ಕನ್ನಡಪ್ರಭ ವಾರ್ತೆ ಮದ್ದೂರು

ತಾಲೂಕಿನ ಕೊಪ್ಪ ಹೋಬಳಿ ಪಣ್ಣೇದೊಡ್ಡಿ ಗ್ರಾಮದ ಹಾಲು ಉತ್ಪಾದಕರ ಸಂಘದ ನೂತನ ಕಾರ್ಯದರ್ಶಿ ನೇಮಕ ವಿಚಾರದಲ್ಲಿ ಬೈಲಾ ಮೀರಿ ಅಕ್ರಮವಾಗಿ ನೇಮಕ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿ ಸಂಘದ ಆಡಳಿತ ಮಂಡಳಿ ಹಾಗೂ ಹಾಲು ಉತ್ಪಾದಕರ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದೆ.

ಘಟನೆಯಲ್ಲಿ ನಡೆದ ಮಾರಾಮಾರಿಯಲ್ಲಿ ಸಂಘದ ಮಾಜಿ ಕಾರ್ಯದರ್ಶಿ ನಂದೀಶ್ ಸೇರಿದಂತೆ ಆತನ ಬೆಂಬಲಿಗರು ಗಾಯಗೊಂಡಿದ್ದಾರೆ. ಇದರಿಂದ ಗ್ರಾಮದಲ್ಲಿ ಬಿಗುವಿನ ಪರಿಸ್ಥಿತಿ ಉಂಟಾಗಿದೆ. ಮುನ್ನೆಚ್ಚರಿಕೆಯಾಗಿ ಪೊಲೀಸರು ಬಂದೋಬಸ್ತ್ ಮಾಡಿದ್ದಾರೆ.

ಪಣ್ಣೇದೊಡ್ಡಿ ಗ್ರಾಮದ ಡೇರಿ ಹಾಲಿ ಕಾರ್ಯದರ್ಶಿಯಾಗಿದ್ದ ನಂದೀಶ್ (60) ಕಳೆದ ಮೇ 13ರಂದು ನಿವೃತ್ತಿಯಾಗಿದ್ದರು. ಅವರ ಸ್ಥಾನಕ್ಕೆ ನೂತನ ಕಾರ್ಯದರ್ಶಿ, ಉಪಾಧ್ಯಕ್ಷೆ ಮಹದೇವಮ್ಮ ಪುತ್ರಿ ಪಿ.ಸಿ.ನಿಶ್ಚಿತ ಅವರನ್ನು ಸಂಘದ ಬೈಲಾ ವಿರುದ್ಧವಾಗಿ ನೇಮಕ ಮಾಡಿಕೊಳ್ಳಲಾಗಿತ್ತು.

ಈ ಹಿನ್ನೆಲೆಯಲ್ಲಿ ಸಂಘದ ಆಡಳಿತ ಮಂಡಳಿ ನಿರ್ದೇಶಕರು ಹಾಗೂ ಹಾಲು ಉತ್ಪಾದಕರು ಮತ್ತು ಗ್ರಾಮಸ್ಥರ ನಡುವೆ ವಿವಾದ ಉಂಟಾಗಿತ್ತು. ಜೂನ್ 11 ಮತ್ತು 12ರಂದು ಸಂಘಕ್ಕೆ ಹಾಲು ಪೂರೈಸಿದ್ದ ಉತ್ಪಾದಕರಿಗೆ ನಿಕಟ ಪೂರ್ವ ಕಾರ್ಯದರ್ಶಿ ನಂದೀಶ್ ಅವರೊಂದಿಗೆ ಹಣ ಬಟವಾಡೆ ಮಾಡಲು ಆಗಮಿಸಿದ್ದ ಜಿಲ್ಲಾ ಹಾಲು ಒಕ್ಕೂಟದ ಮದ್ದೂರು ಉಪ ಕಚೇರಿ ಉಪ ವ್ಯವಸ್ಥಾಪಕ ಡಾ.ಮಂಜೇಗೌಡ, ವಿಸ್ತರಣಾಧಿಕಾರಿ ಭವ್ಯ ಎದುರೇ ನಿರ್ದೇಶಕರ ಗುಂಪಿನ ರಾಜೇಶ್, ಸುಜಯ್ ಕುಮಾರ್, ಅಖಿಲೇಶ್, ಕೃಷ್ಣ, ಕೌಶಿಕ್, ಮಹಾದೇವ ಅವರು ನಂದೀಶ್ ವಿರುದ್ಧ ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಾಲಿನ ಕ್ಯಾನ್ ಮುಚ್ಚಳದಿಂದ ಹಲ್ಲೇ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.


ಪ್ರಕರಣ ಸಂಬಂಧಪಟ್ಟ ಎರಡು ಗುಂಪುಗಳ ವಿರುದ್ಧ ಬೆಸಗರಹಳ್ಳಿಠಾಣೆ ಪೊಲೀಸರು ಬಿಎಸ್ಎನ್ ಕಾಯ್ದೆ 352, 118,115,351 ಹಾಗೂ 351,3 ಅನ್ವಯ ದೂರು ಪ್ರತಿ ದೂರು ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.

ದೈನಂದಿನ ಹಾಲು ಶೇಖರಣೆ ಸ್ಥಗಿತ:

ಡೇರಿ ಆಡಳಿತ ಮಂಡಳಿ ಹಾಗೂ ಹಾಲು ಉತ್ಪಾದಕರ ನಡುವೆ ಭಿನ್ನಾಭಿಪ್ರಾಯದಿಂದಾಗಿ ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿ ಜಿಲ್ಲಾ ಹಾಲು ಒಕ್ಕೂಟ ದೈನಂದಿನ ಹಾಲು ಶೇಖರಣೆಯನ್ನು ಸ್ಥಗಿತಗೊಳಿಸಿದೆ.

ಸಂಘದ ಆಡಳಿತ ಮಂಡಳಿ ಹಾಲು ಶೇಖರಣೆಗೆ ಸಹಕರಿಸದ ಕಾರಣ ಪರಿಸ್ಥಿತಿ ಸಹಜ ಸ್ಥಿತಿಗೆ ಬರುವವರೆಗೆ ಹಾಲು ಶೇಖರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ಜಿಲ್ಲಾ ಒಕ್ಕೂಟದ ಮದ್ದೂರು ಉಪಕಚೇರಿ ಉಪವ್ಯವಸ್ಥಾಪಕರ ಶಿಫಾರಸ್ಸಿನ ಮೇರೆಗೆ ಜೂನ್ 13ರ ಸಂಜೆಯಿಂದ ಡೇರಿಯಲ್ಲಿ ಹಾಲು ಶೇಖರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ಜಿಲ್ಲಾ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.