ದತ್ತಾಂಶ ಸಂಗ್ರಹಕ್ಕೆ ನ್ಯಾ.ದಾಸ್ ನೇಮಕ ಉತ್ತಮ ನಿರ್ಧಾರ

| Published : Nov 16 2024, 12:34 AM IST

ಸಾರಾಂಶ

ಅನಾದಿ ಕಾಲದಿಂದಲೂ ಶೋಷಣೆಗೆ ಒಳಗಾಗಿ, ಜ್ವಲಂತ ಸಮಸ್ಯೆಗಳ ಸುಳಿಗೆ ಸಿಲುಕಿದ್ದ ಮಾದಿಗ ಮತ್ತು ಸೋದರ ಜಾತಿಗಳಿಗೆ ಒಳಮೀಸಲಾತಿ ವರವಾಗಿ ಪರಿಣಮಿಸಿದೆ. ದತ್ತಾಂಶ ಸಂಗ್ರಹಕ್ಕೆ ಆಯೋಗ ರಚಿಸಿ, ಅದಕ್ಕೆ ನ್ಯಾ.ನಾಗಮೋಹನ ದಾಸ್‌ ಅವರನ್ನು ನೇಮಿಸಿರುವುದು ಸ್ವಾಗತಾರ್ಹ ಹಾಗೂ ಅತ್ಯುತ್ತಮ ನಿರ್ಧಾರ ಎಂದು ಕಾಂಗ್ರೆಸ್‌ ಹಿರಿಯ ನಾಯಕ, ಮಾಜಿ ಸಚಿವ ಎಚ್‌.ಆಂಜನೇಯ ದಾವಣಗೆರೆಯಲ್ಲಿ ಹೇಳಿದ್ದಾರೆ.

- ಸಿಎಂ ಸಿದ್ದರಾಮಯ್ಯ ದಿಟ್ಟ ಕ್ರಮ ಕೈಗೊಂಡು, ಮಾದಿಗ ಸೋದರ ಸಮಾಜಕ್ಕೆ ನ್ಯಾಯ ಒದಗಿಸಲಿ: ಎಚ್.ಆಂಜನೇಯ

- - - ಕನ್ನಡಪ್ರಭ ವಾರ್ತೆ, ದಾವಣಗೆರೆ

ಅನಾದಿ ಕಾಲದಿಂದಲೂ ಶೋಷಣೆಗೆ ಒಳಗಾಗಿ, ಜ್ವಲಂತ ಸಮಸ್ಯೆಗಳ ಸುಳಿಗೆ ಸಿಲುಕಿದ್ದ ಮಾದಿಗ ಮತ್ತು ಸೋದರ ಜಾತಿಗಳಿಗೆ ಒಳಮೀಸಲಾತಿ ವರವಾಗಿ ಪರಿಣಮಿಸಿದೆ. ದತ್ತಾಂಶ ಸಂಗ್ರಹಕ್ಕೆ ಆಯೋಗ ರಚಿಸಿ, ಅದಕ್ಕೆ ನ್ಯಾ.ನಾಗಮೋಹನ ದಾಸ್‌ ಅವರನ್ನು ನೇಮಿಸಿರುವುದು ಸ್ವಾಗತಾರ್ಹ ಹಾಗೂ ಅತ್ಯುತ್ತಮ ನಿರ್ಧಾರ ಎಂದು ಕಾಂಗ್ರೆಸ್‌ ಹಿರಿಯ ನಾಯಕ, ಮಾಜಿ ಸಚಿವ ಎಚ್‌.ಆಂಜನೇಯ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಳಮೀಸಲಾತಿ ನೀಡುವ ಕಾರ್ಯಕ್ಕೆ ಇದೀಗ ಚಾಲನೆ ಸಿಕ್ಕಿದೆ. ನಮ್ಮ ಸಮುದಾಯದ 3 ದಶಕದ ಹೋರಾಟದ ಫಲವಿದು. ಸುಪ್ರೀಂ ಕೋರ್ಟ್‌ ಒಳ ಮೀಸಲಾತಿ ಜಾರಿ ಅಧಿಕಾರ ಆಯಾ ರಾಜ್ಯ ಸರ್ಕಾರದ್ದೆಂಬ ತೀರ್ಪು ನೀಡಿದ್ದು, ಮಾದಿಗ ಸಮುದಾಯದ ಸಮಗ್ರ ಪ್ರಗತಿಗೆ ರಹದಾರಿಯಾಗಿದೆ ಎಂದರು.

ಸಿಎಂ ಸಿದ್ದರಾಮಯ್ಯ ಯಾರ ಒತ್ತಡಕ್ಕೂ ಮಣಿಯದೇ, ಒಳಮೀಸಲಾತಿ ಜಾರಿಗೊಳಿಸುವ ನಿರ್ಣಯ ಕೈಗೊಂಡಿದ್ದು, ಮೊದಲ ಹೆಜ್ಜೆಯಾಗಿ ದತ್ತಾಂಶ ಸಂಗ್ರಹಕ್ಕೆ ಆಯೋಗ ರಚಿಸಿ, ಅದಕ್ಕೆ ನ್ಯಾ.ನಾಗಮೋಹನ ದಾಸರನ್ನು ನೇಮಿಸಿದ್ದು, ಪರಿಶಿಷ್ಟ ಸಮುದಾಯದಲ್ಲಿ ಆಶಾಕಿರಣ ಮೂಡಿಸಿದೆ ಎಂದು ತಿಳಿಸಿದರು.

ಪರಿಶಿಷ್ಟ ಜಾತಿಯಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಿಸಬೇಕೆಂಬ ಹೋರಾಟದ ಪರಿಣಾಮ ನಾಗ ಮೋಹನದಾಸ್ ನೇತೃತ್ವದ ಆಯೋಗ ರಚನೆಯಾಗಿದೆ. ಪರಿಶಿಷ್ಟ ಜಾತಿಗೆ 15ರಿಂದ 17, ಪರಿಶಿಷ್ಟ ಪಂಗಡಕ್ಕೆ ಶೇ.7 ಹೀಗೆ ಒಟ್ಟು 18ರಿಂದ ಶೇ.24ಕ್ಕೆ ಎಸ್ಸಿ-ಎಸ್ಟಿ ಮೀಸಲಾತಿ ಪ್ರಮಾಣ ಹೆಚ್ಚಿಸಿ, ಶಿಫಾರಸು ಮಾಡಿತ್ತು. ಸಾಮಾಜಿಕ ನ್ಯಾಯ, ಜಾತಿ ವ್ಯವಸ್ಥೆ, ಹಿಂದುಳಿದ ವರ್ಗದ ಜನರ ಬಗ್ಗೆ ಕಾಳಜಿ ಹೊಂದಿರುವ ನಾಗಮೋಹನ ದಾಸ್‌ ನೇಮಕ ಅತ್ಯುತ್ತಮ ನಿರ್ಧಾರ ಎಂದು ಅವರು ಸ್ವಾಗತಿಸಿದರು.

ಮಾದಿಗ ಸಮುದಾಯ ರಾಜ್ಯಾದ್ಯಂತ ಹೆಚ್ಚಿನ ಸಂಖ್ಯೆಯಲ್ಲಿದೆ. ಕೆಲ ಜಿಲ್ಲೆಗಳಲ್ಲಿ ಮಾದಿಗ, ಛಲವಾದಿಗಳು ಆದಿ ಕರ್ನಾಟಕ ಎಂದು ಗುರುತಿಸಲ್ಪಟ್ಟಿದ್ದು, ಗೊಂದಲ ಉಂಟುಮಾಡಿದೆ. ನಾಗಮೋಹನ ದಾಸ್‌ ಅವರು ಈ ವಿಷಯದಲ್ಲಿ ಆಳ ಅಧ್ಯಯನ ಮಾಡಿ, ಮಾದಿಗ ಮತ್ತು ಅದರ ಉಪ ಜಾತಿಗಳನ್ನು ಗುರುತಿಸುವ ಕೆಲಸ ಮಾಡಿ, ನೊಂದ ಸಮುದಾಯಕ್ಕೆ ನ್ಯಾಯ ಒದಗಿಸುತ್ತಾರೆಂಬ ವಿಶ್ವಾಸವಿದೆ ಎಂದರು.

2011ರಲ್ಲಿ ಕೇಂದ್ರ ನಡೆಸಿದ ಜನಗಣತಿ ಅಂಕಿ ಅಂಶ, ಎಲ್‌ಜಿ ಹಾವನೂರು, ನ್ಯಾ.ಸದಾಶಿವ, ಕಾಂತರಾಜ ಆಯೋಗದ ವರದಿ ಅಧ್ಯಯನ ನಡೆಸಿದರೆ, ದತ್ತಾಂಶ ಮಾಹಿತಿ ಸಿಗುತ್ತದೆ. ಒಳಮೀಸಲಾತಿ ಜಾರಿಗೆ ಇರುವ ಸಣ್ಣಪುಟ್ಟ ಅಡೆತಡೆ ಸಹ ತಕ್ಷಣ ನಿವಾರಿಸಲು ಸಾಧ್ಯ ಎಂದು ಅವರು ಹೇಳಿದರು.

ಯಾವುದೇ ಟೀಕೆ, ಆರೋಪ, ಬೆದರಿಕೆ, ವಿರೋಧ ವ್ಯಕ್ತವಾದರೂ ಸಿದ್ದರಾಮಯ್ಯ ಜಗ್ಗಬಾರದು. ವರದಿಯನ್ನು ಸಂಪುಟದಲ್ಲಿ ಮಂಡಿಸಿ, ಚರ್ಚಿಸಿ, ವರದಿ ಬಹಿರಂಗಪಡಿಸಲಿ. ಸಣ್ಣಪುಟ್ಟ ಲೋಪಗಳಿದ್ದರೆ ಸರಿಪಡಿಸಬಹುದು. ಈ ಮೂಲಕ ಸಾಮಾಜಿಕ ನ್ಯಾಯ ಕಲ್ಪಿಸಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ, ಪಾಲಿಕೆ ಮಾಜಿ ಸದಸ್ಯ ಎಸ್.ಮಲ್ಲಿಕಾರ್ಜುನ, ಹಿರಣ್ಣಯ್ಯ, ಅಂಜಿನಪ್ಪ ಕಣ್ಣಾಳ್‌, ಅಳಗವಾಡಿ ನಿಂಗಪ್ಪ, ಗುಡ್ದಪ್ಪ ಇತರರು ಇದ್ದರು.

- - -

ಕೋಟ್‌ ರಾಜ್ಯದಲ್ಲಿ ಕೈಗೊಂಡ ಜಾತಿಗಣತಿ ವರದಿ ಬಗ್ಗೆ ವಿರೋಧಿಸುವವರು ಸ್ಪಷ್ಟ ಕಾರಣ ನೀಡಬೇಕು. ಅನಗತ್ಯ ಟೀಕೆ, ಆರೋಪ ಸರಿಯಲ್ಲ. ಸರ್ಕಾರದಡಿ ಲಕ್ಷಕ್ಕೂ ಅದಿಕ ಸರ್ಕಾರಿ ನೌಕರರು, ಅಧಿಕಾರಿಗಳು ಕಾರ್ಯ ನಿರ್ವಹಿಸಿದ್ದಾರೆ. ಅಂತಹವರ ಶ್ರಮವನ್ನು ಗೌರವಿಸಬೇಕು

- ಎಚ್.ಆಂಜನೇಯ, ಕಾಂಗ್ರೆಸ್‌ ನಾಯಕ

- - -

ಟಾಪ್‌ ಕೋಟ್‌ ವರದಿ ಬಹಿರಂಗಕ್ಕೆ ಮುನ್ನವೇ ಅನಗತ್ಯ ವಿರೋಧಿಸಿದರೆ ಸಹಿಸುವುದಿಲ್ಲ. ನೂರಾರು ವರ್ಷದಿಂದಲೂ ಸಾಮಾಜಿಕ ನ್ಯಾಯ ಕಲ್ಪಸುವಾಗ ಆಡಳಿತದ ವಿರುದ್ಧ ಕೆಲವರು ತಿರುಗಿ ಬಿದ್ದಿದ್ದಾರೆ. ಸಾಹು ಮಹಾರಾಜ, ನಾಲ್ವಡಿ ಕೃಷ್ಣರಾಜ ಒಡೆಯರ್, ಪಿ.ಪಿ.ಸಿಂಗ್, ದೇವರಾಜ ಅರಸು ಇತರರು ಯಾವುದೇ ಒತ್ತಡ, ಪ್ರತಿಭಟನೆಗೂ ಬೆದರದೇ ಹಕ್ಕು ಕಲ್ಪಿಸಿಕೊಟ್ಟಿದ್ದಾರೆ

- ಎಚ್.ಆಂಜನೇಯ, ಮಾಜಿ ಸಚಿವ

- - - -15ಕೆಡಿವಿಜಿ9, 10: ಎಚ್.ಆಂಜನೇಯ