ಸಾರಾಂಶ
ಸೋಮವಾರಪೇಟೆ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವ ದಿನೇಶ್ ಗುಂಡೂರಾವ್ ಭೇಟಿ ನೀಡಿದರು. ಆ ಸಂದರ್ಭ , ಡಿಎಚ್‍ಒ ಸತೀಶ್ ಕುಮಾರ್, ತಾಲೂಕು ವೈದ್ಯಾಧಿಕಾರಿ ಇಂದೂಧರ್ ಅವರಿಂದ ಮಾಹಿತಿ ಪಡೆದುಕೊಂಡರು.
ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ಖಾಲಿಯಿರುವ ಹುದ್ದೆಗಳಿಗೆ ತಜ್ಞ ವೈದ್ಯರನ್ನು ನೇಮಕ ಮಾಡಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವ ದಿನೇಶ್ ಗುಂಡೂರಾವ್ ಭರವಸೆ ನೀಡಿದರು.ಸೋಮವಾರ ಆಸ್ಪತ್ರೆಗೆ ಭೇಟಿ ನೀಡಿದ ಸಚಿವರು, ಡಿಎಚ್‍ಒ ಸತೀಶ್ ಕುಮಾರ್, ತಾಲೂಕು ವೈದ್ಯಾಧಿಕಾರಿ ಇಂದೂಧರ್ ಅವರಿಂದ ಮಾಹಿತಿ ಪಡೆದುಕೊಂಡರು.ಶಸ್ತ್ರಚಿಕಿತ್ಸಕರು, ಮೂಳೆತಜ್ಞರು, ಅರವಳಿಕೆ ತಜ್ಞರು, ರೇಡಿಯಾಲಜಿಸ್ಟ್ ಗೈನಾಕಾಲಜಿಸ್ಟ್ ಕಾಯಂ ಆಗಿದ್ದರೆ ಎಲ್ಲ ಚಿಕಿತ್ಸೆಗಳನ್ನು ನೀಡಬಹುದು. ಈ ಹುದ್ದೆಗಳನ್ನು ಭರ್ತಿಗೆ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.ಡಯಾಲಿಸಿಸ್ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಹೆಚ್ಚಿನ ಬೆಡ್‍ಗಳ ಅವಶ್ಯಕತೆಯಿದ್ದರೆ ಇಲಾಖೆಯಿಂದ ಅನುದಾನ ಒದಗಿಸಲಾಗುವುದು. ಆಸ್ಪತ್ರೆ ರಿಪೇರಿ ಕೆಲಸಕ್ಕೆ 1.70ಕೋಟಿ ರೂ. ಅನುದಾನ ನೀಡುತ್ತೇವೆ. ಅಪರೇಷನ್ ಥಿಯೇಟರ್ ಉನ್ನತೀಕರಣ ಕೈಗೊಳ್ಳಲಾಗುವುದು. ಗುತ್ತಿಗೆ ಆಧಾರದಲ್ಲಿ ವೈದ್ಯರ ನೇಮಕ ಮಾಡಿಕೊಳ್ಳಲು ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ. 1.25 ಲಕ್ಷ ರು. ಸಂಬಳ ನೀಡಲಾಗುತ್ತಿದೆ. ಆದರೂ ಗ್ರಾಮೀಣ ಆಸ್ಪತ್ರೆಗಳಿಗೆ ವೈದ್ಯರು ಬರುತ್ತಿಲ್ಲ. ಸರ್ಕಾರದೊಂದಿಗೆ ಚರ್ಚಿಸಿ ಸಂಬಳ ಹೆಚ್ಚು ಮಾಡುವ ಬಗ್ಗೆ ಚರ್ಚಿಸಿ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.ಅರವಳಿಗೆ ತಜ್ಞರು ಆಗಮಿಸಿದ ತಕ್ಷಣ ಸಾಧ್ಯವಾಗುವ ಶಸ್ತ್ರಚಿಕಿತ್ಸೆಗಳನ್ನು ಆಸ್ಪತ್ರೆಯಲ್ಲಿ ನಿರ್ವಹಿಸಬೇಕು ಎಂದು ಆಡಳಿತ ವೈದ್ಯಾಧಿಕಾರಿ ಮಂಜುಳಾ ಅವರಿಗೆ ಶಾಸಕ ಡಾ.ಮಂತರ್ ಗೌಡ ಹೇಳಿದರು.