ಸಾರಾಂಶ
ಬೆಂಗಳೂರು : ಆಸ್ತಿ ಮಾಲೀಕರಿಗೆ ತ್ವರಿತವಾಗಿ ಇ-ಖಾತಾ ವಿತರಣೆಗಾಗಿ ಹೆಚ್ಚುವರಿ ಸಹಾಯಕ ಕಂದಾಯ ಅಧಿಕಾರಿಗಳನ್ನು ನಿಯೋಜಿಸುವಂತೆ ಎಲ್ಲ 8 ವಲಯ ಆಯುಕ್ತರಿಗೆ ಸೂಚಿಸಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು. ಸಹಾಯಕ ಕದಾಯ ಅಧಿಕಾರಿಗಳ ಲಾಗಿನ್‌ನಲ್ಲಿ ಬಾಕಿ ಇರುವ ಇ-ಖಾತಾ ಅರ್ಜಿಗಳನ್ನು ತ್ವರಿತವಾಗಿ ವಿಲೇ ಮಾಡಲು ವಲಯವಾರು ಹೆಚ್ಚುವರಿ ಸಹಾಯಕ ಕಂದಾಯ ಅಧಿಕಾರಿಗಳನ್ನು ನಿಯೋಜಿಸಲಾಗುವುದು. ಮುಂದಿನ 1 ವಾರದೊಳಗೆ ಬಾಕಿ ಇರುವ ಎಲ್ಲ ಅರ್ಜಿಗಳನ್ನು ವಿಲೇವಾರಿ ಮಾಡುವಂತೆ ತಿಳಿಸಲಾಗಿದೆ ಎಂದು ಹೇಳಿದರು.
ನಗರದಲ್ಲಿ ಈವರೆಗೆ ಇ-ಖಾತಾ ಪಡೆಯಲು ನಿಗದಿತ ವೆಬ್‌ಸೈಟ್‌ಗೆ 72.96 ಲಕ್ಷ ಭೇಟಿ ನೀಡಿದ್ದು, 6 ಲಕ್ಷ ಆಸ್ತಿಗಳಿಗೆ ಕರಡು ಇ-ಖಾತಾ ಡೌನ್‌ಲೋಡ್ ಮಾಡಿಕೊಂಡಿದ್ದಾರೆ. ಸಹಾಯಕ ಕಂದಾಯ ಅಧಿಕಾರಿಗಳ ಲಾಗಿನ್ ಮೂಲಕ ಈವರೆಗೆ 21,369 ಅಂತಿಮ ಇ-ಖಾತಾ ನೀಡಲಾಗಿದ್ದು, ಇನ್ನೂ 14 ಸಾವಿರ ಇ-ಖಾತಾ ಅರ್ಜಿಗಳನ್ನು ಪರಿಶೀಲಿಸಿ ಅಂತಿಮ ಇ-ಖಾತಾ ವಿತರಣೆ ಬಾಕಿಯಿದೆ. ಅವುಗಳನ್ನು ಶೀಘ್ರದಲ್ಲಿ ವಿಲೇವಾರಿ ಮಾಡಲಾಗುವುದು ಎಂದರು.
ಪ್ರತಿ ಬುಧವಾರ ಕಂದಾಯ ಅದಾಲತ್: ಬಿಬಿಎಂಪಿ ವ್ಯಾಪ್ತಿಯಲ್ಲಿ ನಾಗರಿಕರ ಸಮಸ್ಯೆ ಆಲಿಸಲು ಎಲ್ಲ ವಾರ್ಡ್‌ಗಳಲ್ಲಿ ನಿಯೋಜಿಸಿರುವ ನೋಡಲ್ ಅಧಿಕಾರಿಗಳು ಪ್ರತಿ ಬುಧವಾರ ವಾರ್ಡ್ ಕಚೇರಿಗಳಲ್ಲಿ ಕುಂದುಕೊರತೆ ಸಭೆ ನಡೆಸಬೇಕು. ಜತೆಗೆ ಕಂದಾಯ ವಿಭಾಗದ ಅಧಿಕಾರಿಗಳ ಕಚೇರಿಗಳಲ್ಲಿ ಪ್ರತಿ ಬುಧವಾರ ಬೆಳಗ್ಗೆ 10ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಕಂದಾಯ ಮತ್ತು ಕುಂದು ಕೊರತೆಗಳ ಅದಾಲತ್ ನಡೆಸುವಂತೆ ತಿಳಿಸಲಾಗಿದೆ ಎಂದು ತುಷಾರ್ ಗಿರಿನಾಥ್ ತಿಳಿಸಿದರು. ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಪಾವತಿಸದವರಿಗೆ ನೋಟಿಸ್ ಜಾರಿ ಮಾಡಲಾಗುವುದು. ನೋಟಿಸ್ ನಂತರವೂ ತೆರಿಗೆ ಬಾಕಿ ಪಾವತಿಸದಿದ್ದರೆ, ಆಸ್ತಿಗಳನ್ನು ಜಪ್ತಿ ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದು ವಿವರಿಸಿದರು.