ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುರಸ್ತೆ ಅಪಘಾತ ನಿಯಂತ್ರಿಸಲು ಬಿಡಾಡಿ ದನಗಳಿಗೆ ರಿಫ್ಲೆಕ್ಟಿವ್ ಕಾಲರ್ ಬೆಲ್ಟ್ ಅಳವಡಿಸುವ ವಿನೂತನ ವಿಧಾನವೊಂದನ್ನು ಕಂಡುಕೊಳ್ಳಲಾಗಿದೆ. ಸಮಾಜಸೇವಾಸಕ್ತರ ನೆರವಿನಲ್ಲಿ ಜಿಲ್ಲೆಯ ವಿವಿಧೆಡೆ ಇಂತಹ ಬೆಲ್ಟ್ ಅಳವಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ. ಬಿ.ಗೋಪಾಲಕೃಷ್ಣ ಹೇಳಿದರು.
ಧಾರವಾಡದ ಸಮಾಜ ಸೇವಕರು, ಅಲ್ಲಿನ ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷರೂ ಆಗಿರುವ ನೀಲಕಂಠ ಹಂಪಣ್ಣವರ್ ಮತ್ತು ಸ್ನೇಹಿತರನ್ನೊಳಗೊಂಡ ತಂಡದ ನೆರವಿನಲ್ಲಿ ಜಿಲ್ಲೆಯ ಮಲೆನಾಡಿನ ತಾಲೂಕುಗಳಲ್ಲಿ ಸುಮಾರು 500 ಬಿಡಾಡಿ ದನಗಳಿಗೆ ಬೆಲ್ಟ್ ಅಳವಡಿಸಲಾಗುವುದು ಎಂದರು.ಕಳಸ ಇನ್ನಿತರೆ ಕಡೆಗಳಲ್ಲಿ ನಡೆದ ಜನತಾದರ್ಶನ ಕಾರ್ಯಕ್ರಮದಲ್ಲಿ ಬಿಡಾಡಿ ದನಗಳಿಂದ ಅಪಘಾತಗಳು ಹೆಚ್ಚಾಗಿ, ಜನ ಹಾಗೂ ಜಾನುವಾರುಗಳ ಸಾವು-ನೋವು ಸಂಭವಿಸುತ್ತಿರುವ ಬಗ್ಗೆ ಹೆಚ್ಚಿನ ದೂರುಗಳು ಬಂದಿವೆ. ಈ ಹಿನ್ನೆಲೆ ನೀಲಕಂಠ ಹಂಪಣ್ಣವರ್ ಮತ್ತು ತಂಡ ಭೇಟಿ ಮಾಡಿ ಕೋರಿಕೆ ಸಲ್ಲಿಸಿದ ಮೇರೆಗೆ ಅವರು ಈ ಬೆಲ್ಟ್‌ಗಳನ್ನು ಸಂಪೂರ್ಣ ಉಚಿತವಾಗಿ ನೀಡಲು ಮುಂದಾಗಿದ್ದಾರೆ ಎಂದು ಹೇಳಿದರು.
ಈ ಬೆಲ್ಟ್‌ಗಳಿಂದ ರಾತ್ರಿ ವೇಳೆ ಬೆಳಕಿನ ಪ್ರತಿಫಲನವಾಗುವುದರಿಂದ ಅಪಘಾತಗಳಾಗುವುದನ್ನು ತಡೆಯಬಹುದು. ಅಲ್ಲದೆ, ಪ್ರತಿ ಬೆಲ್ಟ್‌ನಲ್ಲಿ ಕ್ಯೂಆರ್ ಕೋಡ್‌ನ ತಂತ್ರಜ್ಞಾನ ಅಳವಡಿಸಿರುವುದರಿಂದ ಅದರಲ್ಲಿ ಹಸುವಿನ ಮಾಲೀಕರ ಹೆಸರು, ವಿಳಾಸ, ದೂರವಾಣಿ ಸಂಖ್ಯೆ, ಇ-ಮೇಲ್ ಐಡಿ ಇನ್ನಿತರೆ ಮಾಹಿತಿ ಅಳವಡಿಸಲು ಸಾಧ್ಯವಿದೆ. ಅಗತ್ಯವಿದ್ದಲ್ಲಿ ಮಾಲೀಕರನ್ನು ಪತ್ತೆ ಹಚ್ಚಲು ಸಹಕಾರಿ ಆಗುತ್ತದೆ ಎಂದು ತಿಳಿಸಿದರು.ತಾವು ಹುಬ್ಬಳ್ಳಿ ಮಹಾ ನಗರಪಾಲಿಕೆಯಲ್ಲಿ ಕಮಿಷನರ್ ಆಗಿದ್ದ ವೇಳೆ ನೀಲಕಂಠ ಹಂಪಣ್ಣವರ್ ಮತ್ತವರ ತಂಡವು ಬೀದಿ ನಾಯಿಗಳಿಗೆ ಇಂತಹ ಬೆಲ್ಟ್ ಅಳವಡಿಸಿದ್ದರು. ಇದರಿಂದ ಅಪಘಾತಗಳು ಕಡಿಮೆಯಾಗಿದ್ದಲ್ಲದೆ, ಜನ ಮತ್ತು ನಾಯಿಗಳ ಸಾವು-ನೋವು ನಿಯಂತ್ರಣಗೊಂಡ ನಿದರ್ಶನ ನಮ್ಮ ಮುಂದೆ ಇದೆ. ಆದ ಕಾರಣ ಅವರನ್ನು ಮತ್ತೆ ಸಂಪರ್ಕಿಸಿ ನಮ್ಮ ಜಿಲ್ಲೆಯ ಮೂಡಿಗೆರೆ, ಕಳಸ ಹಾಗೂ ಶೃಂಗೇರಿ ತಾಲೂಕುಗಳ ಭಾಗದಲ್ಲಿ ಜಾನುವಾರುಗಳಿಗೆ ಬೆಲ್ಟ್ ಅಳವಡಿಸಲು ಮುಂದಾಗಿದ್ದೇವೆ ಎಂದರು.
ನೀಲಕಂಠ ಹಂಪಣ್ಣವರ್ ತಂಡದಲ್ಲಿ ಅಮೆರಿಕಾದಲ್ಲಿ ವಿದ್ಯಾಭ್ಯಾಸ ಮಾಡಿ ಬಂದವರು, ಧಾರವಾಡ ಹಾಗೂ ಚಿಕ್ಕಮಗಳೂರಿನ ಉದ್ಯಮಿಗಳು ಸಹ ಇದ್ದಾರೆ. ಈ ತಂಡದ ಕಾರ್ಯ ಬೇರೆಯವರಿಗೂ ಮಾದರಿಯಾಗಲಿ ಎಂದರು.ಈ ವೇಳೆ ನೀಲಕಂಠ ಹಂಪಣ್ಣವರ್ ಮಾತನಾಡಿ, ಬಿಡಾಡಿ ಜಾನುವಾರುಗಳು, ನಾಯಿಗಳಿಂದಾಗಿ ರಸ್ತೆ ಅಪಘಾತಗಳು ನಡೆದು ಸಾವು-ನೋವುಗಳು ಸಂಭವಿಸುವುದನ್ನು ಕಾಣುತ್ತೇವೆ. ಇದನ್ನು ನಿಯಂತ್ರಿಸಲು ರಿಫ್ಲೆಕ್ಟಿವ್ ಕಾಲರ್ ಬೆಲ್ಟ್ ಅಳವಡಿಸಲಾಗುತ್ತಿದೆ. ತಂತ್ರಜ್ಞಾನ ಬಳಸಿ ಕ್ಯೂಆರ್ ಕೋಡ್ ಸಹ ಅಳವಡಿಸಲಾಗಿದೆ ಎಂದು ಹೇಳಿದರು.
ಹಿಂದೆ ಧಾರವಾಡದಲ್ಲಿ ಸುಮಾರು 300 ನಾಯಿಗಳಿಗೆ ಇಂತಹ ಬೆಲ್ಟ್ ನೀಡಿದ್ದೇವೆ. ಈಗ ಇಲ್ಲಿನ ಸಿಇಓ ಅವರು ಜಾನುವಾರುಗಳ ಬೆಲ್ಟ್ ಅಗತ್ಯವಿರುವ ಬಗ್ಗೆ ತಿಳಿಸಿದ ಹಿನ್ನೆಲೆ 500 ಬೆಲ್ಟ್ ನೀಡುತ್ತಿದ್ದೇವೆ. ಅಗತ್ಯ ಬಿದ್ದರೆ ಇನ್ನಷ್ಟು ನೀಡುತ್ತೇವೆ. ಮಾನವೀಯತೆ ಉಳಿಸುವ ನಿಟ್ಟಿನಲ್ಲಿ ಈ ಸಣ್ಣ ಕಾರ್ಯ ಕೈಗೊಂಡಿದ್ದೇವೆ ಎಂದು ತಿಳಿಸಿದರು.ಈ ವೇಳೆ ತಂಡದ ಸುಶ್ಮಿತ್ ಬಾರಿಗಿಡದ್, ಶ್ರೀಧರ್ ಸಂಗೊಳ್ಳಿ, ನಾಗರಾಜ್ ತೇಗಿ ಮತ್ತು ದೀಕ್ಷಿತ್ ಇದ್ದರು.