ಕಾಂಗ್ರೆಸ್‌ನಿಂದ ತುಷ್ಟೀಕರಣ ನೀತಿ: ಶಾಸಕ ಡಾ.ಶಿವರಾಜ ಪಾಟೀಲ

| Published : Apr 23 2024, 12:55 AM IST

ಸಾರಾಂಶ

ರಾಯಚೂರಿನ ಡಾ. ಬಿ.ಆರ್‌.ಅಂಬೇಡ್ಕರ್‌ ವೃತ್ತದಲ್ಲಿ ಹುಬ್ಬಳ್ಳಿಯಲ್ಲಿ ನಡೆದ ನೇಹಾ ಹತ್ಯೆ ಖಂಡಿಸಿ ಬಿಜೆಪಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಬಿಜೆಪಿ ಮುಖಂಡರು, ಕಾರ್ಯಕರ್ತರು ಘಟನೆ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ರಾಯಚೂರು

ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ತುಷ್ಟೀಕರಣ ನೀತಿ ಅನುಸರಿಸುತ್ತಿದೆ. ಹಿಂದೂಗಳ ಹತ್ಯೆಗಳನ್ನು ಉಡಾಫೆ ಉತ್ತರಗಳ ಮೂಲಕ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಶಾಸಕ ಡಾ.ಶಿವರಾಜ ಪಾಟೀಲ್‌ ಆಕ್ರೋಶ ವ್ಯಕ್ತಪಡಿಸಿದರು.

ಹುಬ್ಬಳ್ಳಿ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಖಂಡಿಸಿ ಬಿಜೆಪಿ ಜಿಲ್ಲಾ ಸಮಿತಿ ಹಾಗೂ ಜಿಲ್ಲಾ ವೀರಶೈವ ಲಿಂಗಾಯತ ಸಮಾಜದಿಂದ ಸೋಮವಾರ ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಲಾಯಿತು.

ಸ್ಥಳೀಯ ಅಂಬೇಡ್ಕರ್‌ ವೃತ್ತದಲ್ಲಿ ಸೇರಿದ ಬಿಜೆಪಿ ಮುಖಂಡರು, ಕಾರ್ಯಕರ್ತರು ಘಟನೆ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಅದೇ ರೀತಿ ವೀರಶೈವ ಲಿಂಗಾಯತ ಸಮಾಜದರು ನಗರದ ಬಸವೇಶ್ವರ ವೃತ್ತದಿಂದ ಡಿಸಿ ಕಚೇರಿವರೆಗೆ ಪ್ರತಿಭಟನಾ ರ್‍ಯಾಲಿ ನಡೆಸಿ ನೇಹಾ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಜಿಲ್ಲಾಡಳಿತದ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಅವರು, ಅಮಾಯಕ ಹಿಂದೂ ಹೆಣ್ಣುಮಕ್ಕಳ ಕಗ್ಗೊಲೆ ನಡೆಯುತ್ತಿದ್ದರೂ ಸಿಎಂ, ಡಿಸಿಎಂ ಮತ್ತು ಗೃಹಮಂತ್ರಿ ಪರಮೇಶ್ವರ್‌ ಬೇಜವಾಬ್ದಾರಿ ಹೇಳಿಕೆ ಕೊಡುತ್ತಿದ್ದಾರೆ. ಓಲೈಕೆ ರಾಜಕಾರಣ ಮೂಲಕ ಸಮಾಜದ ಸ್ವಾಸ್ಥ್ಯ ಹದಗೆಡಿಸುತ್ತಿದ್ದಾರೆ. ಇದನ್ನು ಕರ್ನಾಟಕ ಜನತೆ ಒಪ್ಪುವುದಿಲ್ಲ ಇದನ್ನು ಬಿಜೆಪಿ ಖಂಡಿಸುತ್ತಿದೆ. ಕಾಂಗ್ರೆಸ್ ಸರ್ಕಾರವು ಹುಬ್ಬಳ್ಳಿಯ ನೇಹಾ ಹತ್ಯೆಯ ಬಗ್ಗೆ ಹಗುರವಾಗಿ ಮಾತನಾಡುವ ಮೂಲಕ ಮಹಿಳೆಯರು ಆತಂಕಗೊಂಡಿರುತ್ತಾರೆ ಎಂದರು. ಕಾಂಗ್ರೆಸ್ ಸರ್ಕಾರ ರಾಜ್ಯದ ಜನತೆಗೆ ಚಿಪ್ಪು ಕೊಟ್ಟಿದೆ. ಆದರೆ ಮೋದಿ ಸರ್ಕಾರ ದೇಶದ ಜನತೆಗೆ ಅಕ್ಷಯ ಪಾತ್ರೆ ಕೊಟ್ಟಿದೆ ಎಂದು ಹೇಳಿದರು.

ಹುಬ್ಬಳ್ಳಿಯಲ್ಲಿ ನಡೆದ ನೇಹಾ ಹತ್ಯೆಯ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಇಂತಹ ಘಟನೆಗಳು ಮರುಕಳಿಸದಂತೆ ಸರ್ಕಾರ ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.

ಬಿಜೆಪಿ ಪ್ರತಿಭಟನೆಯಲ್ಲಿ ಪಕ್ಷದ ಹಿರಿಯ ಮುಖಂಡರಾದ ಎನ್‌.ಶಂಕ್ರಪ್ಪ, ಕೆ.ಎಂ.ಪಾಟೀಲ್, ಊಟ್ಕೂರು ರಾಘವೇಂದ್ರ, ಲಲಿತಾ ಕಡಗೋಳು, ಮೇಡಗಮ್ ಜಯಶ್ರೀ ರೆಡ್ಡಿ, ಜಿ.ಶಂಕರ ರೆಡ್ಡಿ, ಬಿ.ಗೋವಿಂದ,ರಾಮಚಂದ್ರ ಕಡಗೋಳು ಸೇರಿ ವಿವಿಧ ಮೋರ್ಚಾಗಳ ಪ್ರಮುಖರು, ಪದಾಧಿಕಾರಿಗಳು, ಕಾರ್ಯಕರ್ತರು ಇದ್ದರು.

ಹೋರಾಟದಲ್ಲಿ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಶರಣಭೂಪಾಲ ನಾಡಗೌಡ, ಉಪಾಧ್ಯಕ್ಷ ಅಶೋಕ ಪಾಟೀಲ್ ಅತ್ತನೂರು, ಚಂದ್ರಶೇಖರ ಪಾಟೀಲ ಮಿರ್ಜಾಪೂರ, ಚನ್ನಬಸವ, ಸೂಗಪ್ಪ, ಬಿ.ಮಲ್ಲಿಕಾರ್ಜುನ, ಎಸ್.ಬಿ ಪಾಟೀಲ್, ಹರವಿ ನಾಗನಗೌಡ, ದಾನಮ್ಮ ಸುಭಾಶಚಂದ್ರ ಇದ್ದರು.