ದುರ್ಬಲ ವರ್ಗಗಳಿಗೆ ನ್ಯಾಯ ಒದಗಿಸುವಂತೆ ತಹಸೀಲ್ದಾರ್ ಗೆ ಮನವಿ ಸಲ್ಲಿಕೆ

| Published : Aug 15 2025, 01:00 AM IST

ದುರ್ಬಲ ವರ್ಗಗಳಿಗೆ ನ್ಯಾಯ ಒದಗಿಸುವಂತೆ ತಹಸೀಲ್ದಾರ್ ಗೆ ಮನವಿ ಸಲ್ಲಿಕೆ
Share this Article
  • FB
  • TW
  • Linkdin
  • Email

ಸಾರಾಂಶ

10 ವರ್ಷಗಳ ಹಿಂದೆ 165 ಕೋಟಿ ರು. ವೆಚ್ಚಮಾಡಿ ಸರ್ಕಾರ ನಡೆಸಿದ ಜಾತಿ ಸಮೀಕ್ಷೆ ಅಪ್ರಸ್ತುತವೆಂದು ಕೈ ಬಿಡಲಾಗಿದೆ. ಹೊಸದಾಗಿ ಜಾತಿ ಸಮೀಕ್ಷೆಗೆ ಸರ್ಕಾರ ಮುಂದಾಗಿದೆ. ನೂತನ ಜಾತಿ ಸಮೀಕ್ಷೆಯಲ್ಲಿ ಹಿಂದಿನ ತಪ್ಪುಗಳು ಮರುಕಳಿಸದಂತೆ ಮೂಲ ಕುಲಶಾಸ್ತ್ರ ಅಧ್ಯಯನ ಮಾಡಿ ಜಾತಿ ಸಮೀಕ್ಷೆ ಮಾಡಬೇಕು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಸರ್ಕಾರ ವೈಜ್ಞಾನಿಕವಾಗಿ ಜಾತಿ ಸಮೀಕ್ಷೆ ಮಾಡಿ ದುರ್ಬಲ ವರ್ಗಗಳಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ತಾಲೂಕು ನಯನಜ ಕ್ಷತ್ರಿಯ ಸಮಾಜದ ಮುಖಂಡರು ತಹಸೀಲ್ದಾರರಿಗೆ ಮನವಿ ಪತ್ರ ಅರ್ಪಿಸಿದರು.

ಸಮಾಜದ ತಾಲೂಕು ಅಧ್ಯಕ್ಷ ಕೆ.ಎಂ.ಶಿವಪ್ಪ ನೇತೃತ್ವದಲ್ಲಿ ಪಟ್ಟಣದ ತಾಲೂಕು ಕಚೇರಿಗೆ ಆಗಮಿಸಿದ ಮುಖಂಡರು ಗ್ರೆಡ್-2 ತಹಸೀಲ್ದಾರ್ ಲೋಕೇಶ್ ಅವರಿಗೆ ಮನವಿ ಪತ್ರ ಅರ್ಪಿಸಿದರು.

ಈ ವೇಳೆ ಕೆ.ಎಂ.ಶಿವಪ್ಪ ಮಾತನಾಡಿ, 10 ವರ್ಷಗಳ ಹಿಂದೆ 165 ಕೋಟಿ ರು. ವೆಚ್ಚಮಾಡಿ ಸರ್ಕಾರ ನಡೆಸಿದ ಜಾತಿ ಸಮೀಕ್ಷೆ ಅಪ್ರಸ್ತುತವೆಂದು ಕೈ ಬಿಡಲಾಗಿದೆ. ಹೊಸದಾಗಿ ಜಾತಿ ಸಮೀಕ್ಷೆಗೆ ಸರ್ಕಾರ ಮುಂದಾಗಿದೆ. ನೂತನ ಜಾತಿ ಸಮೀಕ್ಷೆಯಲ್ಲಿ ಹಿಂದಿನ ತಪ್ಪುಗಳು ಮರುಕಳಿಸದಂತೆ ಮೂಲ ಕುಲಶಾಸ್ತ್ರ ಅಧ್ಯಯನ ಮಾಡಿ ಜಾತಿ ಸಮೀಕ್ಷೆ ಮಾಡಬೇಕು ಎಂದು ಆಗ್ರಹಿಸಿದರು.

ಸಮೀಕ್ಷೆಯ ವೇಳೆ ಮೌಖಿಕ ಹೇಳಿಕೆಗೆ ಆದ್ಯತೆ ನೀಡದೆ ದಾಖಲೆಗಳ ಆದಾರದ ಮೇಲೆ ವ್ಯಕ್ತಿಗಳ ಜಾತಿ ಗುರುತಿಸಿ ದಾಖಲಿಸಬೇಕು. ನಮ್ಮ ರಾಜ್ಯದಲ್ಲಿ ಹೊರ ರಾಷ್ಟ್ರಗಳಿಂದ ಮತ್ತು ಹೊರ ರಾಜ್ಯಗಳಿಂದ ಬಂದು ನೆಲೆಸಿರುವವರ ಸಂಖ್ಯೆ ಗಮನಾರ್ಹವಾಗಿದೆ. ಇವರ ಮಾತೃಭಾಷೆ ಮತ್ತು ಮೂಲ ಜಾತಿ ದೃಢೀಕರಣ ದಾಖಲೆ ಪರಿಸೀಲಿಸಬೇಕು ಎಂದು ಒತ್ತಾಯಿಸಿದರು.

ಸರ್ಕಾರ ವೈಜ್ಞಾನಿಕವಾಗಿ ಜಾತಿ ಸಮೀಕ್ಷೆ ನಡೆಸದಿದ್ದರೆ ಮೀಸಲಾತಿ ಮೂಲ ಉದ್ದೇಶ ಈಡೇರುವುದಿಲ್ಲ. ಜಾತಿ ಸಮೀಕ್ಷೆಯಲ್ಲಿ ಆಧಾರ್ ಕಾರ್ಡ್, ಪೂರ್ವಿಕರ ಕಾಲದಿಂದ ವಂಶಪರಂಪರೆಯ ತಂದೆ-ತಾಯಿಗಳು ಪಡೆಯಲಾಗಿರುವ ಜಾತಿ ದೃಢೀಕರಣ ಪತ್ರ, ಶಾಲಾ ದಾಖಲಾತಿ ಪತ್ರಗಳನ್ನು ಪರಿಸೀಲಿಸಿ ಕ್ರಮಬದ್ದ ಮಾನದಂಡ ಅನುಸರಿಸಿ ಸಮೀಕ್ಷೆ ಮಾಡಿದರೆ ನೈಜ ಜಾತಿ ಸಮುದಾಯಗಳಿಗೆ ನ್ಯಾಯ ಸಿಗುತ್ತದೆ ಎಂದರು.

ಮೊದಲೇ ಜಾತಿಯ ಇತಿಹಾಸ ತಜ್ಞರೊಂದಿಗೆ ಸಮಾಲೋಚಿಸಿ ಈ ಬಗ್ಗೆ ಸೂಕ್ತ ಗೈಡ್ ಲೈನ್ ಆಳವಡಿಸಿಕೊಳ್ಳುವುದು ಉತ್ತಮ ಕಾನೂನು ಕ್ರಮವಾಗಿದೆ. ಈ ಮೂಲಕ ಹಿಂದುಳಿದ ಸಮುದಾಯಗಳಿಗೆ ನ್ಯಾಯ ದೊರಕಿಸುವಂತೆ ಆಗ್ರಹಿಸಿದರು.

ಈ ವೇಳೆ ಸಮಾಜದ ಮುಖಂಡರಾದ ಗೋವಿಂದರಾಜು, ಸಂತೋಷ್, ಮರಿಯಯ್ಯ, ಕೆ.ಆರ್.ಮಂಜುನಾಥ್, ಎಚ್.ಎನ್.ಮಂಜುನಾಥ್, ಕೆ.ಎಂ.ಗಿರೀಶ್, ಕೆ.ಎಸ್.ಶ್ಯಾಂಪ್ರಸಾದ್, ಪುಟ್ಟಸ್ವಾಮಿ ಎಚ್.ಪಿ.ಸುನೀಲ್ ಮತ್ತಿತರರಿದ್ದರು.