ಶಾಲೆ ವಾರ್ಷಿಕೋತ್ಸವದಲ್ಲಿ ಮತದಾನ ಜಾಗೃತಿಗೆ ಮೆಚ್ಚುಗೆ

| Published : Apr 08 2024, 01:04 AM IST

ಸಾರಾಂಶ

ಶಾಲಾ ವಾರ್ಷಿಕೋತ್ಸವದಲ್ಲಿ ಮತದಾನದ ಜಾಗೃತಿ ಹಮ್ಮಿ ಕೊಂಡಿರುವುದು ವಿಭಿನ್ನ ಕಾರ್ಯಕ್ರಮವಾಗಿದೆ ಎಂದು ಪೊಲೀಸ್ ಠಾಣಾಧಿಕಾರಿ ನಿರಂಜನಗೌಡ ತಿಳಿಸಿದರು.

ಜೀವನ್ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆ ವಾರ್ಷಿಕೋತ್ಸವದದಲ್ಲಿ ಮತದಾನ ಜಾಗೃತಿಯಲ್ಲಿ ನಿರಂಜನಗೌಡ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಶಾಲಾ ವಾರ್ಷಿಕೋತ್ಸವದಲ್ಲಿ ಮತದಾನದ ಜಾಗೃತಿ ಹಮ್ಮಿ ಕೊಂಡಿರುವುದು ವಿಭಿನ್ನ ಕಾರ್ಯಕ್ರಮವಾಗಿದೆ ಎಂದು ಪೊಲೀಸ್ ಠಾಣಾಧಿಕಾರಿ ನಿರಂಜನಗೌಡ ತಿಳಿಸಿದರು.

ಶನಿವಾರ ಸಂಜೆ ಪಟ್ಟಣದ ಜೀವನ್ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕೋತ್ಸವದ ಅಂಗವಾಗಿ ವಿವಿಧ ಸರ್ಕಾರಿ ಇಲಾಖೆಗಳ ಮಾಹಿತಿ ಹಾಗೂ ಮತದಾನ ಜಾಗೃತಿ ಮೂಡಿಸುವ ಸಲುವಾಗಿ ಕಲಾವೈಭವ 2.0 ಕಾರ್ಯ ಕ್ರಮದಡಿ ಅಂಬೇಡ್ಕರ್ ವೃತ್ತದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದರು. ಸಾಮಾನ್ಯವಾಗಿ ಶಾಲಾ ವಾರ್ಷಿಕೋತ್ಸವ ಎಂದರೆ ಶಾಲಾ ಆವರಣದಲ್ಲಿ ರಂಗ ಮಂದಿರದಲ್ಲಿ ಮಾತ್ರ ನಡೆಯುತ್ತದೆ. ಆದರೆ, ಜೀವನ್ ಜ್ಯೋತಿ ಆಂಗ್ಲ ಮಾದ್ಯಮ ಪ್ರೌಢ ಶಾಲೆಯವರು ವಿಶೇಷವಾಗಿ ಮಕ್ಕಳಿಗೆ ವಿವಿಧ ಇಲಾಖೆ ಪರಿಚಯಿಸುವ ಸ್ಥಬ್ದ ಚಿತ್ರದ ಮೆರವಣಿಗೆ ಸಕಾಲಿಕವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇದಕ್ಕೂ ಮೊದಲು ಜೀವನ್‌ ಜ್ಯೋತಿ ಸಂಸ್ಥೆಯ ಫಾ. ಬೆನ್ನಿ ಮ್ಯಾಥ್ಯೂ ಕಲಾ ವೈಭವ 2.0 ಕಾರ್ಯಕ್ರಮದ ಮೆರವಣಿಗೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಜೀವನ್‌ ಜ್ಯೋತಿ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಕೆ.ಜೆ.ಎಲ್ದೋ, ಪ್ರಾಂಶುಪಾಲ ಪೀಟರ್ ಬಾಬು, ಜೀವನ್ ಜ್ಯೋತಿ ಶಾಲೆ ಪೋಷಕ, ಶಿಕ್ಷಕರ ಸಂಘದ ಅಧ್ಯಕ್ಷ ಸುನೀಲ್ ಕುಮಾರ್‌,ಸದಸ್ಯೆ ಪಲ್ಲವಿ ಪ್ರವೀಣ್, ತಾ.ಆರೋಗ್ಯ ಶಿಕ್ಷಣಾಧಿಕಾರಿ ಪಿ.ಪಿ.ಬೇಬಿ,ಎ.ಎಸ್.ಐ.ಮಂಜುನಾಥ್‌, ಅರಣ್ಯ ಇಲಾಖೆಯ ಗೌಸ್‌ ಮಹಿಯುದ್ದೀನ್‌ ಮತ್ತಿತರರು ಇದ್ದರು.

ಕಲಾವೈಭವ ಕಾರ್ಯಕ್ರಮದ ಅಂಗವಾಗಿ ಬಸ್ತಿಮಠ ಸಮೀಪವಿರುವ ಜೀವನ್ ಜ್ಯೋತಿ ಆಂಗ್ಲಮಾಧ್ಯಮ ಶಾಲೆಯಿಂದ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದವರೆಗೆ ಆಕರ್ಷಕ ಮೆರವಣಿಗೆ ನಡೆಯಿತು.ಶಿಕ್ಷಣ ಇಲಾಖೆಯಿಂದ ಸ್ತಬ್ಧ ಚಿತ್ರ ವೀಣೆ ನುಡಿಸುವ ವೀಣಾ ಶಾರದೆ ,ಅರಣ್ಯ ಇಲಾಖೆಯಿಂದ ಪರಿಸರ ಉಳಿಸುವ ಚಿತ್ರ, ಆರೋಗ್ಯ ಇಲಾಖೆಯಿಂದ ವಿವಿಧ ಸಾಂಕ್ರಾಮಿಕ ರೋಗಗಳ ಮಾಹಿತಿ, ಚುನಾವಣಾ ಆಯೋಗದ ರಥದಲ್ಲಿ ಮತದಾನದ ಮಹತ್ವದ ಸ್ತಬ್ಧ ಚಿತ್ರ,ಪೊಲೀಸ್ ಇಲಾಖೆಯ ಸ್ಥಬ್ದ ಚಿತ್ರದಲ್ಲಿ ರಸ್ತೆ ನಿಯಮ ಪಾಲನೆ,112 ಸೇವೆ ಬಗ್ಗೆ ಸ್ಥಬ್ದ ಚಿತ್ರಗಳು ಸಾರ್ವಜನಿಕರ ಗಮನ ಸೆಳೆಯಿತು.

ಮೆರವಣಿಗೆಯಲ್ಲಿ ವೈದ್ಯರು,ಶುಶ್ರೂಷಿಕಿಯರ ಸಮವಸ್ತ್ರ ಧರಿಸಿದ ವಿದ್ಯಾರ್ಥಿಗಳು, ಆರೋಗ್ಯ ಇಲಾಖೆ ಆಶಾ ಕಾರ್ಯಕರ್ತರು ಹೆಜ್ಜೆಹಾಕಿದರು. ಶಾಲಾ ವಿದ್ಯಾರ್ಥಿಗಳು ತಟ್ಟಿಗೊಂಬೆ ವೇಷ ಧರಿಸಿ ರಸ್ತೆ ಉದ್ದಕ್ಕೂ ಸಾಗಿದ ಮೆರವಣಿಗೆ ನೋಡುಗರ ಮನಸೂರೆಗೊಂಡವು. ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಶಾಲಾ ಮಕ್ಕಳು ಆಕರ್ಷಕ ಭರತನಾಟ್ಯ ಪ್ರದರ್ಶಿಸಿದರು. ಚಂಡಮದ್ದಳೆ ಬಡಿತಕ್ಕೆ ಮಕ್ಕಳು ಕುಣಿದು ಕುಪ್ಪಳಿಸಿದರು.