ಕನ್ನಡಮಯ ಸಾರಿಗೆ ಬಸ್ಸಿಗೆ ಸಾರ್ವಜನಿಕರಿಂದ ಮೆಚ್ಚುಗೆ

| Published : Nov 16 2024, 12:31 AM IST

ಸಾರಾಂಶ

ಬಸ್ ಚಾಲಕ ಮತ್ತು ನಿರ್ವಾಹಕರು ಸ್ವಂತ ಹಣ ಬಳಸಿ ಸಾರಿಗೆ ಬಸ್ ಅನ್ನು ಸಂಪೂರ್ಣ ಕನ್ನಡ ಧ್ವಜದಿಂದ ಅಲಂಕರಿಸಿದ್ದು ಬಸ್ ಜನರ ಮನ ಸೆಳೆಯುತ್ತಿದೆ. ಬಸ್ ಸುತ್ತ ಹಾರಾಡುತ್ತಿರುವ ಕನ್ನಡ ಧ್ವಜಗಳು ಗಮನ ಸೆಳೆಯುತ್ತಿವೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಕನ್ನಡ ಧ್ವಜ, ಕವಿಗಳ ಭಾವಚಿತ್ರ ಹಾಗೂ ಬಾವುಟಗಳಿಂದ ಸಿಂಗಾರಗೊಂಡ ಕೆ.ಆರ್.ಪೇಟೆ- ಬೆಂಗಳೂರು- ಶ್ರೀನಗರಕ್ಕೆ ಸಂಚರಿಸುವ ರಾಜ್ಯ ರಸ್ತೆ ಸಾರಿಗೆ ಬಸ್ ಅನ್ನು ಸಾರ್ವಜನಿಕರು ಹಾಗೂ ಕನ್ನಡ ಪ್ರೇಮಿಗಳು ಸ್ವಾಗತಿಸಿದರು.

ಬೆಂಗಳೂರು ಮಹಾನಗರದ ಶ್ರೀನಗರದಿಂದ ನಾಗಮಂಗಲ, ಸಂತೇಬಾಚಹಳ್ಳಿ ಮಾರ್ಗವಾಗಿ ಕೆ.ಆರ್.ಪೇಟೆಗೆ ಸಂಚರಿಸುವ ರಸ್ತೆ ಸಾರಿಗೆ ಸಂಸ್ಥೆ ಬಸ್ಸಿನ ಚಾಲಕ ವೀರೇಶ್ ಹಾಗೂ ನಿರ್ವಾಹಕ ಸಿದ್ದರಾಜು ಅವರ ಕನ್ನಡ ಅಭಿಮಾನಕ್ಕೆ ಪ್ರಯಾಣಿಕರು ಮತ್ತು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು.

ಬಸ್ ಚಾಲಕ ಮತ್ತು ನಿರ್ವಾಹಕರು ಸ್ವಂತ ಹಣ ಬಳಸಿ ಸಾರಿಗೆ ಬಸ್ ಅನ್ನು ಸಂಪೂರ್ಣ ಕನ್ನಡ ಧ್ವಜದಿಂದ ಅಲಂಕರಿಸಿದ್ದು ಬಸ್ ಜನರ ಮನ ಸೆಳೆಯುತ್ತಿದೆ. ಬಸ್ ಸುತ್ತ ಹಾರಾಡುತ್ತಿರುವ ಕನ್ನಡ ಧ್ವಜಗಳು ಗಮನ ಸೆಳೆಯುತ್ತಿವೆ.

ಕನ್ನಡದ ಸುಪ್ರಸಿದ್ಧ ಕವಿಗಳು ಹಾಗೂ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರಗಳನ್ನು ಬಸ್ಸಿಗೆ ಅಳವಡಿಸಿ ಅಲಂಕರಿಸಿದ್ದು, ಕನ್ನಡ ಗೀತೆಗಳನ್ನು ಬಸ್ಸಿನ ಪ್ರಯಾಣಿಕರಿಗೆ ಧ್ವನಿವರ್ಧಕದ ಮೂಲಕ ಕೇಳಿಸಿ ವಿಶೇಷವಾಗಿ ಕನ್ನಡ ರಾಜ್ಯೋತ್ಸವ ಆಚರಿಸಿ ತಮ್ಮ ಕನ್ನಡಾಭಿಮಾನವನ್ನು ಪ್ರದರ್ಶನ ಮಾಡಿದ್ದಾರೆ.

ನಾವು ಕನ್ನಡಿಗರು. ನಮ್ಮ ನೆಲದಲ್ಲಿ ನಾವೇ ಕನ್ನಡವನ್ನು ಮರೆತರೆ ಹೇಗೆ? ಎಂದು ಪ್ರಶ್ನಿಸುವ ಚಾಲಕ ವಿರೇಶ್ ಮತ್ತು ನಿರ್ವಾಹಕ ಸಿದ್ದರಾಜು ನಮಗೆ ನಮ್ಮ ಭಾಷೆಯೇ ಸ್ಪೂರ್ತಿ. ನಮ್ಮ ನೆಲದಲ್ಲಿ ನಾವು ಇತರರಿಗೆ ಕನ್ನಡ ಕಲಿಸುವ ಕೆಲಸ ಮಾಡಬೇಕು. ಕನ್ನಡದ ಮಕ್ಕಳಿಗೆ ಕನ್ನಡದ ಬಗ್ಗೆ ಅಭಿಮಾನ ಮೂಡಿಸಬೇಕು. ಇದಕ್ಕಾಗಿ ನಾವು ನಮ್ಮ ಬಸ್ಸನ್ನೇ ಕನ್ನಡ ಮಯವನ್ನಾಗಿಸಿಕೊಂಡಿದ್ದೇವೆ ಎಂದು ತಿಳಿಸಿದರು.