ಅಂಬಲಪಾಡಿಯಲ್ಲಿ ಸರ್ವಿಸ್ ರಸ್ತೆಯ ಅಗಲೀಕರಣ ಸಂಬಂಧಿತ ಕಾಮಗಾರಿಗಳನ್ನು ಶೀಘ್ರ ಅನುಷ್ಠಾನಗೊಳಿಸುವಂತೆ ರಾ.ಹೆ. 66 ಅಂಬಲಪಾಡಿ ಬಳಕೆದಾರರ ಹಿತ ರಕ್ಷಣಾ ವೇದಿಕೆ ವತಿಯಿಂದ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಮೂಲಕ ಮನವಿ ಸಲ್ಲಿಸಲಾಯಿತು.
ಕನ್ನಡಪ್ರಭ ವಾರ್ತೆ ಉಡುಪಿ
ರಾಷ್ಟ್ರೀಯ ಹೆದ್ದಾರಿ 66ರ ಅಂಬಲಪಾಡಿಯಲ್ಲಿ ಸರ್ವಿಸ್ ರಸ್ತೆಯ ಅಗಲೀಕರಣ ಸಂಬಂಧಿತ ಕಾಮಗಾರಿಗಳನ್ನು ಶೀಘ್ರ ಅನುಷ್ಠಾನಗೊಳಿಸುವಂತೆ ರಾ.ಹೆ. 66 ಅಂಬಲಪಾಡಿ ಬಳಕೆದಾರರ ಹಿತ ರಕ್ಷಣಾ ವೇದಿಕೆ ವತಿಯಿಂದ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಮೂಲಕ ಮನವಿ ಸಲ್ಲಿಸಲಾಯಿತು.ರಾ.ಹೆ.66 ಅಂಬಲಪಾಡಿಯಲ್ಲಿ ಅಗಲ ಕಿರಿದಾಗಿರುವ ಸರ್ವಿಸ್ ರಸ್ತೆಯನ್ನು ಮಳೆ ನೀರು ಹರಿಯುವ ಚರಂಡಿ ಸಹಿತ ಅಗಲೀಕರಣಗೊಳಿಸುವಂತೆ, ಅಂಬಲಪಾಡಿ ಅಂಡರ್ ಪಾಸ್‌ನ ಪೂರ್ವ ಮತ್ತು ಪಶ್ಚಿಮ ಭಾಗದಲ್ಲಿ ಉಡುಪಿ ನಗರವನ್ನು ಸಂಪರ್ಕಿಸುವ ನಗರಸಭೆಯ ಸ್ವಾಧೀನದಲ್ಲಿರುವ ರಸ್ತೆಯನ್ನು ಅಂಡರ್ ಪಾಸ್ ದ್ವಾರಕ್ಕೆ ಸಮನಾಗಿ ಇದೇ ಅಗಲೀಕರಣ ಕಾಮಗಾರಿಯಲ್ಲಿ ಕಾರ್ಯಗತಗೊಳಿಸುವಂತೆ, ಅಂಬಲಪಾಡಿ ಅಂಡರ್ ಪಾಸ್ ಜಂಕ್ಷನ್ ರಸ್ತೆಯನ್ನು ರಾ.ಹೆ. ಪ್ರಾಧಿಕಾರದ ನಿಯಮದಂತೆ ಅಂಡರ್ ಪಾಸ್ ಮಧ್ಯದಿಂದ 30 ಮೀಟರ್ ವಿಸ್ತೀರ್ಣದ ಸುತ್ತಳತೆಯಲ್ಲಿ ಅಗಲೀಕರಣಗೊಳಿಸಿ ಲಘು ಮತ್ತು ಘನ ವಾಹನಗಳ ಸುಗಮ, ಸುರಕ್ಷಿತ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಹಾಗೂ ಅಂಬಲಪಾಡಿ ಅಂಡರ್ ಪಾಸ್ ವಿನ್ಯಾಸದಲ್ಲಿರುವಂತೆ ಫೂಟ್ ಪಾತ್ ನಲ್ಲಿ ಸುರಕ್ಷಿತ ಜನ ಸಂಚಾರಕ್ಕಾಗಿ ಸರ್ವಿಸ್ ರಸ್ತೆಗೆ ಟ್ರಾಫಿಕ್ ಸಿಗ್ನಲ್ ಅಳವಡಿಸುವಂತೆ ಮನವಿಯಲ್ಲಿ ಕೋರಲಾಗಿದೆಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಂಸದ ಕೋಟ ಅವರು ಮನವಿಯನ್ನು ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಗರಿ ಅವರಿಗೆ ಸಲ್ಲಿಸಿ ಮನವಿಯಲ್ಲಿ ಉಲ್ಲೇಖಿಸಿರುವ ಬೇಡಿಕೆಗಳ ಈಡೇರಿಕೆಗೆ ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ರಾಹೆ 66 ಅಂಬಲಪಾಡಿ ಬಳಕೆದಾರರ ಹಿತರಕ್ಷಣಾ ವೇದಿಕೆ ಸಂಚಾಲಕ ಭಾಸ್ಕರ್ ಶೆಟ್ಟಿ ಕಡೆಕಾರು, ಅಂಬಲಪಾಡಿ ವಾರ್ಡ್ ನಿಕಟಪೂರ್ವ ನಗರಸಭಾ ಸದಸ್ಯ ಹರೀಶ್ ಶೆಟ್ಟಿ, ಅಂಬಲಪಾಡಿ ಗ್ರಾಪಂ ಮಾಜಿ ಉಪಾಧ್ಯಕ್ಷ ಶಿವಕುಮಾರ್ ಅಂಬಲಪಾಡಿ, ಶ್ರೀಕಾಂತ್ ಶೆಟ್ಟಿ ಅಂಬಲಪಾಡಿ ಮತ್ತಿತರರು ಉಪಸ್ಥಿತರಿದ್ದರು.