ಬ್ಯಾಡಗಿ: ಪಟ್ಟಣದ ಮುಖ್ಯರಸ್ತೆ ಅಗಲೀಕರಣ ಪ್ರಕ್ರಿಯೆಗೆ ಮತ್ತಷ್ಟು ವೇಗ ನೀಡಲಾಗುತ್ತಿದ್ದು, ಪರಿಹಾರದ ಬಾಕಿ ಮೊತ್ತ ರು.16 ಕೋಟಿ ಉಪವಿಭಾಗಾಧಿಕಾರಿಗಳ ಖಾತೆಗೆ ಜಮಾ ಆಗಿದ್ದು, ಕೂಡಲೇ ಮುಖ್ಯರಸ್ತೆಯ ಫಲಾನುಭವಿಗಳು ಪರಿಹಾರದ ಹಣವನ್ನು ಪಡೆದು ಸ್ವಯಂ ಅಂಗಡಿ ತೆರವುಗೊಳಿಸುವ ಮೂಲಕ ಅಗಲೀಕರಣಕ್ಕೆ ಸಹಕರಿಸುವಂತೆ ಮನವಿ ಮಾಡಿದ್ದಾರೆ.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಮೊದಲು ಜೆಎಂಸಿ ಮಾಡಿದಾಗ ಅದಕ್ಕೆ 9 ಕೋಟಿ ರು. ಬೇಕಾಗಿತ್ತು. ಇದಾದ ಬಳಿಕ ಹೆಚ್ಚುವರಿ ರು. 16 ಕೋಟಿ ಅವಶ್ಯವಿರುವುದಾಗಿ ಅಧಿಕಾರಿಗಳು ತಿಳಿಸಿದಾಗ ಕೂಡಲೇ ಮುಖ್ಯಮಂತ್ರಿಗಳ ಬಳಿ ಮನವಿ ಮಾಡಿಕೊಂಡಾಗ ರು. 16 ಕೊಟಿ ಬಿಡುಗಡೆ ಮಾಡಿದ್ದು ಅನುದಾನದ ಮೊತ್ತ ಹಾವೇರಿ ಉಪವಿಭಾಗಾಧಿಕಾರಿಗಳ ಖಾತೆಗೆ ಜಮಾ ಆಗಿದೆ ಎಂದರು.ಕೋರ್ಟೀಗೆ ಹಣ ಕಟ್ಟುವ ಮುನ್ನ ಪಡೆದುಕೊಳ್ಳಿ: ಕೆಲ ಅಭಿವೃದ್ಧಿ ವಿರೋಧಿಗಳು ಅಗಲೀಕರಣಕ್ಕೆ ಸರಕಾರದಿಂದ ಹಣವಿಲ್ಲ ಎಂದು ಜನರಲ್ಲಿ ಇಲ್ಲ ಸಲ್ಲದ ವದಂತಿ ಹರಡಿಸುತ್ತಿದ್ದಾರೆ. ಆದರೆ ಸರ್ಕಾರ ಪರಿಹಾರದ ಮೊತ್ತ ನೀಡಲು ರು.16 ಕೋಟಿ ಹಾಗೂ ರಸ್ತೆ ಅಭಿವೃದ್ಧಿಗೆ ರು.14.60 ಕೋಟಿ ಹಣವಿದ್ದು, ಪರಿಹಾರ ಪಡೆದುಕೊಳ್ಳದೇ ಇರುವವರು ಕೂಡಲೇ ಪಡೆದು ಅಗಲೀಕರಣಕ್ಕೆ ಸಹಕಾರ ನೀಡಿ ಎಂದ ಅವರು, ನಿಯಮದಂತೆ ಹಣ ನ್ಯಾಯಾಲಯಕ್ಕೆ ಸಲ್ಲಿಸುವ ಮುನ್ನವೇ ಫಲಾನುಭವಿಗಳು ಹಣ ಪಡೆದು ಕಾನೂನು ರೀತ್ಯ ಅಗಲೀಕರಣ ಕಾರ್ಯಕ್ಕೆ ಅನುವು ಮಾಡಿಕೊಡುವಂತೆ ಮನವಿ ಮಾಡಿದರು.
ಅಭಿವೃದ್ಧಿ ವಿಚಾರದಲ್ಲಿ ರಾಜಕಾರಣ ಬೇಡ: ಹಿಂದಿನ ಎಲ್ಲಾ ಅರ್ಜಿ ವಜಾಗೊಳಿಸಿ ಫೆ.22, 2026ರಂದು ಹೈಕೋರ್ಟ್ ಧಾರವಾಡ ಪೀಠ ಮುಖ್ಯರಸ್ತೆ ಅಗಲೀಕರಣಕ್ಕೆ ಹಸಿರು ನಿಶಾನೆ ತೋರಿಸಿತ್ತು. ಆದರೆ ಕಳೆದ ವರ್ಷ ಜೂ.10ರಂದು ನಡೆದ ಬೃಹತ್ ಪ್ರತಿಭಟನೆಯಲ್ಲಿ ಅಗಲೀಕರಣಕ್ಕೆ ಕೈಜೋಡಿಸಿದ್ದ ಬಿಜೆಪಿಯ ನಿಲುವನ್ನು ಸ್ವಾಗತಿಸಿದ್ದೆ, ಅದರೆ ಮೊನ್ನೆಯಷ್ಟೇ ಪುರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಬಿಜೆಪಿಯ ಚನ್ನವೀರಪ್ಪ ಶೆಟ್ಟರ ಅಗಲೀಕರಣವಾಗದಂತೆ ಕೋರ್ಟ್ ಮೆಟ್ಟಿಲು ಹತ್ತಿದ್ದು ಮನಸ್ಸಿಗೆ ನೋವುಂಟು ಮಾಡಿದೆಯಲ್ಲದೇ ಬಿಜೆಪಿ ದ್ವಿಮುಖ ನೀತಿ ಕೈಬಿಡುವಂತೆ ಮನವಿ ಮಾಡಿದರು.ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಅಗಲೀಕರಣ ಕಾರ್ಯಕ್ಕೆ ಎದುರಾಗಿದ್ದ ಎಲ್ಲಾ ವಿಘ್ನಗಳನ್ನು ಪರಿಹರಿಸಿದ್ದೇವೆ. ಪರಿಹಾರದ ಮೊತ್ತ ಪಡೆದವರು ಸ್ವಯಂ ಪ್ರೇರಿತರಾಗಿ ತಮ್ಮ ಕಟ್ಟಡಗಳನ್ನು ತೆರವುಗೊಳಿಸಿಕೊಂಡಲ್ಲಿ ಅಗಲೀಕರಣಕ್ಕೆ ಇನ್ನಷ್ಟು ವೇಗ ನೀಡಬಹುದು. ಕೆಲವೇ ದಿನಗಳಲ್ಲಿ ಅಗಲೀಕರಣ ಪ್ರಕ್ರಿಯೆಗೆ ಚಾಲನೆ ನೀಡಲಿದ್ದೇವೆ ಇದರಲ್ಲಿ ಯಾವುದೇ ಸಂಶಯ ಬೇಡ ಎಂದರು.