ಸಾರಾಂಶ
ಮನವಿ ಪತ್ರವನ್ನು ದೇವಳದ ಆಡಳಿತ ಅಧಿಕಾರಿ ನವೀನ್ ಕುಮಾರ್ ಭಂಡಾರಿ ಅವರಿಗೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಉಮೇಶ್ ನಾಯಕ್ ನೀಡಿದರು.
ಕನ್ನಡಪ್ರಭ ವಾರ್ತೆ ಪುತ್ತೂರು
ಇತಿಹಾಸ ಪ್ರಸಿದ್ಧ ಮಹತೋಭಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಶಾಸನಗಳನ್ನು ಸಂರಕ್ಷಿಸುವ ಹಾಗೂ ಶಾಸನ ಮಂಟಪ ಮಾಡುವ ಕುರಿತು ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ದೇವಾಲಯದ ಆಡಳಿತಾಧಿಕಾರಿಗೆ ಮಂಗಳವಾರ ಮನವಿ ನೀಡಲಾಯಿತು. ಮನವಿಯಲ್ಲಿ ದೇವಸ್ಥಾನದ ಹೊರಪ್ರಾಂಗಣದಲ್ಲಿ ಇರುವ ಪುರಾತನ ಶಾಸನಗಳನ್ನು ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಶಾಸನ ಮಂಟಪ ನಿರ್ಮಿಸಿ ಅವುಗಳನ್ನು ಸಂರಕ್ಷಣೆ ಮಾಡಬೇಕು. ಸದರಿ ಶಾಸನಗಳು ಸುಮಾರು ೧೨ನೇ ಶತಮಾನಕ್ಕೆ ಸೇರಿದ ಪ್ರಾಚೀನ ಕನ್ನಡ ಶಾಸನಗಳಾಗಿವೆ. ೧೨ನೇ ಶತಮಾನದಲ್ಲಿ ಪ್ರಚಲಿತದಲ್ಲಿ ಇದ್ದ ಕನ್ನಡ ಭಾಷೆ, ಲಿಪಿ, ರಾಜಾಡಳಿತ, ಆಚಾರ -ವಿಚಾರ, ಸಂಪ್ರದಾಯ ಸಂಸ್ಕೃತಿ, ಧಾರ್ಮಿಕ ಆಚರಣೆಗಳು ಹಾಗೂ ಇನ್ನಿತರ ವಿಚಾರಗಳ ಮೇಲೆ ಬೆಳಕನ್ನು ಚೆಲ್ಲುವ ಈ ಶಾಸನಗಳಿಗೆ ಶಾಸನ ಮಂಟಪ ನಿರ್ಮಾಣವಾಗಬೇಕು. ರಾಜ್ಯದ ಹಾಗೂ ದೇಶ ವಿದೇಶಗಳ ವಿವಿಧ ಭಾಗಗಳಿಂದ ಇತಿಹಾಸ ಅಧ್ಯಯನ ಮಾಡುವ ಅಧ್ಯಯನಕಾರರು ಇಲ್ಲಿಗೆ ಆಗಮಿಸುತ್ತಾರೆ. ಜೊತೆಗೆ ಸುತ್ತಮುತ್ತಲಿನ ಊರುಗಳಿಂದ ವಿದ್ಯಾರ್ಥಿಗಳು ಈ ಶಾಸನ ಮಂಟಪವನ್ನು ನೋಡಲು ಬರಲಿದ್ದಾರೆ. ಇದರಿಂದಾಗಿ ಪುರಾತನ ಶಾಸನಗಳನ್ನು ಸಂರಕ್ಷಣೆ ಮಾಡಿದ ಸಾರ್ಥಕತೆ ಒಂದೆಡೆಯಾದರೆ ಪ್ರವಾಸೋದ್ಯಮವೂ ಬೆಳೆಯಲಿದೆ. ಇದು ಶಾಸನ ಮಂಟಪದ ಫಲಶ್ರುತಿಯಾಗಲಿದೆ ಎಂದು ಮನವಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಶಾಸನ ಮಂಟಪವನ್ನು ರಚಿಸಲು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿಗೆ ಅವಕಾಶ ನೀಡಬೇಕಾಗಿ ಅಥವಾ ಸದರಿ ಯೋಜನೆಯನ್ನು ದೇವಳದ ಕ್ರಿಯಾಯೋಜನೆಯಲ್ಲಿ ಅಳವಡಿಸಿಕೊಳ್ಳುವಂತೆ ವಿನಂತಿಸಲಾಗಿದೆ.ಮನವಿ ಪತ್ರವನ್ನು ದೇವಳದ ಆಡಳಿತ ಅಧಿಕಾರಿ ನವೀನ್ ಕುಮಾರ್ ಭಂಡಾರಿ ಅವರಿಗೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಉಮೇಶ್ ನಾಯಕ್ ನೀಡಿದರು.