ಸೌಹಾರ್ದತೆಗೆ ಸಾಕ್ಷಿಯಾದ ಈ ಭೂಮಿಯಲ್ಲಿ ಕಾನೂನು ಸುವ್ಯವಸ್ಥೆಗೆ ದಕ್ಕೆಯಾಗದಂತೆ ಹಿರಿಯರೂ ವೈಯಕ್ತಿಕ ಭಿನ್ನಾಭಿಪ್ರಾಯ ಬದಿಗಿಟ್ಟು ಜನರ ಆಶಯ ಹಾಗೂ ಪಂಚಪೀಠಾಧ್ಯಕ್ಷರ ಮಾರ್ಗದರ್ಶನದಂತೆ ಪಂಚಗ್ರಹ ಹಿರೇಮಠದ ಮುಂದಿನ ಕಾರ್ಯಕ್ರಮ ಸುಗಮವಾಗಿ ನಡೆಸಿಕೊಂಡು ಹೋಗಬೇಕು.

ನವಲಗುಂದ:

ಸ್ಥಳೀಯ ಪಂಚಗ್ರಹ ಹಿರೇಮಠದ ನೂತನ ಪೀಠಾಧಿಕಾರಿ ನೇಮಕ ಸಂಬಂಧ ಎರಡು ಗುಂಪುಗಳ ಮಧ್ಯೆ ಏರ್ಪಟ್ಟಿದ್ದ ಭಿನ್ನಾಭಿಪ್ರಾಯವು ತಹಸೀಲ್ದಾರ್ ಹಾಗೂ ಪೊಲೀಸರ ಮಧ್ಯಸ್ಥಿಕೆಯಲ್ಲಿ ಜರುಗಿದ ಶಾಂತಿ ಸಭೆಯಲ್ಲಿ ಶಮನವಾಯಿತು. ಭಕ್ತರು ಪಂಚಪೀಠದ ಜಗದ್ಗುರುಗಳ ಮಾರ್ಗದರ್ಶನದಂತೆ ಪೀಠಾಧಿಕಾರಿಗಳನ್ನು ನೇಮಕ ಮಾಡಲಾಗುವುದು ಎಂದು ತೀರ್ಮಾನಿಸಿದರು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ತಹಸೀಲ್ದಾರ್ ಸುಧೀರ ಸಾಹುಕಾರ, ಪಂಚಗ್ರಹ ಹಿರೇಮಠದ ಕುರಿತಾಗಿ ಕೆಲವರಲ್ಲಿ ಸಂಪರ್ಕದ ಕೊರತೆಯಿಂದಾಗಿ ಭಿನ್ನಾಭಿಪ್ರಾಯ ಉಂಟಾಗಿದ್ದವು. ಇದಕ್ಕೂ ಮೊದಲು ಮಠದ ಪರ ಹಾಗೂ ವಿರೋಧವಿರುವ ಭಕ್ತರ ಜತೆ ಪೊಲೀಸ್ ಅಧಿಕಾರಿಗಳು ಸಭೆ ನಡೆಸಿ ಪರಸ್ಪರ ಚರ್ಚಿಸಿ ಒಮ್ಮತ ಮೂಡಿಸುವ ಪ್ರಯತ್ನ ಮಾಡಿದ್ದಾರೆ. ಹೀಗಾಗಿ ಈ ಸಭೆಯಲ್ಲಿ ಪಾಲ್ಗೊಂಡ ಎಲ್ಲರೂ ಒಮ್ಮತದ ನಿರ್ಧಾರಕ್ಕೆ ಬಂದು ನೂತನ ಪೀಠಾಧಿಕಾರ ನೇಮಕ ಮಾಡಲು ಜಗದ್ಗುರುಗಳ ಸೂಚನೆಯಂತೆ ಮುನ್ನಡೆಯುವ ತೀರ್ಮಾನಕ್ಕೆ ಬಂದಿದ್ದಾರೆ ಎಂದರು.

ಸಿಪಿಐ ರವಿ ಕಪ್ಪತ್ತನವರ ಮಾತನಾಡಿ, ಸೌಹಾರ್ದತೆಗೆ ಸಾಕ್ಷಿಯಾದ ಈ ಭೂಮಿಯಲ್ಲಿ ಕಾನೂನು ಸುವ್ಯವಸ್ಥೆಗೆ ದಕ್ಕೆಯಾಗದಂತೆ ಹಿರಿಯರೂ ವೈಯಕ್ತಿಕ ಭಿನ್ನಾಭಿಪ್ರಾಯ ಬದಿಗಿಟ್ಟು ಜನರ ಆಶಯ ಹಾಗೂ ಪಂಚಪೀಠಾಧ್ಯಕ್ಷರ ಮಾರ್ಗದರ್ಶನದಂತೆ ಪಂಚಗ್ರಹ ಹಿರೇಮಠದ ಮುಂದಿನ ಕಾರ್ಯಕ್ರಮ ಸುಗಮವಾಗಿ ನಡೆಸಿಕೊಂಡು ಹೋಗುವಂತೆ ಸಲಹೆ ನೀಡಿದರು.

ಹಿರಿಯರಾದ ಅಣ್ಷಪ್ಪ ಬಾಗಿ ಹಾಗೂ ರಾಯನಗೌಡ ಪಾಟೀಲ ಮಾತನಾಡಿ, ಸಮಾಜದಲ್ಲಿ ಶಾಂತಿ ಕಾಪಾಡುವ ಮೂಲಕ ಪಂಚಪೀಠದ ಜಗದ್ಗುರುಗಳ ಸೂಚನೆಯಂತೆ ಎಲ್ಲರೂ ನಡೆದುಕೊಳ್ಳುತ್ತೇವೆ ಎಂದು ಭರವಸೆ ನೀಡಿದರು.

ಪುರಸಭೆ ಮುಖ್ಯಾಧಿಕಾರಿ ಶರಣಪ್ಪ ಪೂಜಾರ, ಹಿರಿಯರಾದ ಪಾಂಡಪ್ಪ ಕೋನರಡ್ಡಿ, ಬಸವರಾಜ ಹರಿವಾಳದ, ಬಾಬಾಜಾನ ಮುಲ್ಲಾ, ಯಲ್ಲಪ್ಪ ಭೋವಿ, ಮಹಾಂತೇಶ ಕಲಾಲ, ಎಂ.ಡಿ. ಕುಲಕರ್ಣಿ, ಶ್ರೀಶೈಲ ಮೂಲಿಮನಿ, ಉಸ್ಮಾನ ಬಬರ್ಚಿ, ದೇವೇಂದ್ರಪ್ಪ ಹಳ್ಳದ, ಕೊಟ್ರೇಶ ಹಿರೇಮಠ, ಮರಿತಮ್ಮಪ್ಪ ಹಳ್ಳದ, ವಿ.ಎಸ್. ಜಾವೂರಮಠ, ಶರ್ಮಾ ಹಿರೇಮಠ, ವಿಜಯಕಾಂತ ನಿಡವಣಿ ಸೇರಿದಂತೆ ನೂರಾರು ಭಕ್ತರು ಉಪಸ್ಥಿತರಿದ್ದರು. ಪಿಎಸ್ಐ ಜನಾರ್ಧನ ಭಟ್ರಹಳ್ಳಿ ನಿರ್ವಹಿಸಿದರು.