ದ್ವಾರಕನಾಥ್‌ರನ್ನು ಪರಿಷತ್‌ಗೆ ನೇಮಕ ಮಾಡಿ: ಅಲೆಮಾರಿ ಬುಡಕಟ್ಟು ಸಂಘ

| Published : May 26 2024, 01:42 AM IST / Updated: May 26 2024, 10:27 AM IST

ದ್ವಾರಕನಾಥ್‌ರನ್ನು ಪರಿಷತ್‌ಗೆ ನೇಮಕ ಮಾಡಿ: ಅಲೆಮಾರಿ ಬುಡಕಟ್ಟು ಸಂಘ
Share this Article
  • FB
  • TW
  • Linkdin
  • Email

ಸಾರಾಂಶ

ಡಾ.ಸಿ.ಎಸ್.ದ್ವಾರಕನಾಥ್ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಬೇಕು ಎಂದು ಕರ್ನಾಟಕ ಅಲೆಮಾರಿ ಬುಡಕಟ್ಟು ಮಹಾಸಭಾದ ರಾಜ್ಯ ಸಂಘಟನಾ ಕಾರ್ಯದರ್ಶಿ ಎಂ.ವಿ.ಗೋವಿಂದರಾಜು ಮತ್ತು ಜಿಲ್ಲಾಧ್ಯಕ್ಷ ಎಸ್.ಎಸ್.ಅಣ್ಣಪ್ಪ ಮನವಿ ಮಾಡಿದರು. ಹಾಸನದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು.

  ಹಾಸನ :  ತಳ ಸಮುದಾಯಗಳ ಅಸ್ಥಿತ್ವಕ್ಕಾಗಿ ಕಳೆದ ೪೦ ವರ್ಷಗಳಿಂದ ದುಡಿಯುತ್ತಿರುವ ಡಾ.ಸಿ.ಎಸ್.ದ್ವಾರಕನಾಥ್ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಬೇಕು ಎಂದು ಕರ್ನಾಟಕ ಅಲೆಮಾರಿ ಬುಡಕಟ್ಟು ಮಹಾಸಭಾದ ರಾಜ್ಯ ಸಂಘಟನಾ ಕಾರ್ಯದರ್ಶಿ ಎಂ.ವಿ.ಗೋವಿಂದರಾಜು ಮತ್ತು ಜಿಲ್ಲಾಧ್ಯಕ್ಷ ಎಸ್.ಎಸ್.ಅಣ್ಣಪ್ಪ ಮನವಿ ಮಾಡಿದರು.

ಮಾಧ್ಯಮಗೋಷ್ಠಿಯಲ್ಲಿ ಶನಿವಾರ ಮಾತನಾಡಿ, ‘ಡಾ.ಸಿ.ಎಸ್.ದ್ವಾರಕನಾಥ್‌ ಅವರು ಕರ್ನಾಟಕ ರಾಜ್ಯದ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ, ಲೇಖಕ, ತಳ ಸಮುದಾಯಗಳ ಅಸ್ತಿತ್ವ ಮತ್ತು ಅಸ್ಮಿತೆಯಾಗಿ ಕಳೆದ ೪೦ ವರ್ಷಗಳಿಂದ ದುಡಿಯುತ್ತ ಬಂದಿದ್ದಾರೆ. ಅಲ್ಪಸಂಖ್ಯಾತರು, ದಲಿತರು ಮತ್ತು ಹಿಂದುಳಿದ ವರ್ಗಗಳನ್ನು ಒಗ್ಗೂಡಿಸಿ ರಾಜ್ಯದಾದ್ಯಂತ ನಿರಂತರವಾಗಿ ಸಂಘಟನೆ ಮಾಡುತ್ತಿದ್ದು, ದ್ವಾರಕನಾಥ್ ರವರು ವಕೀಲರಾಗಿ ನಾಲ್ಕು ದಶಕಗಳಿಂದ ಎಷ್ಟೋ ದಿಕ್ಕಿಲ್ಲದ ಸಮುದಾಯಗಳಿಗಾಗಿ ಹಣ ಪಡೆಯದೆ ನ್ಯಾಯ ದೊರಕಿಸಿ ಕೊಡುವ ಕೆಲಸ ಮಾಡಿದ್ದಾರೆ’ ಎಂದು ಹೇಳಿದರು.

ದೇಶದ ಸಾಮಾಜಿಕ ರಾಜಕೀಯ ಮತ್ತು ಆರ್ಥಿಕತೆಗೆ ಹೆಸರುವಾಸಿಯಾಗಿದ್ದ ಲಂಕೇಶ್ ಪತ್ರಿಕೆಯಲ್ಲಿ ಪತ್ರಕರ್ತರಾಗಿ ಎರಡು ದಶಕಗಳ ಕಾಲ ಕೆಲಸ ಮಾಡಿದ್ದಾರೆ. ಇಂದಿಗೂ ಪ್ರಮುಖ ಪತ್ರಿಕೆಗಳಲ್ಲಿ ತಿಳಿದುಕೊಳ್ಳಲಾಗದ ಸಮುದಾಯಗಳ ಕುರಿತು ಲೇಖನಗಳನ್ನು ಬರೆಯುತ್ತಲೇ ಇರುತ್ತಾರೆ ಎಂದು ಹೇಳಿದರು.

‘ಇದೀಗ ರಾಜ್ಯ ಕಾಂಗ್ರೆಸ್ ಪಕ್ಷದ ಸಾಮಾಜಿಕ ನ್ಯಾಯ ವಿಭಾಗದ ರಾಜ್ಯ ಅಧ್ಯಕ್ಷರು, ಮುಖ್ಯ ವಕ್ತಾರರು ಮತ್ತು ಚುನಾವಣಾ ಪ್ರಚಾರ ಸಮಿತಿಯ ಉಪಾಧ್ಯಕ್ಷರಾಗಿ ಕಳೆದ ವಿಧಾನಸಭೆ ಮತ್ತು ಈಗಿನ ಲೋಕಸಭೆ ಚುನಾವಣೆಗಳಲ್ಲಿ ರಾಜ್ಯಾದ್ಯಂತ ಸುತ್ತಾಡಿ ಕಾಂಗ್ರೆಸ್ ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ದುಡಿದಿದ್ದಾರೆ. ಈವರೆಗೂ ಯಾವ ರಾಜಕಾರಣಿಯೂ ಹೋಗದ ಅಲೆಮಾರಿಗಳು, ಆದಿವಾಸಿಗಳು ವಾಸಿಸುವ ಕಾಡು, ಕಾಲೋನಿ, ಕೇರಿ, ಹಟ್ಟಿ ಮುಂತಾದ ಪ್ರದೇಶಗಳಿಗೆ ಬಂದು ರಾಜಕೀಯ ಅರಿವೂ ಮೂಡಿಸಿ ಸಮುದಾಯಗಳ ಮತಗಳನ್ನು ಕಾಂಗ್ರೆಸ್ ಅಭ್ಯರ್ಥಿಗಳಿಗೆ ಹಾಕಿಸಲು ಜಾಗೃತಿ ಮೂಡಿಸಿದ್ದಾರೆ. ಆದಿವಾಸಿ ಅಲೆಮಾರಿಗಳ ಕುರಿತು ಸಾವಿರಾರು ಸಂಶೋಧನಾ ಲೇಖನಗಳನ್ನು ಬರೆದಿದ್ದಾರೆ. ಹತ್ತಾರು ಪುಸ್ತಕಗಳನ್ನು ಹೊರ ತಂದಿದ್ದಾರೆ’ ಎಂದು ಮಾಹಿತಿ ನೀಡಿದರು.

ಇಷ್ಟೆಲ್ಲ ಕಾಳಜಿ, ಜ್ಞಾನ, ಪಾಂಡಿತ್ಯ, ಸಂವಿಧಾನದ ಅರಿವು ಉಳ್ಳಂತಹ ದ್ವಾರಕನಾಥ್ ರವರು ಶೋಷಿತ ಸಮುದಾಯಗಳ ಪ್ರತಿನಿಧಿಯಾಗಿ ವಿಧಾನ ಪರಿಷತ್ತಿನಲ್ಲಿ ಇರಬೇಕೆಂಬುದು ಎಲ್ಲರ ಆಶಯವಾಗಿದೆ. ಆದ್ದರಿಂದ ಹಿಂದುಳಿದ ವರ್ಗದ ಆಶಾಕಿರಣವಾದ ಸಿ.ಎಸ್.ದ್ವಾರಕನಾಥ್ ರವರನ್ನು ವಿಧಾನ ಪರಿಷತ್ತಿಗೆ ನಾಮನಿರ್ದೇಶನ ಮಾಡಬೇಕು ಎಂದು ಕೋರಿದರು.

ಕರ್ನಾಟಕ ರಾಜ್ಯ ಅಲೆಮಾರಿ ಬುಡಕಟ್ಟು ಮಹಾಸಭಾದ ಜಿಲ್ಲಾ ಕಾರ್ಯದರ್ಶಿ ಮಂಜು, ಬಲರಾಮು, ಸುರೇಶ್ ಸೇರಿದಂತೆ ಇತರರು ಹಾಜರಿದ್ದರು.