ಈಶ್ವರಮಂಗಲ ವಸತಿ ನಿಲಯ ಅಡುಗೆ ಸಿಬ್ಬಂದಿ ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆ

| Published : Feb 14 2024, 02:18 AM IST

ಸಾರಾಂಶ

ಮಂಗಳವಾರ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಯವರು ಅಡುಗೆ ಸಿಬ್ಬಂದಿಯನ್ನು ಕಡ್ಡಾಯ ರಜೆಯಲ್ಲಿ ಕಳುಹಿಸಿದ್ದಾರೆ ಹಾಗೂ ಇಲ್ಲಿಗೆ ಕೊಂಬೆಟ್ಟು ವಸತಿ ನಿಲಯದ ಅಡುಗೆ ಸಿಬ್ಬಂದಿಯನ್ನು ಬದಲಿ ವ್ಯವಸ್ಥೆ ಮಾಡಲಾಗಿದೆ.

ಕನ್ನಡಪ್ರಭವಾರ್ತೆ ಪುತ್ತೂರು

ವಸತಿ ನಿಲಯದ ಅಡುಗೆ ಸಿಬ್ಬಂದಿ ನಮ್ಮ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಮತ್ತು ಅವರ ವಿರುದ್ಧ ಸೂಕ್ತ ಕಾನೂನು ಕೈಗೊಳ್ಳಬೇಕೆಂದು ಆಗ್ರಹಿಸಿ ಈಶ್ವರಮಂಗಲದಲ್ಲಿರುವ ಮೆಟ್ರಿಕ್‌ಪೂರ್ವ ಪರಿಶಿಷ್ಟ ಪಂಗಡದ ಬಾಲಕರ ವಸತಿ ನಿಲಯದ ವಿದ್ಯಾರ್ಥಿಗಳು ಸೋಮವಾರ ವಸತಿನಿಲಯದ ಎದುರು ಧರಣಿ ಪ್ರತಿಭಟನೆ ನಡೆಸಿದರು.

ಈಶ್ವರಮಂಗಲದ ವಿದ್ಯಾಸಂಸ್ಥೆಗಳಲ್ಲಿ ಕಲಿಯುತ್ತಿರುವ ವಸತಿ ನಿಲಯದ ವಿದ್ಯಾರ್ಥಿಗಳು ಸೋಮವಾರ ಮಧ್ಯಾಹ್ನ, ಅಡುಗೆ ಸಿಬ್ಬಂದಿಯ ವಿರುದ್ಧ ವಸತಿ ನಿಲಯದ ಮುಂಭಾಗದಲ್ಲಿ ಕುಳಿತು ಧರಣಿ ಪ್ರತಿಭಟನೆ ಆರಂಭಿಸಿದರು. ಮಾಹಿತಿ ಅರಿತು ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಶಾರದಾ ಅವರು ವಿದ್ಯಾರ್ಥಿಗಳ ಬಳಿಗೆ ತೆರಳಿ ಮಾತುಕತೆ ನಡೆಸಿದರೂ ವಿದ್ಯಾರ್ಥಿಗಳು ಪಟ್ಟುಹಿಡಿದು, ವಸತಿ ನಿಲಯದ ಮೇಲ್ವಿಚಾರಕರು ಇಲ್ಲವೇ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳೇ ಇಲ್ಲಿಗೆ ಬಂದು ನಮಗಾಗುತ್ತಿರುವ ಸಮಸ್ಯೆಗಳನ್ನು ಆಲಿಸಬೇಕು, ಅವರು ಸ್ಥಳಕ್ಕೆ ಬಂದು ನ್ಯಾಯ ಒದಗಿಸಿದ ಬಳಿಕವೇ ನಾವು ಇಲ್ಲಿಂದ ತೆರಳುತ್ತೇವೆ ಎಂದು ಧರಣಿ ಮುಂದುವರಿಸಿದರು.

ಬಳಿಕ ವಸತಿ ನಿಲಯದ ಮೇಲ್ವಿಚಾರಕಿ ಅಕ್ಷತಾ ಪೈ ಸ್ಥಳಕ್ಕೆ ಬಂದು ವಿದ್ಯಾಥಿಗಳಲ್ಲಿ ವಿಚಾರಿಸಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಅಡುಗೆ ಸಿಬ್ಬಂದಿಯಿಂದಾಗುತ್ತಿರುವ ದೌರ್ಜನ್ಯದ ಕುರಿತು ತಿಳಿಸಿದರು ಹಾಗೂ ಅಡುಗೆ ಸಿಬ್ಬಂದಿಯನ್ನು ಬದಲಾಯಿಸಬೇಕೆಂದು ಪಟ್ಟು ಹಿಡಿದರು. ವಿದ್ಯಾರ್ಥಿಗಳಿಗೆ ತೊಂದರೆ ನೀಡದಂತೆ ಈಗಾಗಲೇ ಅವರಿಗೆ ಸೂಚಿಸಲಾಗಿದೆ. ನಿಮ್ಮ ಸಮಸ್ಯೆಗಳನ್ನು ಮೇಲಧಿಕಾರಿಗಳ ಗಮನಕ್ಕೆ ತಂದಿದ್ದೇವೆ ಎಂದರೂ ವಿದ್ಯಾರ್ಥಿಗಳು ಅವರ ಮಾತು ಕೇಳದೆ ಪ್ರತಿಭಟನೆ ಮುಂದುವರಿಸಿದರು.

ಈ ನಡುವೆ ಸ್ಥಳಕ್ಕೆ ಬಂದ ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ರಾಮ ಮೇನಾಲ, ಮಕ್ಕಳ ಮೇಲೆ ನಿರಂತರವಾಗಿ ದೌರ್ಜನ್ಯ ಎಸಗುತ್ತಿರುವ ಅಡುಗೆ ಸಿಬ್ಬಂದಿಯನ್ನು ಬದಲಾವಣೆ ಮಾಡಲು ಇಷ್ಟೊಂದು ಸಮಯ ಬೇಕೆ, ಗ್ರಾಮ ಪಂಚಾಯಿತಿಯಲ್ಲಿ ಕೈಗೊಂಡ ನಿರ್ಣಯಕ್ಕೆ ಬೆಲೆ ಇಲ್ಲವೇ ಎಂದು ಪ್ರಶ್ನಿಸಿ ವಸತಿ ನಿಲಯದ ಮೇಲ್ವಿಚಾರಕಿಯನ್ನು ತರಾಟೆಗೆ ತೆಗೆದುಕೊಂಡರು. ಸಮಾಜಕಲ್ಯಾಣ ಇಲಾಖಾಧಿಕಾರಿಗೆ ಕರೆ ಮಾಡಿದಾಗ ಅವರು, ಈ ಶೈಕ್ಷಣಿಕ ವರ್ಷ ಮಗಿಯುವ ತನಕ ಅಡುಗೆ ಸಿಬ್ಬಂದಿ ಇಲ್ಲೇ ಇರಲಿ, ಮತ್ತೆ ಬದಲಾಯಿಸುತ್ತೇವೆ ಎಂದು ಹೇಳಿದಾಗ ಆಕ್ರೋಶಗೊಂಡ ರಾಮ ಮೇನಾಲ ಅವರು, ಗರುವಾರದೊಳಗೆ ಇಲ್ಲಿನ ಅಡುಗೆ ಸಿಬ್ಬಂದಿಯನ್ನು ಬದಲಾವಣೆ ಮಾಡಿದ್ದರೆ ಮಕ್ಕಳ ಜತೆ ನಾವು ಪ್ರತಿಭಟನೆಗಿಳಿಯುತ್ತೇವೆ ಎಂದು ಎಚ್ಚರಿಸಿದರು. ಅಲ್ಲದೆ ಮಕ್ಕಳಿಗೆ ಧೈರ್ಯ ತುಂಬಿ ಪ್ರತಿಭಟನೆ ಹಿಂತೆಗೆದುಕೊಳ್ಳುವಂತೆ ಮಾಡುವಲ್ಲಿ ಯಶಸ್ವಿಯಾದರು. ಬಳಿಕದ ಬೆಳವಣಿಗೆಯಲ್ಲಿ ಮಂಗಳವಾರ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಯವರು ಅಡುಗೆ ಸಿಬ್ಬಂದಿಯನ್ನು ಕಡ್ಡಾಯ ರಜೆಯಲ್ಲಿ ಕಳುಹಿಸಿದ್ದಾರೆ ಹಾಗೂ ಇಲ್ಲಿಗೆ ಕೊಂಬೆಟ್ಟು ವಸತಿ ನಿಲಯದ ಅಡುಗೆ ಸಿಬ್ಬಂದಿಯನ್ನು ಬದಲಿ ವ್ಯವಸ್ಥೆ ಮಾಡಲಾಗಿದೆ.