ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
2019ರ ಮೊದಲಿನ ವಾಹನಗಳಿಗೆ ಹೈ ರೆಸಲ್ಯೂಷನ್ ನಂಬರ್ ಪ್ಲೇಟ್(ಎಚ್ಎಸ್ಆರ್‌ಪಿ) ಅಳವಡಿಸಿಕೊಳ್ಳಲು ಫೆ.17 ಸರ್ಕಾರ ಗಡು ವಿಧಿಸಿದ್ದು, ಇನ್ನು ಮೂರು ದಿನ ಬಾಕಿ ಇದೆ. ಈ ನಡುವೆ ದ.ಕ.ಜಿಲ್ಲೆಯಲ್ಲಿ ಸರಿಸುಮಾರು ಶೇ.10ರಷ್ಟು ವಾಹನಗಳಿಗೆ ಮಾತ್ರ ಈ ನಂಬರ್ ಪ್ಲೇಟ್ ಅಳವಡಿಕೆಯಾಗಿದೆ. ನಂಬರ್ ಪ್ಲೇಟ್ ಅಳವಡಿಸಲು ಹತ್ತುಹಲವು ತಾಂತ್ರಿಕ ಕಾರಣಗಳು ಎದುರಾಗಿದ್ದು, ಇದು ವಾಹನ ಮಾಲೀಕರನ್ನು ಹೈರಾಣು ಮಾಡಿದೆ. ವಾಹನಗಳ ದಾಖಲೆ, ನಂಬರ್ ಪ್ಲೇಟ್‌ನಿಂದ ತೊಡಗಿ ತರಹೇವಾರಿ ತೊಂದರೆಗಳು ಕಾಣಿಸುತ್ತಿದ್ದು, ಇದನ್ನು ಸರಿಪಡಿಸುವಲ್ಲಿ ವಾಹನ ಮಾಲೀಕರು ಸುಸ್ತಾಗುತ್ತಿದ್ದಾರೆ. ಯಾರದೋ ತಪ್ಪಿಗೆ ವಾಹನ ಮಾಲೀಕರು ಬವಣೆ ಪಡುವಂತಾಗಿದೆ. ಆನ್‌ಲೈನ್‌ನಲ್ಲಿ ಆಗಬೇಕಾದ ಕೆಲಸವನ್ನು ಸ್ವತಃ ಸಾರಿಗೆ ಕಚೇರಿಗೆ ತೆರಳಿ ಸರಿಪಡಿಸಬೇಕಾದ ಪ್ರಮೇಯ ಬಂದೊದಗಿದೆ. ಹೀಗಾಗಿ ಸರ್ಕಾರ ವಿಧಿಸಿದ ಕಾಲಮಿತಿಯಲ್ಲಿ ಹೊಸ ನಂಬರ್ ಪ್ಲೇಟ್ ಅಳವಡಿಕೆ ಅಸಾಧ್ಯವೇ ಆಗಿದ್ದು, ಮುಂದೇನು ಎಂಬ ಪ್ರಶ್ನೆ ಕಾಡತೊಡಗಿದೆ. ಗೊಂದಲ, ಸಮಸ್ಯೆಗಳ ಆಗರ: ಹೊಸ ನಂಬರು ಪ್ಲೇಟ್ ಅಳವಡಿಕೆಯನ್ನು ವಾಹನ ಮಾಲೀಕರೇ ಆನ್‌ಲೈನ್ ಮೂಲಕ ಮಾಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಆದರೆ ಹಳೆ ವಾಹನಗಳ ವಿಚಾರದಲ್ಲಿ ನೋಂದಣಿ ದಾಖಲೆಗಳಲ್ಲಿ ತಪ್ಪು ಇದ್ದರೆ ಸಾರಿಗೆ ಇಲಾಖೆಯ ವೆಬ್‌ಸೈಟ್ ತೆರೆದುಕೊಳ್ಳುವುದಿಲ್ಲ. ವಾಹನ ಕಂಪನಿಗಳು ಬದಲಾದ ಪ್ರಸಂಗಗಳಲ್ಲಿ ಹಳೆ ಕಂಪನಿಯ ಹೆಸರು ಹಾಕಿದರೆ, ಅಲ್ಲಿಯೂ ತೊಂದರೆ. ಬಂದ್ ಆಗಿರುವ ವಾಹನ ಕಂಪನಿಗಳಿದ್ದರೆ, ಏನು ಮಾಡುವುದು ಎಂಬ ಬಗ್ಗೆ ಸ್ಪಷ್ಟನೆ ಇಲ್ಲ.ವಾಹನ ನಮ್ಮಲ್ಲಿದ್ದು, ಅದರ ಒಡೆತನ ಬೇರೆಯವರಲ್ಲಿದ್ದರೆ, ಆಗಲೂ ಕಷ್ಟ. ವಾಹನದ ದಾಖಲೆಯನ್ನು ಮಾರಾಟ ಮಾಡಿದವರಿಗೆ ವರ್ಗಾಯಿಸದಿದ್ದರೆ ಅಂತಹ ಪ್ರಕರಣಗಳಲ್ಲಿ ಹೊಸ ನಂಬರ್ ಪ್ಲೇಟ್ ಅಳವಡಿಕೆ ಸಾಧ್ಯವಾಗುತ್ತಿಲ್ಲ. ಮಾರಾಟ ಮಾಡಿದವರು ಹೊಸ ನಂಬರ್ ಪ್ಲೇಟ್ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ, ವಾಹನ ಪಡೆದುಕೊಂಡವರು ದಾಖಲೆ(ಆರ್‌ಸಿ)ವರ್ಗಾಯಿಸದ ತಪ್ಪಿಗೆ ಅಲೆಯಬೇಕಾಗಿದೆ.
ಇನ್ಸೂರೆನ್ಸ್ ಪಾವತಿಯಾಗಿದ್ದರೂ ಸಮಸ್ಯೆ ಬಗೆಹರಿಯುತ್ತಿಲ್ಲ. ಇನ್ಸೂರೆನ್ಸ್ ಕಂಪನಿಯವರು ವಿಮೆ ಪಾವತಿಸಿದ ಬಗ್ಗೆ ಸಾರಿಗೆ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಬೇಕು. ಇಲ್ಲದಿದ್ದರೆ ಹಳೆ ನಂಬರ್ ವರ್ಗಾವಣೆಯಾಗುವುದಿಲ್ಲ. ಇದಕ್ಕೆ ಕಂಪನಿ ಹೊಣೆಯಾಗಿದ್ದರೂ ತೊಂದರೆಗೆ ಒಳಗಾಗುವುದು ವಾಹನ ಮಾಲೀಕರು.ವಾಹನದಲ್ಲಿ ಒಂದು, ಆರ್‌ಸಿಯಲ್ಲಿ ಇನ್ನೊಂದು ಚೇಸ್ ನಂಬರ್ ನಮೂದಾಗಿದ್ದರೂ ಹೊಸ ನಂಬರ್ ಪ್ಲೇಟ್ ಸಿಗುವುದಿಲ್ಲ. ಅಧಿಕಾರಿಗಳ ತಪ್ಪಿನಿಂದ ವಾಹನ ಮಾಲೀಕರು ಬವಣೆ ಪಡುವಂತಾಗಿದೆ. ಹೊಸ ನಂಬರ್ ಪ್ಲೇಟ್ ಹಾಕಿಸಲೂ ಹಿಂದೇಟು!: ಕೇಂದ್ರ ಸಾರಿಗೆ ಕಾಯ್ದೆ ಪ್ರಕಾರ ಹೊಸ ನಂಬರ್ ಪ್ಲೇಟ್‌ಗೆ ಆನ್‌ಲೈನ್ ಪಾವತಿಗೊಳಿಸಿ ನಂಬರ್ ಪ್ಲೇಟ್ ಅಧಿಕೃತ ಡೀಲರ್‌ಗಳಿಗೆ ಬಂದರೂ ಅದನ್ನು ವಾಹನಕ್ಕೆ ಅಳವಡಿಸಲು ಹಿಂದೆ ಮುಂದೆ ನೋಡುವ ಮಾಲೀಕರು ಇದ್ದಾರೆ ಎಂಬ ಅಚ್ಚರಿಯ ಸಂಗತಿ ಬಯಲಾಗಿದೆ.
ಪ್ರಸಕ್ತ ಹೊಸ ನಂಬರ್ ಪ್ಲೇಟ್ ಅಳವಡಿಕೆ ಕಡ್ಡಾಯ ಆಗಿದೆ ಅಷ್ಟೆ. ಆದರೆ ಹೊಸ ನಂಬರ್ ಪ್ಲೇಟ್ ಅಳವಡಿಸದಿದ್ದರೆ ದಂಡ ವಿಧಿಸುವ ಪ್ರಕ್ರಿಯೆ ಇನ್ನೂ ಆರಂಭವಾಗಿಲ್ಲ. ಹಾಗಾಗಿ ಕೆಲವು ವಾಹನ ಮಾಲೀಕರು ನಿರಾಳವಾಗಿದ್ದೇವೆ ಎಂಬಂತೆ ವರ್ತಿಸುತ್ತಿರುವ ಬಗ್ಗೆ ದೂರುಗಳು ಕೇಳಿಬಂದಿವೆ. ಹೊಸ ನಂಬರ್ ಪ್ಲೇಟ್ ಡೀಲರ್‌ಗಳಲ್ಲೇ ಉಳಿಯುವಂತಾಗಿದೆ. ಮಂಗಳೂರಿನ ಡೀಲರ್‌ವೊಂದರಲ್ಲಿ ಆನ್‌ಲೈನ್ ಮೂಲಕ ಪಾವತಿಸಿ ತರಿಸಿಕೊಳ್ಳುವ ಹೊಸ ನಂಬರ್ ಪ್ಲೇಟ್‌ಗಳಿಗೆ ಮತ್ತೆ ಯಾವುದೇ ಶುಲ್ಕ ವಿಧಿಸದೆ ನೇರವಾಗಿ ವಾಹನಗಳಿಗೆ ಹಾಕಿಸಿಕೊಳ್ಳಲು ಅವಕಾಶ ಇದೆ. ಹೊಸ ನಂಬರ್ ಪ್ಲೇಟ್‌ನ್ನು ಆನ್‌ಲೈನ್‌ನಲ್ಲಿ ಪಾವತಿಸುವಾಗಲೇ ಡೀಲರ್‌ಗಳ ಕಮಿಷನ್ ಮೊತ್ತ ಕೂಡ ಪಾವತಿಸಲಾಗುತ್ತದೆ. ಆದರೆ ಇದರ ಅರಿವು ಇಲ್ಲದವರಿಂದ ಡೀಲರ್‌ಗಳು ನಂಬರ್ ಪ್ಲೇಟ್ ಅಳವಡಿಕೆ ವೆಚ್ಚ ಎಂದು ಹೆಚ್ಚುವರಿಯಾಗಿ 100 ರು. ಮೊತ್ತ ವಸೂಲಿ ಮಾಡುತ್ತಿರುವ ಬಗ್ಗೆ ದೂರುಗಳು ಕೇಳಿಬರುತ್ತಿವೆ.ಮಂಗಳೂರಿನಲ್ಲಿ ಪ್ರತಿ ತಿಂಗಳು ಸರಾಸರಿ 4,100 ರಿಂದ 4,500 ರಷ್ಟು ಎಲ್ಲ ಬಗೆಯ ವಾಹನಗಳ ನೋಂದಣಿಯಾಗುತ್ತಿದೆ. ಹೊಸ ನಂಬರ್ ಪ್ಲೇಟ್ ಅಳವಡಿಕೆ ವಿಚಾರದಲ್ಲಿ ತಾಂತ್ರಿಕ ಅಡಚಣೆಗಳು ಎದುರಾದಲ್ಲಿ ವಾಹನ ಮಾಲೀಕರು ಬಂದಾಗ ನಾವೇ ಅದನ್ನು ಬಗೆಹರಿಸಲು ಪ್ರಯತ್ನಿಸುತ್ತೇವೆ. ಫೆ.17ಕ್ಕೆ ಹೊಸ ನಂಬರ್ ಪ್ಲೇಟ್ ಅಳವಡಿಕೆ ಗಡು ಮುಕ್ತಾಯವಾಗಲಿದೆ ಎನ್ನುತ್ತಾರೆ ಮಂಗಳೂರು ಪ್ರಾದೇಶಿಕ ಸಾರಿಗೆ ಅಧಿಕಾರಿ ಶ್ರೀಧರ್ ಮಲ್ನಾಡ್.