ದೇವನಹಳ್ಳಿ: 1 ಸಾವಿರ ಎಸ್‌ಐ ಹುದ್ದೆ ಹಾಗೂ 8 ಸಾವಿರ ಪೇದೆಗಳನ್ನು ಆದಷ್ಟು ಶೀಘ್ರ ನೇಮಕ ಮಾಡಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.

ಪಟ್ಟಣದಲ್ಲಿ ಪ್ರೆಸ್ಟೀಜ್ ಗ್ರೂಪ್ ಸಂಸ್ಥೆಯ ಸಿಎಸ್‌ಆರ್ ಅನುದಾನದಡಿ ನಿರ್ಮಿಸಿರುವ ಸಹಾಯಕ ಪೊಲೀಸ್ ಆಯುಕ್ತರ ಕಚೇರಿ ಹಾಗೂ ಪೊಲೀಸ್ ಠಾಣೆಯ ನೂತನ ಕಟ್ಟಡಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಪೊಲೀಸ್ ಇಲಾಖೆಯಲ್ಲಿ ದೊಡ್ಡ ಬದಲಾವಣೆಗಳನ್ನು ಮಾಡಲಾಗುತ್ತಿದೆ. ಪಿಎಸ್‌ಐ ಹಗರಣ ಬಗೆಹರಿಸಿ ಈಗ ೫೪೫ ಜನ ತರಬೇತಿ ಪಡೆದು ಕೆಲಸಕ್ಕೆ ಸೇರಿದ್ದಾರೆ. ಎಸ್‌ಐ ಹಾಗೂ ಪೇದೆಗಳ ನೇಮಕಕ್ಕೆ ಮುಖ್ಯಮಂತ್ರಿಗಳು ಅನುಮತಿ ನೀಡಿದ್ದು ಶೀಘ್ರದಲ್ಲೇ ನೇಮಕ ಮಾಡಲಾಗುವುದು ಎಂದು ಹೇಳಿದರು.

ಕರ್ನಾಟಕ ಪೊಲೀಸ್ ಇಲಾಖೆಗೆ ಒಂದು ಇತಿಹಾಸ ಇದೆ. ಜನಸ್ನೇಹಿಯಾಗಿ ಕೆಲಸ ಮಾಡುತ್ತಿರುವ ಇಲಾಖೆ. ಇಲಾಖೆಯಲ್ಲಿ ಅನೇಕ ಬದಲಾವಣೆಗಳನ್ನು ತರಲಾಗಿದೆ. ಇಡೀ ದೇಶದಲ್ಲಿ ನ್ಯಾಯವನ್ನು ಜರೂರಾಗಿ ಒದಗಿಸುವುದರಲ್ಲಿ ಕರ್ನಾಟಕ ನಂಬರ್ ಒನ್ ಸ್ಥಾನದಲ್ಲಿದೆ ಎಂದರು. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಈಗ ಸಾಕಷ್ಟು ಭೂಮಿ ಬೆಲೆ ಜಾಸ್ತಿ ಆಗಿದೆ. ರಿಯಲ್ ಎಸ್ಟೇಟ್ ದಂಧೆ ಬಗ್ಗೆ ಸಂಸದರು ಪ್ರಸ್ತಾಪಿಸಿದ್ದಾರೆ. ನಾನು ಅನೇಕ ಬಾರಿ ಸಭೆಗಳಲ್ಲಿ ಪ್ರಸ್ತಾಪಿಸಿದ್ದೇನೆ. ಯಾವ ಅಧಿಕಾರಿಯೂ ಇಲಾಖೆಯಲ್ಲಿ ರಿಯಲ್ ಎಸ್ಟೇಟ್ ದಂಧೆ ಮಾಡಬಾರದು. ಯಾರಾದರೂ ಪೊಲೀಸ್ ಸ್ಟೇಷನ್‌ಗೆ ಬಂದಾಗ ಎಫ್‌ಐಆರ್ ದಾಖಲಿಸಿ ಅವರಿಗೆ ನ್ಯಾಯ ಒದಗಿಸಿ ಕೊಡುವುದು ಬಿಟ್ಟರೆ ಪೊಲೀಸ್ ಸ್ಟೇಷನ್ನಲ್ಲಿ ಕುಳಿತುಕೊಂಡು ದಂಧೆ ಬಗ್ಗೆ ಮಾತನಾಡಿ ಹಣ ವಸೂಲಿ ಮಾಡಬಾರದು ಎಂದು ಪೊಲೀಸ್ ಇಲಾಖೆಗೆ ಖಡಕ್ ಸೂಚನೆ ನೀಡಿದರು.

ದೇವನಹಳ್ಳಿಯ ಆವತಿಯಲ್ಲಿ ಭಾರತ ಮೀಸಲು ಪಡೆ ಆವತಿ ಘಟಕದ ಶಂಕುಸ್ಥಾಪನೆ ನೆರವೇರಿಸಿದ ಸಚಿವರು, ಶಾಂತಿ ಸುವ್ಯವಸ್ಥೆ ಕಾಪಾಡಲು ತುರ್ತು ಸಂದರ್ಭಗಳಲ್ಲಿ ಮೀಸಲು ಪಡೆಯನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ರಾಜ್ಯದಲ್ಲಿ ೧೪ ಮೀಸಲು ಪೊಲೀಸ್ ಪಡೆ ಇದೆ. ಬೆಂಗಳೂರು ದಕ್ಷಿಣ ಭಾಗದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಆವತಿ ಬಳಿ ಮೀಸಲು ಪಡೆ ಘಟಕ ಮಾಡಲಾಗುತ್ತಿದೆ. ೧೦೦೦ಕ್ಕು ಹೆಚ್ಚು ಸಿಬ್ಬಂದಿ ಇಲ್ಲಿ ತರಬೇತಿ ಪಡೆಯಲಿದ್ದಾರೆ ಎಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಮಾತನಾಡಿ, ಪ್ರೆಸ್ಟೀಜ್ ಕಂಪನಿ ಬಹಳಷ್ಟು ಸಮಾಜ ಸೇವೆ ಮಾಡಿದೆ. ಜಿಲ್ಲೆಯಲ್ಲಿ ಸಿಎಸ್‌ಆರ್ ಅನುದಾನದಲ್ಲಿ ಶಾಲಾ ಕಾಲೇಜು, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿವಿಧ ಸವಲತ್ತು, ಉದ್ಯೋಗ ಒದಗಿಸುವುದು ಆದ್ಯತೆ ಆಗಿರಬೇಕು. ಜಿಲ್ಲೆಯಲ್ಲಿರುವ ಕಂಪನಿಗಳು ಸ್ಥಳೀಯರಿಗೆ ಹೆಚ್ಚಿನ ಉದ್ಯೋಗಾವಕಾಶ ಕಲ್ಪಿಸಿದರೆ ರೈತ ಕುಟುಂಬಗಳಿಗೂ ಅನುಕೂಲವಾಗಲಿದೆ ಎಂದು ಹೇಳಿದರು.


ಪೊಲೀಸ್ ಠಾಣೆಗಳು ಜನಸ್ನೇಹಿಯಾಗಿ ಕೆಲಸ ಮಾಡಬೇಕು. ಯಾರಾದರೂ ಪೊಲೀಸ್ ಸ್ಟೇಷನ್ ಗೆ ಬಂದು ದೂರು ಕೊಟ್ಟಲ್ಲಿ ಅವರನ್ನ ಸಂಯಮದಿಂದ ವರ್ತಿಸಿ ಬಗೆಹರಿಸುವಂತ ಸಮಸ್ಯೆಗಳಿದ್ದಲ್ಲಿ ಅಲ್ಲೇ ಬಗೆಹರಿಸುವುದು ಉತ್ತಮ. ತೀರ ಅನಿವಾರ್ಯವಾದಲ್ಲಿ ಮಾತ್ರ ಎಫ್‌ಐಆರ್ ದಾಖಲಿಸಬೇಕು. ಇಲ್ಲವಾದಲ್ಲಿ ಅವರು ಸ್ಟೇಷನ್, ಕೋರ್ಟ್ ಎಂದು ಅಲೆದಾಡಿ ಮನಸ್ತಾಪ, ಸಮಯ ವ್ಯರ್ಥ, ಹಣ ವ್ಯಯದಿಂದ ಗ್ರಾಮಗಳ ಅಭಿವೃದ್ಧಿ ಕುಂಠಿತವಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಚಿಕ್ಕಬಳ್ಳಾಪುರ ಸಂಸದರಾದ ಡಾ.ಕೆ.ಸುಧಾಕರ್, ರಾಜ್ಯ ಪೊಲೀಸ್ ಮಹಾ ನಿರ್ದೇಶಕರಾದ ಡಾ. ಎಂ.ಎ.ಸಲೀಂ, ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಸೀಮಂತ್ ಕುಮಾರ್ ಸಿಂಗ್, ಜಿಲ್ಲಾಧಿಕಾರಿ ಡಾ. ಕೆ.ಎನ್. ಅನುರಾಧ, ಜಂಟಿ ಪೊಲೀಸ್ ಆಯುಕ್ತರಾದ ರಮೇಶ್ ಬಾನೋಥ್, ವಂಶಿಕೃಷ್ಣ, ರೊನಾಲ್ಡೊ ಕೊಲಾಸೊ, ಪ್ರೆಸ್ಟಿಜ್ ಗ್ರೂಪ್ ಸಂಸ್ಥೆಯ ಮುಖ್ಯಸ್ಥದ ನದೀಮ್ ಮತ್ತು ನಹೀಮ್, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ರಾಜಣ್ಣ, ಬಯಪಾ ಅಧ್ಯಕ್ಷರಾದ ಶಾಂತಕುಮಾರ್, ಜಗನ್ನಾಥ್, ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು, ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.

(ಫೋಟೋ ಕ್ಯಾಫ್ಞನ್‌)

ದೇವನಹಳ್ಳಿಯಲ್ಲಿ ಪ್ರೆಸ್ಟೀಜ್ ಗ್ರೂಪ್ ಸಂಸ್ಥೆಯ ಸಿಎಸ್‌ಆರ್ ಅನುದಾನದಡಿ ನಿರ್ಮಿಸಿರುವ ಸಹಾಯಕ ಪೊಲೀಸ್ ಆಯುಕ್ತರ ಕಚೇರಿ ಹಾಗೂ ಪೊಲೀಸ್ ಠಾಣೆಯ ಕಟ್ಟಡಗಳನ್ನು ಗೃಹ ಸಚಿವ ಡಾ.ಜಿ.ಪರಮೇಶ್ವರ್‌, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್‌.ಮುನಿಯಪ್ಪ ಉದ್ಘಾಟಿಸಿದರು.