕ್ಕೆ ಪೂರಕವಾದ ಮಾಶಾಸನ ಸೇರಿದಂತೆ ಹಲವು ಬಗೆಯ ಸವಲತ್ತುಗಳನ್ನು ನೀಡಲಾಗುತ್ತಿದೆ ಎಂದರು.
ತಾಲೂಕಿನ ಬೆಳ್ಳೂರು ಹೋಬಳಿಯಲ್ಲಿ 25 ಮಂದಿಗೆ ಪ್ರತಿ ತಿಂಗಳು ತಲಾ 1 ಸಾವಿರದಂತೆ ವರ್ಷಕ್ಕೆ 3 ಲಕ್ಷ ರು. ಮಾಶಾಸನ ರೂಪದಲ್ಲಿ ನೀಡಲಾಗುತ್ತಿದೆ. ಸಂಸ್ಥೆ ಸೌಲಭ್ಯದ ಜೊತೆಗೆ ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಪಡೆದು ಸ್ವಾವಲಂಬಿ ಬದುಕು ನಡೆಸಬೇಕು ಎಂದರು.ಈ ವೇಳೆ ಗ್ರಾಪಂ ಸದಸ್ಯೆ ಕೆಂಪಮ್ಮ, ಸಂಸ್ಥೆ ಕೋಶಾಧಿಕಾರಿ ಸುಮಿತ್ರ, ಲಕ್ಷ್ಮಿ, ಬಸವರಾಜು ಸೇರಿದಂತೆ ಸ್ವಸಹಾಯ ಸಂಘಗಳ ಸದಸ್ಯರು ಇದ್ದರು.