ಸಾರಾಂಶ
ಕನ್ನಡಪ್ರಭ ವಾರ್ತೆ ಹೂವಿನಹಡಗಲಿ
ಸಂಗೀತ, ಚಿತ್ರಕಲಾ, ರಂಗಕಲಾ ಮತ್ತು ದೈಹಿಕ ಶಿಕ್ಷಣ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳಬೇಕೆಂದು ಆಗ್ರಹಿಸಿ ಇಲ್ಲಿನ ಎಐಡಿವೈಒ ಸಂಘಟನೆ ಪಟ್ಟಣದ ಲಾಲ್ ಬಹದ್ದೂರ್ ಶಾಸ್ತ್ರಿ ವೃತ್ತದಲ್ಲಿ ಪ್ರತಿಭಟನೆ ಮಾಡಿ ತಾಲೂಕು ಕಚೇರಿ ಅಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.ಸಂಘಟನೆಯ ಪಾಲರ್ ಹಾಗೂ ಅಜಯ್ ಮಾತನಾಡಿ, ರಾಜ್ಯದಲ್ಲಿ ನಿರುದ್ಯೋಗದ ಸಮಸ್ಯೆ ದಿನೇ ದಿನೇ ಹೆಚ್ಚುತ್ತಿದೆ. ಆಡಳಿತಾರೂಢ ಸರ್ಕಾರಗಳು ಯಾವುದೇ ಔದ್ಯೋಗಿಕ ನೀತಿಗಳನ್ನು ಜಾರಿಗೆ ತರದಿರುವುದು ವಿಪರ್ಯಾಸದ ಸಂಗತಿಯಾಗಿದೆ ಎಂದರು.
ಮುಖ್ಯವಾಗಿ ಪ್ರತಿವರ್ಷ ಕೋಟ್ಯಂತರ ಯುವಕರು ಈ ನಿರುದ್ಯೋಗದ ಪಡೆಗೆ ಸೇರಿಕೊಳ್ಳುತ್ತಿದ್ದಾರೆ. ಈ ಸಾಲಿನಲ್ಲಿ ಸಂಗೀತ, ಚಿತ್ರಕಲೆ, ನೃತ್ಯ, ನಾಟಕ ಮತ್ತು ದೈಹಿಕ ಶಿಕ್ಷಣ ವಿಷಯಗಳಲ್ಲಿ ಪದವಿಗಳನ್ನು ಪಡೆದವರೂ ಇದ್ದಾರೆ. ಇವರು ಅತ್ಯಂತ ಹೆಚ್ಚಿನ ನಿರ್ಲಕ್ಷ್ಯಕ್ಕೆ ಒಳಗಾದವರಾಗಿದ್ದಾರೆ. ನಿರುದ್ಯೋಗದ ಬೇಗೆಯಲ್ಲಿ ಬೇಯುತ್ತಿದ್ದಾರೆ. ಇನ್ನೊಂದೆಡೆ ಸರ್ಕಾರ ಕಾಯಂ ಹುದ್ದೆಗಳನ್ನು ಭರ್ತಿ ಮಾಡದೆ ಗುತ್ತಿಗೆ ಆಧಾರದಲ್ಲಿ ಅಥವಾ ಅತಿಥಿಗಳ ರೂಪದಲ್ಲಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುತ್ತಿದೆ. ಇವರಿಗೆ ಸಿಗುವ ಸಂಬಳವೂ ಕಡಿಮೆ. ಈ ಕನಿಷ್ಠ ವೇತನದಲ್ಲಿ ಇಂದಿನ ದುಬಾರಿ ಬೆಲೆ ಏರಿಕೆಯ ಬಿಸಿಗೆ ಗೌರವಯುತ ಜೀವನ ನಡೆಸುವುದು ದುಸ್ತರವಾಗಿದೆ ಎಂದರು.ಇದರಿಂದ ಅವರು ಮಾನಸಿಕ ಜರ್ಜರಿತರಾಗುತ್ತಿದ್ದಾರೆ. ಆದ್ದರಿಂದ ಈ ಎಲ್ಲ ಶಿಕ್ಷಕರನ್ನು ಕಾಯಂ ಆಗಿ ನೇಮಕ ಮಾಡಿಕೊಳ್ಳಬೇಕೆಂದು ಒತ್ತಾಯಿಸಿದರು.
ಕೆ. ಗೀತಾ, ಅನುರಾಧ ಮಾತನಾಡಿ, ರಾಜ್ಯದಲ್ಲಿ 5240 ಸರ್ಕಾರಿ ಪ್ರೌಢಶಾಲೆಗಳಿದ್ದು, ಅವುಗಳಲ್ಲಿ ಕೆಲಸ ಮಾಡುತ್ತಿರುವ ಈ ಎಲ್ಲ ಸಹಪಠ್ಯ ವಿಷಯಗಳ ಒಟ್ಟು ಬೋಧಕರ ಸಂಖ್ಯೆ 1500 ದಾಟುವುದಿಲ್ಲ. ಅದರಲ್ಲಿ ಅನೇಕರು ನಿವೃತ್ತಿಯ ಅಂಚಿನಲ್ಲಿದ್ದಾರೆ. ಇನ್ನೂ ಕೆಲವರನ್ನು ಕಡಿಮೆ ದಾಖಲಾತಿಯ ಕಾರಣಕ್ಕೆ ಬೇರೆ ಶಾಲೆಗಳಿಗೆ ವರ್ಗಾಯಿಸಲಾಗುತ್ತಿದೆ ಎಂದರು.ಅಪಾರ ಸಂಖ್ಯೆಯ ಅಭ್ಯರ್ಥಿಗಳು ಪ್ರತಿವರ್ಷ ಈ ವಿಷಯಗಳಲ್ಲಿ ಪದವಿ ಗಳಿಸಿ ಉದ್ಯೋಗಕ್ಕಾಗಿ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಆದರೆ ಈ ವಿಷಯಗಳಿಗೆ 2008- 09ನೇ ಸಾಲಿನಲ್ಲಿ ಸುಮಾರು 600 ಶಿಕ್ಷಕರನ್ನು ನೇಮಕಾತಿ ಮಾಡಿದ್ದು ಬಿಟ್ಟರೆ ಇದುವರೆಗೆ ಈ ಶಿಕ್ಷಕರ ನೇಮಕಾತಿಗಳೇ ಆಗಿಲ್ಲ. ವಸತಿ ಶಾಲೆಗಳಿಗೆ 2022- 23ರಲ್ಲಿ ಕ್ರೈಸ್ ಅಡಿಯಲ್ಲಿ ಸುಮಾರು 1200 ಶಿಕ್ಷಕರ ನೇಮಕವಾಗಿದೆ. ಆದರೆ ಇನ್ನೂ ಬಹುತೇಕ ಶಾಲೆಗಳಿಗೆ ಈ ಶಿಕ್ಷಕರ ನೇಮಕಾತಿ ಆಗಬೇಕಿದೆ ಎಂದರು.
ಶಿವಾನಂದಾಚಾರ್ ಮಾತನಾಡಿ, ಮಕ್ಕಳಿಗೆ ಭಾಷೆ, ಗಣಿತ, ವಿಜ್ಞಾನ, ಸಮಾಜ ವಿಜ್ಞಾನಗಳು ಮಾತ್ರವಲ್ಲದೇ ಸಂಗೀತ, ಚಿತ್ರಕಲೆ, ರಂಗಕಲೆ ಮತ್ತು ದೈಹಿಕ ಶಿಕ್ಷಣ ಇವೇ ಮೊದಲಾದ ಲಲಿತಕಲೆಗಳೂ ಹಾಗೂ ಕಸರತ್ತಿನ ಕಲೆಗಳು ಅವಶ್ಯಕವಾಗಿವೆ. ಆ ಮೂಲಕ ಮಾತ್ರವೇ ಪರಿಪೂರ್ಣ ವ್ಯಕ್ತಿತ್ವ ವಿಕಸನ ಸಾಧ್ಯ. ಮಕ್ಕಳ ಬೌದ್ಧಿಕ, ದೈಹಿಕ, ಮಾನಸಿಕ, ಭಾವನಾತ್ಮಕ ಮತ್ತು ಸಾಂಸ್ಕೃತಿಕ ಬೆಳವಣಿಗೆಗೆ ಇವುಗಳು ತುಂಬಾ ಅವಶ್ಯಕವಾಗಿದೆ. ಮಕ್ಕಳಿಗೆ ಈ ಲಲಿತಕಲೆಗಳ ಅರಿವು ಮತ್ತು ತರಬೇತಿ ಸಿಗಲೆಂದು ಈ ಕಲೆಗಳಲ್ಲಿ ಪರಿಣಿತಿ ಹೊಂದಿದ ಶಿಕ್ಷಕರ ನೇಮಕಾತಿಗೆ ತಜ್ಞರು ಶಿಫಾರಸು ಮಾಡಿದ್ದಾರೆ. ಈ ಹಿಂದಿನ ಅನೇಕ ಶಿಕ್ಷಣ ಆಯೋಗಗಳೂ ಈ ಅಂಶವನ್ನು ಎತ್ತಿಹಿಡಿದಿವೆ ಎಂದರು.ಹಾಲೇಶ ನಾಯ್ಕ, ಎಂ. ನಾಗರಾಜ ಮಾತನಾಡಿದರು. ಪ್ರತಿಭಟನೆಯಲ್ಲಿ ಅಭಿಷೇಕ, ಉಮೇಶ, ನಾಗರತ್ನ, ವೀರಭದ್ರಾಚಾರ್, ಹಾಲೇಶ, ಕೋಟ್ರೇಶ, ಮೌನೇಶ, ರವಿ, ಮಂಜುನಾಥ, ದೀಕ್ಷಿತಕುಮಾರ, ನಟರಾಜ, ಅಜಯ್ ಸೇರಿದಂತೆ ಇತರರು ಉಪಸ್ಥಿತರಿದ್ದರು.