ಮಣ್ಣು ಪರೀಕ್ಷೆ ಆಧಾರದ ಮೇಲೆ ಗೊಬ್ಬ‍ರ ಬಳಸಿ: ಡಾ. ಪ್ರವೀಣ ಕರಿಗಟ್ಟಿ

| Published : May 22 2025, 12:56 AM IST

ಮಣ್ಣು ಪರೀಕ್ಷೆ ಆಧಾರದ ಮೇಲೆ ಗೊಬ್ಬ‍ರ ಬಳಸಿ: ಡಾ. ಪ್ರವೀಣ ಕರಿಗಟ್ಟಿ
Share this Article
  • FB
  • TW
  • Linkdin
  • Email

ಸಾರಾಂಶ

ಕೃಷಿ ಇಲಾಖೆ ಮುಂಡರಗಿ ಹಾಗೂ ಕೃಷಿ ವಿಜ್ಞಾನ ಕೇಂದ್ರ ಹುಲಕೋಟಿ ಇವುಗಳ ಸಹಭಾಗಿತ್ವದಲ್ಲಿ 2025-26ನೇ ಸಾಲಿನ ಮುಂಗಾರು ಹಂಗಾಮಿನ ಪೂರ್ವಭಾವಿ ಅಭಿಯಾನ ಪಟ್ಟಣದ ಕೋಟೆ ಭಾಗದಲ್ಲಿ ನಡೆಯಿತು.

ಮುಂಡರಗಿ: ಕೃಷಿಯಲ್ಲಿ ಮಣ್ಣು ಮಹತ್ವದ ಕಾರ್ಯನಿರ್ವಹಿಸುತ್ತದೆ. ಮಣ್ಣು ಪರೀಕ್ಷೆ ಆಧಾರದ ಮೇಲೆ ಭೂಮಿಗೆ ಗೊಬ್ಬರ ಒದಗಿಸಬೇಕು ಮತ್ತು ಬೀಜೋಪಚಾರ ಮಾಡಿ ಬಿತ್ತನೆ ಮಾಡುವುದರಿಂದ ಮುಂಬರುವ ರೋಗಗಳನ್ನು ತಡೆಗಟ್ಟಬಹುದು ಎಂದು ಹುಲಕೋಟಿ ಕೃಷಿ ವಿಜ್ಞಾನಿ ಡಾ. ಪ್ರವೀಣ ಕರಿಗಟ್ಟಿ ಹೇಳಿದರು.

ಕೃಷಿ ಇಲಾಖೆ ಮುಂಡರಗಿ ಹಾಗೂ ಕೃಷಿ ವಿಜ್ಞಾನ ಕೇಂದ್ರ ಹುಲಕೋಟಿ ಇವುಗಳ ಸಹಭಾಗಿತ್ವದಲ್ಲಿ 2025-26ನೇ ಸಾಲಿನ ಮುಂಗಾರು ಹಂಗಾಮಿನ ಪೂರ್ವಭಾವಿ ಅಭಿಯಾನ ಕುರಿತು ಪಟ್ಟಣದ ಕೋಟೆ ಭಾಗದಲ್ಲಿ ಇತ್ತೀಚೆಗೆ ಜರುಗಿದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಇತ್ತೀಚಿನ ವರ್ಷಗಳಲ್ಲಿ ಮಣ್ಣಿನ ಪರೀಕ್ಷೆ ಮಾಡಿದರೂ ನಿಯಮದ ಪ್ರಕಾರ ಅದಕ್ಕೆ ಗೊಬ್ಬರ, ಬೀಜ ಹಾಕುವುದನ್ನು ಬಿಟ್ಟಿದ್ದಾರೆ. ಅದರ ಪರಿಣಾಮವಾಗಿ ಮಣ್ಣು ತನ್ನ ಗುಣ ಕಳೆದುಕೊಳ್ಳುತ್ತಿದೆ ಎಂದು ವಿವರಿಸಿದರು.

ಇನ್ನೊಬ್ಬ ಕೃಷಿ ವಿಜ್ಞಾನಿ ಡಾ. ಹೇಮಾವತಿ ಹಿರೇಗೌಡರ ಮಾತನಾಡಿ, ಕೃಷಿಯಲ್ಲಿ ವಾರ್ಷಿಕ ಬೆಳೆಗಳೊಂದಿಗೆ ಬಹುವಾರ್ಷಿಕ ಬೆಳೆಗಳನ್ನು ಬೆಳೆಯಬೇಕು. ಇದರಿಂದ ಬರಗಾಲ ಸಹಿಸಿಕೊಳ್ಳುವ ಶಕ್ತಿಯನ್ನು ತೋಟಗಾರಿಕೆ ಬೆಳೆಗಳಿಂದ ಸರಿದೂಗಿಸಿಕೊಳ್ಳಬಹುದು. ಕೆಂಪು ಮಣ್ಣು ತೋಟಗಾರಿಕೆ ಬೆಳೆಗಳಿಗೆ ಸೂಕ್ತವಾದದ್ದು. ರೈತರು ತಮ್ಮ ಜಮೀನುಗಳಲ್ಲಿ ತರಕಾರಿಗಳನ್ನು ಬೆಳೆಯುವುದರಿಂದ ಮಾಸಿಕ ವರಮಾನ ಪಡೆದುಕೊಳ್ಳಬಹುದು ಎಂದರು.

ತಾಲೂಕು ಸಹಾಯಕ ಕೃಷಿ ನಿರ್ದೇಶಕ ಪ್ರಾಣೇಶ ಮಾತನಾಡಿ, ರೈತರು ರೈತ ಸಂಪರ್ಕ ಕೇಂದ್ರ ಅಥವಾ ಅಧಿಕೃತ ಬಿತ್ತನೆ ಬೀಜಗಳ ಮಾರಾಟಗಾರರಿಂದ ಮಾತ್ರ ಬಿತ್ತನೆ ಬೀಜಗಳನ್ನು ಖರೀದಿಸಿ, ಸೂಕ್ತ ಬೀಜೋಪಚಾರ ಕೈಗೊಂಡು ಬಿತ್ತನೆ ಮಾಡುವುದರಿಂದ ಉತ್ತಮವಾದ ಇಳುವರಿ ಪಡೆಯಬಹುದಾಗಿದೆ. ಬಿತ್ತನೆ ಕಾರ್ಯ ಕೈಗೊಳ್ಳುವಾಗ ಕೇವಲ ಯೂರಿಯಾ ಹಾಗೂ ಡಿಎಪಿ ರಸಗೊಬ್ಬರಗಳಿಗೆ ಸೀಮಿತವಾಗದೆ ಸಾರಜನಕ, ರಂಜಕ, ಪೊಟ್ಯಾಷ ಪೋಷಕಾಂಶಗಳನ್ನು ಒಟ್ಟಿಗೆ ಒದಗಿಸುವ ಸಂಯುಕ್ತ ಗೊಬ್ಬರಗಳನ್ನು ಡಿಎಪಿ ಗೊಬ್ಬರಕ್ಕೆ ಪರ್ಯಾಯವಾಗಿ ಬಳಸುವುದು ಸೂಕ್ತವಾಗಿರುತ್ತದೆ ಎಂದರು. ಕೃಷಿ ಇಲಾಖೆಯಲ್ಲಿರುವ ಸಮಗ್ರ ಯೋಜನೆಗಳ ಕುರಿತು ಅವರು ತಿಳಿಸಿಕೊಟ್ಟರು.

ತಾಲೂಕು ಕೃಷಿಕ ಸಮಾಜದ ಉಪಾಧ್ಯಕ್ಷ ಸುರೇಶ ಹಲವಾಗಲಿ ಮಾತನಾಡಿದರು. ಪುರಸಭೆ ಸದಸ್ಯ ಶಿವಪ್ಪ ಚಿಕ್ಕಣ್ಣವರ, ಅಂದಪ್ಪ ಬಳ್ಳಾರಿ, ಕೃಷಿ ಅಧಿಕಾರಿ ವೀರೇಶ ಸೊಪ್ಪಿನ, ಆರ್ಥಿಕ ಸಮಾಲೋಚಕ ಸಂದೀಪ ಕಟ್ಟಿಮನಿ, ಸಹಾಯಕ ಕೃಷಿ ಅಧಿಕಾರಿ ನಿಂಗಪ್ಪ ಬಿ. ಹಾಗೂ ಆತ್ಮ ಯೋಜನೆಯ ತಾಲೂಕು ತಾಂತ್ರಿಕ ವ್ಯವಸ್ಥಾಪಕ ಗೌರಿಶಂಕರ ಸಜ್ಜನರ, ಪ್ರಗತಿಪರ ರೈತರಾದ ಶಿವಾನಂದ ಇಟಗಿ, ಶಿವನಗೌಡ ಗೌಡರ್, ಈಶ್ವರಪ್ಪ ಬೆಟಗೇರಿ, ಸಂಬಾಜಿ ಲ್ಯಾಂಡವೆ, ಮರಿಯಪ್ಪ ಕುರಿ ಉಪಸ್ಥಿತರಿದ್ದರು.