ಸಾರಾಂಶ
ಗದಗ: ಹಿಂದುಳಿದ ವರ್ಗಗಳ ಆಯೋಗದಿಂದ ರಾಜ್ಯಾದ್ಯಂತ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯದಲ್ಲಿ ಗದಗ ಜಿಲ್ಲೆ ಶೇ. 93ರಷ್ಟು ಸಾಧನೆ ದಾಖಲಿಸಿ ರಾಜ್ಯದಲ್ಲಿ ಅತ್ಯುತ್ತಮ ಸ್ಥಾನ ಗಳಿಸಿದೆ. ಈ ಸಾಧನೆಗೆ ಹಿಂದುಳಿದ ವರ್ಗಗಳ ಆಯೋಗದ ಸದಸ್ಯ ಸಿ.ಎನ್. ಕುಂದಗೋಳ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಂಗಳವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಆಯೋಗ ನಿಗದಿಪಡಿಸಿದ ಅವಧಿಯೊಳಗೆ ಗದಗ ಜಿಲ್ಲೆಯಲ್ಲಿ ಸಮೀಕ್ಷೆ ಕಾರ್ಯ ಅತ್ಯಂತ ಶ್ರದ್ಧೆಯಿಂದ ಹಾಗೂ ಯೋಜಿತವಾಗಿ ನಡೆಯುತ್ತಿದೆ. ಜಿಲ್ಲೆಯಲ್ಲಿ 6 ಸಾವಿರಕ್ಕೂ ಹೆಚ್ಚು ಎನ್‌ಎಸ್‌ಎಸ್ ವಿದ್ಯಾರ್ಥಿಗಳನ್ನು ಸಮೀಕ್ಷಾ ಕಾರ್ಯದಲ್ಲಿ ಬಳಸಿರುವುದು ಅತ್ಯಂತ ಶ್ಲಾಘನೀಯ ಎಂದರು.
ಮನೆಮನೆಗೆ ತೆರಳಿ ಜನರ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸ್ಥಿತಿಯ ಕುರಿತು ಮಾಹಿತಿಯನ್ನು ಸಂಗ್ರಹಿಸಲು ಸಮೀಕ್ಷಾದಾರರು ಆಗಮಿಸುತ್ತಾರೆ. ಅವರಿಗೆ ಸರಿಯಾದ ಮಾಹಿತಿ ನೀಡುವಂತೆ ಮೊದಲೆ ಜಾಗೃತಿ ಮೂಡಿಸಿದ್ದು ಪ್ರಗತಿ ಸಾಧಿಸಲು ಸಹಕಾರಿಯಾಗಿದೆ. ಈ ರೀತಿಯ ಸಂಘಟಿತ ಮತ್ತು ಸಮನ್ವಯಿತ ಪ್ರಯತ್ನದಿಂದಲೇ ಗದಗ ಜಿಲ್ಲೆ ರಾಜ್ಯದ ಶ್ರೇಷ್ಠ ಜಿಲ್ಲೆಗಳ ಪೈಕಿ ಒಂದಾಗಿದೆ ಎಂದರು.ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಮಾತನಾಡಿ, ಸಮೀಕ್ಷೆಯ ಯಶಸ್ಸಿಗೆ ಎಲ್ಲ ಇಲಾಖೆಗಳ ಸಂಯೋಜನೆ ಮುಖ್ಯ ಪಾತ್ರ ವಹಿಸಿದೆ. ನಗರಸಭೆಯ ವಾಹನಗಳಲ್ಲಿ ಜಿಂಗಲ್‌ಗಳ ಮೂಲಕ ಜನಜಾಗೃತಿ ಮೂಡಿಸಲಾಯಿತು. ಎನ್‌ಎಸ್‌ಎಸ್ ವಿದ್ಯಾರ್ಥಿಗಳು ಹಾಗೂ ಆಶಾ ಕಾರ್ಯಕರ್ತೆಯರು ಸಮೀಕ್ಷಾ ಕಾರ್ಯಕ್ಕೆ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ ಎಂದರು.
ಸಭೆಯಲ್ಲಿ ಸಮೀಕ್ಷೆಯ ಜಿಲ್ಲಾ ನೊಡಲ್ ಅಧಿಕಾರಿ ಸೈದಾ ಬಳ್ಳಾರಿ, ಎಡಿಸಿ ಡಾ. ದುರಗೇಶ್ ಕೆ.ಆರ್, ಸಹಾಯಕ ಆಯುಕ್ತ ಗಂಗಪ್ಪ ಎಂ., ಜಿಪಂ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ, ಬಿಸಿಎಂ ಜಿಲ್ಲಾ ಅಧಿಕಾರಿ ಎಂ.ಎಂ. ತುಂಬರಮಟ್ಟಿ ಆರ್.ಎಸ್. ಬುರಡಿ, ಅಮಿತ್ ಬಿದರಿ, ಶ್ರೀಶೈಲ ಸೋಮನಕಟ್ಟಿ, ಕೆ. ಮಲ್ಲಯ್ಯ, ಡಾ. ನಂದಾ ಹಣಬರಟ್ಟಿ, ಡಾ. ಬಸವರಾಜ ಬಳ್ಳಾರಿ, ರಾಜಾರಾಮ ಪವಾರ್, ವಸಂತ ಮಡ್ಲೂರ, ತಹಸೀಲ್ದಾರರು, ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು, ಬಿಇಒಗಳು ಮತ್ತು ಇತರ ಅಧಿಕಾರಿಗಳು ಉಪಸ್ಥಿತರಿದ್ದರು.