ಕಡ್ಡಾಯ ಸೇವೆ ನಿಯಮದಿಂದ ವೈದ್ಯರ ನೇಮಕಾತಿ: ಸಚಿವ ಗುಂಡೂರಾವ್

| Published : Jul 23 2025, 01:45 AM IST

ಕಡ್ಡಾಯ ಸೇವೆ ನಿಯಮದಿಂದ ವೈದ್ಯರ ನೇಮಕಾತಿ: ಸಚಿವ ಗುಂಡೂರಾವ್
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದ ಬಹುತೇಕ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಹಾಗೂ ತಜ್ಞ ವೈದ್ಯರುಗಳ ಕೊರತೆ ಇದೆ. ಖಾಲಿ ಇರುವ ಹುದ್ದೆಗಳಿಗೆ ಎಂಬಿಬಿಎಸ್‌ ಹಾಗೂ ತಜ್ಞ ವೈದ್ಯರುಗಳು ಬರಲು ಮನಸ್ಸು ಮಾಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕಡ್ಡಾಯ ನಿಯಮದ ಅಡಿ ನೇಮಕಕ್ಕೆ ತೀರ್ಮಾನಿಸಿದ್ದು, ಇದರ ಅಡಿ ಸುಮಾರು 2 ಸಾವಿರ ಎಂಬಿಬಿಎಸ್‌ ಹಾಗೂ 1700 ತಜ್ಞ ವೈದ್ಯರುಗಳ ನೇಮಕಾತಿ ಆಗಸ್ಟ್ ತಿಂಗಳಲ್ಲಿ ನಡೆಯಲಿದೆ.

ಧಾರವಾಡ: ಸರ್ಕಾರಿ ವೈದ್ಯಕೀಯ ಕಾಲೇಜುಗಳಿಂದ ವೈದ್ಯಕೀಯ ಕೋರ್ಸ್‌ಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಕಡ್ಡಾಯ ಸೇವೆ ನಿಯಮಗಳ ಮೂಲಕ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಖಾಲಿ ಇರುವ ವೈದ್ಯರ ಹುದ್ದೆಗಳನ್ನು ಸದ್ಯದಲ್ಲಿಯೇ ಭರ್ತಿ ಮಾಡಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ ಗುಂಡೂರಾವ್ ಹೇಳಿದರು.

ಇಲ್ಲಿಯ ಜಿಪಂ ಭವನದಲ್ಲಿ ಮಂಗಳವಾರ ಬೆಳಗಾವಿ ವಿಭಾಗ ಮಟ್ಟದ ಜಿಲ್ಲೆಗಳ ಪ್ರಗತಿ ಪರಿಶೀಲನೆ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ರಾಜ್ಯದ ಬಹುತೇಕ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಹಾಗೂ ತಜ್ಞ ವೈದ್ಯರುಗಳ ಕೊರತೆ ಇದೆ. ಖಾಲಿ ಇರುವ ಹುದ್ದೆಗಳಿಗೆ ಎಂಬಿಬಿಎಸ್‌ ಹಾಗೂ ತಜ್ಞ ವೈದ್ಯರುಗಳು ಬರಲು ಮನಸ್ಸು ಮಾಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕಡ್ಡಾಯ ನಿಯಮದ ಅಡಿ ನೇಮಕಕ್ಕೆ ತೀರ್ಮಾನಿಸಿದ್ದು, ಇದರ ಅಡಿ ಸುಮಾರು 2 ಸಾವಿರ ಎಂಬಿಬಿಎಸ್‌ ಹಾಗೂ 1700 ತಜ್ಞ ವೈದ್ಯರುಗಳ ನೇಮಕಾತಿ ಆಗಸ್ಟ್ ತಿಂಗಳಲ್ಲಿ ನಡೆಯಲಿದೆ ಎಂಬ ಭರವಸೆ ನೀಡಿದರು.

ಜತೆಗೆ ಎಂಬಿಬಿಎಸ್‌ ಹಾಗೂ ತಜ್ಞ ವೈದ್ಯರುಗಳ ಸಂಬಳವನ್ನು ಜಾಸ್ತಿ ಮಾಡಿದ್ದು, ಖಾಸಗಿ ವೈದ್ಯಕೀಯ ಕಾಲೇಜುಗಳ ಪದವೀಧರರನ್ನು ಸಹ ಖಾಲಿ ಹುದ್ದೆ ಭರ್ತಿ ಮಾಡುವ ಭರವಸೆ ಇದೆ ಎಂದರು.

ಆರೋಗ್ಯ ಇಲಾಖೆಯ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಯಾರ ಹಸ್ತಕ್ಷೇಪ ಇಲ್ಲದೇ ಐದು ಸಾವಿರ ಸಿಬ್ಬಂದಿಯನ್ನು ಕೌನ್ಸಲಿಂಗ್‌ ಮೂಲಕ ಪಾರದರ್ಶಕವಾಗಿ ವರ್ಗಾವಣೆ ಮಾಡಲಾಗಿದೆ ಎಂದ ಅವರು, ಯಾವ ಎನ್‌ಎಚ್‌ಎಂ ಸಿಬ್ಬಂದಿಯನ್ನು ಸರ್ಕಾರ ನೌಕರಿಯಿಂದ ವಜಾ ಮಾಡಿಲ್ಲ. ಅವರ ಮೌಲ್ಯಮಾಪನ ಮಾಡಿ ಯಾರು ಸರಿಯಾಗಿ ಕೆಲಸ ಮಾಡುತ್ತಿಲ್ಲವೋ ಅವರಿಗೆ ನೋಟಿಸ್ ನೀಡಿ ಕೆಲಸದಲ್ಲಿ ಸುಧಾರಣೆ ಮಾಡಿಕೊಳ್ಳಲು ಸೂಚಿಸಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಹೃದಯಾಘಾತ ವ್ಯತ್ಯಾಸವಾಗಿಲ್ಲ:

ರಾಜ್ಯದಲ್ಲಿ ಹೃದಯಾಘಾತ ಸಂಖ್ಯೆಯಲ್ಲಿ ವ್ಯತ್ಯಾಸವೇನೂ ಆಗಿಲ್ಲ. ಜೀವನ ಶೈಲಿ, ಒತ್ತಡದ ಜೀವನದಿಂದ ಆರೋಗ್ಯದಲ್ಲಿ ಏರುಪೇರಾಗುತ್ತಿದ್ದು, ಆಗಾಗ ತಪಾಸಣೆಗಳನ್ನು ಮಾಡಿಸಿಕೊಳ್ಳಬೇಕು. ಅದಕ್ಕಾಗಿ ಪುನೀತ್ ರಾಜಕುಮಾರ ಹೃದಯ ಜ್ಯೋತಿ ಯೋಜನೆ ಜಾರಿಗೆ ಮಾಡಿದ್ದು ಇನ್ಮುಂದೆ ರಾಜ್ಯದ ಎಲ್ಲ ತಾಲೂಕು ಆಸ್ಪತ್ರೆಗಳಲ್ಲೂ ಹೃದಯ ತಪಾಸಣೆ ನಡೆಯಲಿದೆ. ಈಗಾಗಲೇ ಈ ಯೋಜನೆಯಿಂದ ಸಾಕಷ್ಟು ಜನರು ತಪಾಸಣೆ ಮಾಡಿಸಿಕೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದರು.