Youth Congress poster war against BJP

-ಬಿ.ವೈ.ವಿಜಯೇಂದ್ರ ಹೇಳಿಕೆ ಖಂಡಿಸಿ ಯುವ ಕಾಂಗ್ರೆಸ್ ಪೋಸ್ಟರ್‌ ಅಂಟಿಸಿದ ಘಟನೆ । ದೊಡ್ಡಪೇಟೆ ಪೊಲೀಸ್ ಠಾಣೆಗೆ ದೂರು

----

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೀಡಿದ್ದ ಹೇಳಿಕೆ ಖಂಡಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು ಶುಕ್ರವಾರ ತಡರಾತ್ರಿ ನಗರದ ವಿವಿಧೆಡೆ ಪೋಸ್ಟರ್‌ಗಳನ್ನು ಅಂಟಿಸಿದ ಘಟನೆ ನಡೆದಿದೆ.

ನಗರದ ದೀನದಯಾಳ್ ರಸ್ತೆಯಲ್ಲಿರುವ ಜಿಲ್ಲಾ ಬಿಜೆಪಿ ಕಚೇರಿಯ ಗೋಡೆಗಳಿಗೆ ಪೋಸ್ಟರ್‌ಗಳನ್ನು ಅಳವಡಿಸಲಾಗಿದೆ.

ಅಲ್ಲದೇ ಬೈಪಾಸ್ ರಸ್ತೆ ಸಮೀಪವಿರುವ ಬಿ.ವೈ. ವಿಜಯೇಂದ್ರ ಅವರ ಮೈತ್ರಾದೇವಿ ನಿವಾಸದ ಕಾಂಪೌಂಡ್‌ಗೂ ಪೋಸ್ಟರ್‌ಗಳನ್ನು ಅಂಟಿಸಲಾಗಿದೆ.

ಕಾಂಗ್ರೆಸ್ ಮಕ್ಕಳು ಗಾಂಧೀಜಿಯ ಮಕ್ಕಳು, ಬಿಜೆಪಿ ಮಕ್ಕಳು- ಕಳ್ಳನ ಮಕ್ಕಳು ಎಂಬ ಬರಹಗಳಿರುವ ಪೋಸ್ಟರ್‌ಗಳನ್ನು ಯುವ ಕಾಂಗ್ರೆಸ್ ಕಾರ್ಯಕರ್ತರು ಅಂಟಿಸಿದ್ದಾರೆ.

ದಾವಣಗೆರೆಯಲ್ಲಿ ನಡೆದ ಸುದ್ದಿಗೋಷ್ಠಿಯೊಂದರಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಕಾಂಗ್ರೆಸ್ ನಾಯಕರ ವಿರುದ್ಧ ಏಕವಚನದಲ್ಲಿ ಮಾತನಾಡಿದ್ದರು. ಕಾಂಗ್ರೆಸ್‌ ಪಕ್ಷದ ಪ್ರತಿಭಟನೆಯ ಬೆನ್ನಿಗೆ ಹೇಳಿಕೆ ಹಿಂಪಡೆದಿದ್ದರು.

ಗೃಹಸಚಿವರು ಏನು ಹೇಳ್ತಾರೆ?

ಶಿವಮೊಗ್ಗ ಜಿಲ್ಲಾ ಬಿಜೆಪಿ ಕಚೇರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮನೆಗೆ ಯುವ ಕಾಂಗ್ರೆಸ್ ಕಾರ್ಯಕರ್ತರು ಪೋಸ್ಟರ್ ಅಂಟಿಸಿದ್ದಾರೆ. ರಾಜ್ಯಾದ್ಯಂತ ಕಾಂಗ್ರೆಸ್ ಕಾರ್ಯಕರ್ತರು ಗುಂಡಾಗಿರಿ ಮಾಡ್ತಿದ್ದಾರೆ. ಈ ಕೃತ್ಯಕ್ಕೆ ಗೃಹಸಚಿವರು ಏನು ಹೇಳ್ತಾರೆ ಎಂದು

ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ.ಜಗದೀಶ್ ಪ್ರಶ್ನಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಕಾರ್ಯಕರ್ತರು ಕಚೇರಿಗೆ ಪೋಸ್ಟರ್ ಅಂಟಿಸಿದ್ದಾರೆ. ಯುವ ಕಾಂಗ್ರೆಸ್ ಕಾರ್ಯಕರ್ತರ ನಡೆ ಖಂಡನೀಯ. ಇದನ್ನು ಬಿಜೆಪಿ ಕಾರ್ಯಕರ್ತರ ಪಡೆ ಯಾವುದೇ ಕಾರಣಕ್ಕೂ ಸಹಿಸಲ್ಲ ಎಂದು ಹರಿಹಾಯ್ದರು.

....ಬಾಕ್ಸ್‌....

ಬಿಜೆಪಿಯಿಂದ ದೂರು ಸಲ್ಲಿಕೆ

ಶಿವಮೊಗ್ಗ ಜಿಲ್ಲಾ ಬಿಜೆಪಿ ಕಚೇರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮನೆಗೆ ಯುವ ಕಾಂಗ್ರೆಸ್ ಕಾರ್ಯಕರ್ತರು ಪೋಸ್ಟರ್ ಅಂಟಿಸಿದ ಘಟನೆ ವಿರುದ್ಧ ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ.ಜಗದೀಶ್ ನೇತೃತ್ವದಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆಗೆ ದೂರು ಸಲ್ಲಿಸಲಾಗಿದೆ. ದುರ್ಗಿಗುಡಿ, ದೀನದಯಾಳ್ ರಸ್ತೆಯಲ್ಲಿನ ಜಿಲ್ಲಾ ಬಿಜೆಪಿ ಕಚೇರಿಯ ಮುಂಭಾಗ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿ ಎನ್ನುವ ಹೆಸರು ಮುದ್ರಿತವಾಗಿರುವ ಪೋಸ್ಟರ್‌ ಕಿಡಿಗೇಡಿಗಳು ಅಂಟಿಸಿರುವುದರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ದೊಡ್ಡಪೇಟೆ ಠಾಣೆ ಇನ್ಸ್ಪೆಕ್ಟರ್ ಸತ್ಯನಾರಾಯಣಗೆ ದೂರು ಸಲ್ಲಿಸಲಾಗಿದೆ.

ಜಿಲ್ಲಾ ಬಿಜೆಪಿ ಕಚೇರಿ ಮುಂದೆ ಪೋಸ್ಟರ್ ಅಂಟಿಸಿದ ಘಟನೆಗೆ ಸೂಕ್ತ ತನಿಖೆ ನಡೆಸಬೇಕು. ಪೋಸ್ಟರ್ ಅಂಟಿಸಿದ ವ್ಯಕ್ತಿಗಳನ್ನು ಗುರುತಿಸಿ, ಈ ಕೃತ್ಯದ ಹಿಂದಿನ ಕಾಣದ ಕೈಗಳನ್ನು ಪತ್ತೆ ಹಚ್ಚಬೇಕು. ಸಂಬಂಧಪಟ್ಟ ಸ್ಥಳದ ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿ, ತಪ್ಪಿತಸ್ಥರ ವಿರುದ್ಧ ಅನ್ವಯವಾಗುವ ಕಾನೂನು ಮತ್ತು ನಿಯಮಗಳ ಅಡಿ ಸೂಕ್ತ ಕ್ರಮ ಕೈಗೊಳ್ಳಬೇಕು.

ರಾಜಕೀಯ ಪಕ್ಷಗಳ ಕಚೇರಿಗಳ ಮುಂಭಾಗದಲ್ಲಿ ಇಂತಹ ಕೃತ್ಯಗಳು ಮರುಕಳಿಸದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು.

ಜಿಲ್ಲಾ ಬಿಜೆಪಿ ಕಚೇರಿಯ ಗೌರವ, ಭದ್ರತೆ, ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು.

ದೀಪಾವಳಿ ಸಂಭ್ರಮದಲ್ಲಿದ್ದ ಶುಭ ಸಂದರ್ಭದಲ್ಲಿ ಹಬ್ಬವನ್ನು ಆಚರಿಸದ ರೀತಿಯಲ್ಲಿ ಎಸಗಿದ ಈ ಕೃತ್ಯವನ್ನು ಖಂಡಿಸಬೇಕು ಎಂದು ಒತ್ತಾಯಿಸಿದರು. ಪೋಟೋ: 08ಎಸ್‌ಎಂಜಿಕೆಪಿ02

ಶಿವಮೊಗ್ಗ ಜಿಲ್ಲಾ ಬಿಜೆಪಿ ಕಚೇರಿಯ ಗೋಡೆಗಳಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೀಡಿದ್ದ ಹೇಳಿಕೆ ಖಂಡಿಸಿ ಪೋಸ್ಟರ್‌ಗಳನ್ನು ಅಳವಡಿಸಿರುವುದು.

-----

ಪೋಟೋ: 08ಎಸ್‌ಎಂಜಿಕೆಪಿ03

ಶಿವಮೊಗ್ಗ ಜಿಲ್ಲಾ ಬಿಜೆಪಿ ಕಚೇರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮನೆಗೆ ಯುವ ಕಾಂಗ್ರೆಸ್ ಕಾರ್ಯಕರ್ತರು ಪೋಸ್ಟರ್ ಅಂಟಿಸಿದ ಘಟನೆ ವಿರುದ್ಧ ಬಿಜೆಪಿಯಿಂದ ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ.ಜಗದೀಶ್ ನೇತೃತ್ವದಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆಗೆ ದೂರು ಸಲ್ಲಿಸಲಾಯಿತು.