ಕನಕಪುರ: ಶೀಘ್ರದಲ್ಲೇ ತಿಗಳ ಸಮುದಾಯದ ಜಿಲ್ಲಾ ಸಮಾವೇಶ ಆಯೋಜಿಸಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ಅಖಿಲ ಕರ್ನಾಟಕ ಅಗ್ನಿವಂಶ ಕ್ಷತ್ರಿಯ ತಿಗಳ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಬಸವರಾಜು ತಿಳಿಸಿದರು

ಕನಕಪುರ: ಶೀಘ್ರದಲ್ಲೇ ತಿಗಳ ಸಮುದಾಯದ ಜಿಲ್ಲಾ ಸಮಾವೇಶ ಆಯೋಜಿಸಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ಅಖಿಲ ಕರ್ನಾಟಕ ಅಗ್ನಿವಂಶ ಕ್ಷತ್ರಿಯ ತಿಗಳ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಬಸವರಾಜು ತಿಳಿಸಿದರು.

ತಾಲೂಕಿನ ಕಸಬಾ ಹೋಬಳಿಯ ಹಣಜವಾಡಿ ಗ್ರಾಮದಲ್ಲಿ ಕನಕಪುರ ಮತ್ತು ಹಾರೋಹಳ್ಳಿ ತಾಲೂಕು ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸಮುದಾಯದಲ್ಲಿ 1 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇದೆ. ಜನಪ್ರತಿನಿಧಿಗಳ ಆಯ್ಕೆಯಲ್ಲಿ ನಮ್ಮ ಸಮುದಾಯ ನಿರ್ಣಾಯಕ ಸ್ಥಾನದಲ್ಲಿದೆ. ಹಾಗಾಗಿ ನಮ್ಮ ಸಮುದಾಯದ ಅಭಿವೃದ್ಧಿಗೆ ಸರ್ಕಾರ ಸಹಕಾರ ಕೊಡಬೇಕು ಎಂದು ಮನವಿ ಮಾಡಿದರು.

ನಮ್ಮ ಜಿಲ್ಲೆಯವರೇ ಡಿಕೆ ಶಿವಕುಮಾರ್ ಮುಖ್ಯಮಂತ್ರಿಗಳಾಗಿದ್ದಾರೆ. ಮಾಗಡಿಯ ಬಾಲಕೃಷ್ಣ ಅವರು ಉಸ್ತುವಾರಿ ಮಂತ್ರಿಗಳಾಗಿದ್ದಾರೆ. ಶೀಘ್ರದಲ್ಲಿ ಬೆಂಗಳೂರು ದಕ್ಷಿಣ ಜಿಲ್ಲೆ ತಿಗಳ ಸಮುದಾಯದ ಸಮಾವೇಶವನ್ನು ಆಯೋಜಿಸಿ ಮುಖ್ಯಮಂತ್ರಿಗಳು ಮತ್ತು ಸಚಿವರಿಗೆ ಅಭಿನಂದನೆ ಸಲ್ಲಿಸಿ ನಾಲ್ಕು ತಾಲೂಕುಗಳಲ್ಲಿ ಸಮುದಾಯ ಭವನ ಹಾಗೂ ಸಮುದಾಯದ ಅಭಿವೃದ್ಧಿಗೆ ಮನವಿ ಮಾಡಲಾಗುವುದು ತಿಳಿಸಿದರು.

ಕನಕಪುರ ತಾಲೂಕು ಸಂಘದ ಚಟುವಟಿಕೆ ಕಾರಣಾಂತರಗಳಿಂದ ಸ್ಥಗಿತಗೊಂಡಿತ್ತು. ಈ ಹಿಂದೆ ಪೆರುಮಾಳಯ್ಯ ಹಾಗೂ ಪುಟ್ಟ ಮಾದೇಗೌಡರು ಸಮುದಾಯದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಈಗ ಮತ್ತೆ ಕನಕಪುರ ಮತ್ತು ಹಾರೋಹಳ್ಳಿ ಎರಡು ತಾಲೂಕುಗಳು ಸೇರಿ ಒಂದು ತಾಲೂಕು ಸಂಘದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಆಯ್ಕೆಯಾದ ಪದಾಧಿಕಾರಿಗಳು ಸಮುದಾಯ ಸಂಘಟನೆ ಮಾಡುವುದರ ಜೊತೆಗೆ ಸಮುದಾಯದ ಅಭಿವೃದ್ಧಿಗೆ ಕ್ರಿಯಾಶೀಲರಾಗಿ ಕೆಲಸ ಮಾಡಬೇಕು ಎಂದು ಹೇಳಿದರು.

ಕೆಟಿಎಸ್‌ವಿ ವಿದ್ಯಾಸಂಸ್ಥೆ ಅಧ್ಯಕ್ಷ ಸಿದ್ದಯ್ಯ ಮಾತನಾಡಿ, ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ನಮ್ಮ ಸಮುದಾಯದ ಮುಖಂಡರು ಕಾಂಗ್ರೆಸ್ ಪರ ಕೆಲಸ ಮಾಡಿದ್ದೇವೆ. ಸಮುದಾಯದ ಅಭಿವೃದ್ಧಿಗೆ ಮನವಿ ಮಾಡೋಣ, ಮುಖ್ಯಮಂತ್ರಿಗಳು ಖಂಡಿತ ಸಹಕರಿಸುತ್ತಾರೆ. ಸಂಘದಲ್ಲಿ ಪದಾಧಿಕಾರಿಗಳಾಗಿ ಆಯ್ಕೆಯಾಗುವುದು ದೊಡ್ಡ ವಿಷಯ ಅಲ್ಲ, ಆದರೆ ಅದರ ಜವಾಬ್ದಾರಿ ಮತ್ತು ಕರ್ತವ್ಯಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಸಮುದಾಯವನ್ನು ಒಗ್ಗೂಡಿಸಬೇಕು ಎಂದು ಕಿವಿ ಮಾತು ಹೇಳಿದರು.

ತಾಲೂಕು ಸಂಘದ ಪದಾಧಿಕಾರಿಗಳು:ತಾಲೂಕು ಗೌರವಾಧ್ಯಕ್ಷರಾಗಿ ದೊಡ್ಡ ಆಲಹಳ್ಳಿ ಚಿಕ್ಕರಾಜು, ಅಧ್ಯಕ್ಷರಾಗಿ ಮಲ್ಲಿಗೆ ಮೆಟ್ಟಿಲು ತಿಮ್ಮರಾಯಗೌಡ, ಪ್ರಧಾನ ಕಾರ್ಯದರ್ಶಿ ಅಣಜವಾಡಿ ರಾಜೀವ, ಖಜಾಂಚಿ ದೊಡ್ಡಆಲಹಳ್ಳಿ ತಿಮ್ಮಯ್ಯ, ಉಪಾಧ್ಯಕ್ಷರಾಗಿ ಚಿಕ್ಕಸ್ವಾಮಿ, ಲೋಕೇಶ್, ಕಾನೂನು ಸಲಹೆಗಾರರಾಗಿ ಹುಚ್ಚಪ್ಪ, ಸಂಘಟನಾ ಕಾರ್ಯದರ್ಶಿಗಳಾಗಿ ನಲ್ಲಹಳ್ಳಿ ಶ್ರೀನಿವಾಸ್, ಸಂಜಯ್, ಮಾದೇಶ್, ಜಂಟಿ ಕಾರ್ಯದರ್ಶಿಯಾಗಿ ಹನುಮಂತರಾಜು ಹಾಗೂ ನಿರ್ದೇಶಕರನ್ನು ಆಯ್ಕೆ ಮಾಡಲಾಯಿತು.

ಸಭೆಯಲ್ಲಿ ಕಾರ್ಯಾಧ್ಯಕ್ಷ ಎಂ.ಬಿ.ಕೃಷ್ಣಯ್ಯ, ಖಜಾಂಚಿ ಕುಮಾರ್, ನಿರ್ದೇಶಕರಾದ ಶಿವನಂಜಯ್ಯ, ರಾಜೀವ್, ಮಲ್ಲಿಕಾರ್ಜುನ್, ರಾಜ್ಯ ಕಾರ್ಯದರ್ಶಿ ಕೃಷ್ಣಯ್ಯ, ಮಂಡ್ಯ ಜಿಲ್ಲೆ ತಿಗಳರ ಸಂಘದ ಅಧ್ಯಕ್ಷ ಗುರುಮೂರ್ತಿ, ಮಾಗಡಿ ಸಂಘದ ಅಧ್ಯಕ್ಷ ಕೆಂಪಣ್ಣ, ಮಾಗಡಿ ಸಹಕಾರ ಸಂಘದ ಅಧ್ಯಕ್ಷ ಜಯಣ್ಣ, ಸಾವನದುರ್ಗ ರಂಗನಾಥಸ್ವಾಮಿ ದೇವಸ್ಥಾನದ ಅಧ್ಯಕ್ಷ ನಾಗರಾಜು, ಡೈರಿ ಕಾರ್ಯದರ್ಶಿ ಶಿವಣ್ಣ, ಮಲ್ಲಿಗೆಮೆಟ್ಟಿಲು ಸಹಕಾರ ಸಂಘದ ಸಿಇಒ ರಾಮಕೃಷ್ಣಪ್ಪ, ರಾಮನಗರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕುಮಾರ್, ಅಣೆದೊಡ್ಡಿ ಮುಖಂಡ ಶಿವನಂಜಪ್ಪ, ಅಣಜವಾಡಿ ರಾಜೀವ್, ಚಿಕ್ಕ ಕಲ್ ಬಾಳು ಸಿದ್ದರಾಜು ಉಪಸ್ಥಿತರಿದ್ದರು.

ಕೆ ಕೆ ಪಿ ಸುದ್ದಿ 01: :

ಕಸಬಾ ಹೋಬಳಿಯ ಹಣಜವಾಡಿ ಗ್ರಾಮದಲ್ಲಿ ಕನಕಪುರ ಮತ್ತು ಹಾರೋಹಳ್ಳಿ ಅಖಿಲ ಕರ್ನಾಟಕ ಅಗ್ನಿವಂಶ ಕ್ಷತ್ರಿಯ ತಿಗಳ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಘಟಕದ ನೂತನ ಪದಾಧಿಕಾರಿಗಳನ್ನು ಅಭಿನಂದಿಸಲಾಯಿತು.