ಸಾರಾಂಶ
ಯಾದಗಿರಿ: ಕೋವಿಡ್-19ರ ಸಂದರ್ಭದಲ್ಲಿ ಪ್ರಧಾನ ಮಂತ್ರಿಗಳ ಆತ್ಮನಿರ್ಭರ ನಿಧಿ ಯೋಜನೆಯಡಿ ಬೀದಿಬದಿ ವ್ಯಾಪಾರಿಗಳಿಗೆ ವ್ಯಾಪಾರ ವಿಸ್ತರಿಸಿಕೊಳ್ಳಲು ಬ್ಯಾಂಕ್ ಮೂಲಕ ಕಡಿಮೆ ಬಡ್ಡಿ ದರದಲ್ಲಿ ಕಿರು ಸಾಲ ಸೌಲಭ್ಯ ಕಲ್ಪಿಸಿಕೊಡಲಾಗಿದೆ. ಸೌಲಭ್ಯವನ್ನು ಜಿಲ್ಲೆಯ ಎಲ್ಲ ನಗರ ಪ್ರದೇಶದಲ್ಲಿನ ಬೀದಿ ಬದಿ ವ್ಯಾಪಾರಿಗಳು ಪಡೆದುಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಶರಣಬಸಪ್ಪ ಕೋಟೆಪ್ಪಗೊಳ ತಿಳಿಸಿದ್ದಾರೆ. ಪ್ರಧಾನ ಮಂತ್ರಿ ಆತ್ಮನಿರ್ಭರ ನಿಧಿ ಯೋಜನೆಯಡಿ ಬೀದಿ ಬದಿ ವ್ಯಾಪಾರಿಗಳ ಆರ್ಥಿಕ ಸುಭದ್ರತೆಗೆ ಮೂರು ಕಂತುಗಳಲ್ಲಿ ಸಾಲ ಸೌಲಭ್ಯವನ್ನು ಕಲ್ಪಿಸಲಾಗುವುದು. ಮೊದಲ ಕಂತಿನಲ್ಲಿ 10,000 ರು. ಸಾಲ ನೀಡಿ, 12 ತಿಂಗಳ ಅವಧಿಯಲ್ಲಿ ಸಾಲ ಮರು ಪಾವತಿ ಮಾಡಿದಲ್ಲಿ 20,000 ರು. ಸಾಲ ನೀಡಲಾಗುವುದು, ಸಾಲವನ್ನು 18 ತಿಂಗಳ ಅವಧಿಯಲ್ಲಿ ಮರು ಪಾವತಿ ಮಾಡಿದಲ್ಲಿ 50,000 ರು. ಸಾಲ ಸೌಲಭ್ಯ ನೀಡಲಾಗುವುದು. ಜಿಲ್ಲೆಯ ಎಲ್ಲಾ ಬೀದಿ ವ್ಯಾಪಾರಿಗಳು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಅರ್ಜಿ ಸಲ್ಲಿಸುವುದರೊಂದಿಗೆ ಸಾಲ ಸೌಲಭ್ಯ ಪಡೆದುಕೊಳ್ಳಬೇಕು ಎಂದಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಆಯಾ ತಾಲೂಕಿನ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸಮುದಾಯ ಸಂಘಟನಾಧಿಕಾರಿ, ಸಮುದಾಯ ಸಂಘಟಕರನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದ್ದಾರೆ.