ದಾಂಡೇಲಿ: ಕಳೆದ ಅನೇಕ ವರ್ಷಗಳಿಂದ ವೈದ್ಯರ ಕೊರತೆಯಲ್ಲಿದ್ದ ಇಎಸ್ಐ ಆಸ್ಪತ್ರೆಗೆ ಮೇ 15ರೊಳಗೆ ಅಗತ್ಯ ವೈದ್ಯರನ್ನು ನಿಯೋಜಿಸುವುದಾಗಿ ರಾಜ್ಯ ಕಾರ್ಮಿಕ ವಿಮಾ ಆಯುಕ್ತ ದಿನೇಶ ಕುಮಾರ್ ಮತ್ತು ಸರ್ಕಾರದ ಕಾರ್ಮಿಕ ಕಾರ್ಯದರ್ಶಿ ಸಲ್ಮಾ ಫಾತಿಮಾ ಭರವಸೆ ನೀಡಿದರು.

ಅವರು ಶುಕ್ರವಾರ‌ ನಗರದ ಇಎಸ್ಐ ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಸ್ಥಳೀಯ ಮುಖಂಡರು ಹಾಗೂ ಕಾರ್ಮಿಕ ಮುಖಂಡರ ಮನವಿಗೆ ಪ್ರತಿಕ್ರಿಯಿಸಿ ಮಾತನಾಡಿದರು. ಇಎಸ್ಐ ಆಸ್ಪತ್ರೆಗೆ ಭೇಟಿ ನೀಡುತ್ತಿದ್ದಂತೆಯೇ ಅಧಿಕಾರಿಗಳಿಗೆ ದಾಂಡೇಲಿಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ‌ ಹಲವಾಯಿ ಹಾಗೂ ದಾಂಡೇಲಿ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ರಾಜೇಸಾಬ ಕೇಸನೂರ ಅವರು ಪುಷ್ಪಗುಚ್ಛ ನೀಡಿ ಸ್ವಾಗತಿಸಿದರು.

ವೈದ್ಯರ ಕೊರತೆಯಿಂದ ಕಾರ್ಮಿಕರಿಗೆ ತೀವ್ರ ತೊಂದರೆಯಾಗುತ್ತಿರುವುದರಿಂದ ಕೂಡಲೇ ವೈದ್ಯರನ್ನು ನಿಯೋಜಿಸುವಂತೆ ಅವರು ಮನವಿ ನೀಡಿದರು.

ಆನಂತರ ಅಧಿಕಾರಿಗಳು ಸ್ಥಳೀಯ ಮುಖಂಡರು ಹಾಗೂ ಕಾರ್ಮಿಕ ಮುಖಂಡರೊಂದಿಗೆ ಸಭೆ ನಡೆಸಿ, ಚರ್ಚಿಸಿದರು. ದಾಂಡೇಲಿ ಕಾರ್ಮಿಕರ ಸಂಘದ ಪ್ರಧಾನ‌ ಕಾರ್ಯದರ್ಶಿ ರಾಜೇಸಾಬ ಕೇಸನೂರ ಮಾತನಾಡಿ, ನಗರದ ಇಎಸ್ಐ ಆಸ್ಪತ್ರೆಯಡಿ ಸಾಕಷ್ಟು ಭೂಮಿ ಇದ್ದು, ಇಎಸ್ಐ ಆಸ್ಪತ್ರೆಯನ್ನು ಮಲ್ಟಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನಾಗಿ ಮಾಡುವಂತೆ ಮನವಿ ಮಾಡಿದರು. ಹತ್ತು ವರ್ಷಗಳಿಂದ ಕಾರ್ಮಿಕರ ವೇತನ ಮಿತಿ ₹21 ಸಾವಿರದ ವರೆಗೆ ಇದ್ದು, ಈ ಮಿತಿಯನ್ನು ಹೆಚ್ಚಳಗೊಳಿಸದೇ ಇರುವುದರಿಂದ ಸಾವಿರಾರು ಕಾರ್ಮಿಕರು ಇಎಸ್ಐ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ. ಆದ್ದರಿಂದ ಕಾರ್ಮಿಕರ ವೇತನ ಮಿತಿ ಹೆಚ್ಚಿಸಿ, ಇಎಸ್ಐ ಸೌಲಭ್ಯಗಳನ್ನು ಪಡೆಯಲು ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ ಹಲವಾಯಿ ಮಾತನಾಡಿ, ಕಳೆದ ಅನೇಕ ವರ್ಷಗಳಿಂದ ಇಎಸ್ಐ ಆಸ್ಪತ್ರೆಯಲ್ಲಿ ಕೇವಲ ಒಬ್ಬರೇ ವೈದ್ಯರು ಸೇವೆ ಸಲ್ಲಿಸುತ್ತಿದ್ದು, ವೈದ್ಯರ ನಿಯೋಜನೆಗೆ ಸಾಕಷ್ಟು ಬಾರಿ ಮನವಿ ಮಾಡಿದ್ದೇವೆ. ಮೇ 15ರೊಳಗೆ ವೈದ್ಯರನ್ನು ನಿಯೋಜಿಸದೇ ಇದ್ದಲ್ಲಿ ಮೇ 20ರ ಆನಂತರ ಇಎಸ್ಐ ಆಸ್ಪತ್ರೆ ಎದುರು ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಹೇಳಿದರು.


ನಗರಸಭಾ ಮಾಜಿ ಸದಸ್ಯ ಕೀರ್ತಿ ಗಾಂವಕರ, ಮುಖಂಡರಾದ ಕರೀಂ ಅಜ್ರೇಕರ, ಫಿರೋಜ್ ಪಿರ್ಜಾದೆ, ಹನುಮಂತ ಕಾರ್ಗಿ, ಸಂತೋಷ್ ಬುಲುಬುಲೆ, ದೀಪಕ ಸಾಮಂತ, ಅನಿಲ್ ನಾಯ್ಕರ, ಪ್ರಮೋದ ಸಪ್ರೆ, ದಿವಾಕರ ನಾಯ್ಕ, ದಾದಾಪೀರ್ ನದೀಮುಲ್ಲಾ, ಮಹಾದೇವ ಜಮಾದಾರ, ಗೌರೀಶ ನಾಯ್ಕ, ಫ್ರಾನ್ಸಿಸ್ ಮಸ್ಕರೇನಸ್ ಮೊದಲಾದವರು ಮಾತನಾಡಿದರು.

ರಾಜ್ಯ ಕಾರ್ಮಿಕ ವಿಮಾ ಆಯುಕ್ತ ದಿನೇಶ ಕುಮಾರ್ ಮತ್ತು ಸರ್ಕಾರದ ಕಾರ್ಮಿಕ ಕಾರ್ಯದರ್ಶಿ ಸಲ್ಮಾ ಫಾತಿಮಾ ಅವರು, 2026 ಏ. 1ರಿಂದ ಇಎಸ್ಐ ಆಸ್ಪತ್ರೆಯನ್ನು ಸೊಸೈಟಿ ವ್ಯಾಪ್ತಿಯಡಿ ತರಲಾಗಿದೆ. ಇದು ತ್ವರಿತ ಸ್ಪಂದನೆಗೆ ಹಾಗೂ ಇಎಸ್ಐ ಆಸ್ಪತ್ರೆಗಳ ಬಲವರ್ಧನೆಗೆ ಪರಿಣಾಮಕಾರಿಯಾಗಲಿದೆ. ಹಣಕಾಸಿನ ನಿರ್ವಹಣೆ ಸೇರಿದಂತೆ ಎಲ್ಲ ಅನುಮೋದನೆಗಳನ್ನು ಸಮಿತಿಯೇ ನೇರವಾಗಿ ಮಾಡಲಿದ್ದು, ಕೇಂದ್ರ ಸರ್ಕಾರದಿಂದ ಬರುವ ಅನುದಾನವನ್ನು, ಸಮಿತಿಯಲ್ಲಿ ನಿರ್ಧರಿಸಿ ಸದ್ಬಳಕೆ ಮಾಡಿಕೊಳ್ಳಲು ಅವಕಾಶವಿರುವುದರಿಂದ ಇದು ಇಎಸ್ಐ ಆಸ್ಪತ್ರೆಗಳಲ್ಲಿರುವ ಸಮಸ್ಯೆಗಳ ಪರಿಹಾರಕ್ಕೆ ಪ್ರಯೋಜನವಾಗಲಿದೆ ಎಂದರು.

ಹುಬ್ಬಳ್ಳಿಯ ಕಿಮ್ಸ್ ವೈದ್ಯಕೀಯ ಅಧೀಕ್ಷಕ ಡಾ. ಯೂನುಸ್ ಎಸ್. ನಾಜ್ಮಿ, ಕಾರವಾರದ ಕ್ರಿಮ್ಸ್ ವೈದ್ಯಕೀಯ ಅಧೀಕ್ಷಕ ಡಾ. ನರೇಶ ಪಾವಸ್ಕರ, ಇಎಸ್ಐ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಜಿ.ಎಸ್. ಸೈಯದ್, ತಾಲೂಕು ಆಡಳಿತ ವೈದ್ಯಾಧಿಕಾರಿ ಡಾ. ಅನಿಲ್ ಕುಮಾರ್ ನಾಯ್ಕ ಮತ್ತು ಇಎಸ್ಐ ಆಸ್ಪತ್ರೆಯ ವಿನಾಯಕ ಪವಾರ್ ಉಪಸ್ಥಿತರಿದ್ದರು.