ವಿಜಯಪುರ ಜಿಲ್ಲೆಯಲ್ಲಿ ಆಡಳಿತ ಪಕ್ಷದ ಆರು ಶಾಸಕರಿದ್ದು, ಜಿಲ್ಲಾ ಉಸ್ತುವಾರಿ ಸಚಿವರಿಗೂ ಜಿಲ್ಲೆಯ ಬರ ಪರಿಸ್ಥಿತಿಯ ಬಗ್ಗೆ ಸರ್ಕಾರದ ಗಮನ ಸೆಳೆಯುವ ಜವಾಬ್ದಾರಿ ಇದೆ. ಒಂದೇ ಪಕ್ಷದ ಸರ್ಕಾರ ಇರುವಾಗ ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಜಿಲ್ಲೆಯ ಬರ ಪರಿಸ್ಥಿತಿ ಮನವರಿಕೆ ಮಾಡಿಕೊಡಬೇಕು. ಆದರೆ ಇದುವರೆಗೆ ಪರಿಣಾಮಕಾರಿ ಪ್ರಯತ್ನ ನಡೆದಿಲ್ಲ ಎಂದು ಮಾಜಿ ಶಾಸಕ ಎ.ಎಸ್‌.ಪಾಟೀಲ ನಡಹಳ್ಳಿ ಆರೋಪಿಸಿದರು.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ವಿಜಯಪುರ ಜಿಲ್ಲೆಯಲ್ಲಿ ಆಡಳಿತ ಪಕ್ಷದ ಆರು ಶಾಸಕರಿದ್ದು, ಜಿಲ್ಲಾ ಉಸ್ತುವಾರಿ ಸಚಿವರಿಗೂ ಜಿಲ್ಲೆಯ ಬರ ಪರಿಸ್ಥಿತಿಯ ಬಗ್ಗೆ ಸರ್ಕಾರದ ಗಮನ ಸೆಳೆಯುವ ಜವಾಬ್ದಾರಿ ಇದೆ. ಒಂದೇ ಪಕ್ಷದ ಸರ್ಕಾರ ಇರುವಾಗ ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಜಿಲ್ಲೆಯ ಬರ ಪರಿಸ್ಥಿತಿ ಮನವರಿಕೆ ಮಾಡಿಕೊಡಬೇಕು. ಆದರೆ ಇದುವರೆಗೆ ಪರಿಣಾಮಕಾರಿ ಪ್ರಯತ್ನ ನಡೆದಿಲ್ಲ ಎಂದು ಮಾಜಿ ಶಾಸಕ ಎ.ಎಸ್‌.ಪಾಟೀಲ ನಡಹಳ್ಳಿ ಆರೋಪಿಸಿದರು.

ಮುದ್ದೇಬಿಹಾಳದಲ್ಲಿ ಬರ ಘೋಷಣೆಗೆ ಆಗ್ರಹಿಸಿ ತಹಸೀಲ್ದಾರ್ ಕಚೇರಿ ಎದುರು ಸೋಮವಾರದಿಂದ ಆರಂಭಗೊಂಡಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಸೂಚನೆ ನೀಡಿದ್ದರೂ ಉಸ್ತುವಾರಿ ಸಚಿವರು ಕ್ಷೇತ್ರಕ್ಕೆ ಭೇಟಿ ನೀಡಿಲ್ಲ. ಶಾಸಕರು ಅಧಿಕಾರಿಗಳನ್ನು ಕರೆದುಕೊಂಡು ಗ್ರಾಮಗಳಿಗೆ ತೆರಳಿ ಬೆಳೆಹಾನಿ ಹಾಗೂ ಮಳೆಕೊರತೆಯ ವಾಸ್ತವ ಪರಿಸ್ಥಿತಿಯ ಸಮೀಕ್ಷೆ ನಡೆಸಬೇಕಿತ್ತು. ವಾಸ್ತವ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಿದ್ದರೆ ರೈತರು ಹೋರಾಟಕ್ಕೆ ಇಳಿಯುವ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಹೇಳಿದರು.

ಹೊಲದಲ್ಲಿ ಬೆಳೆ ಒಣಗಿದೆ, ಫೋಟೋಶೂಟ್ ಬೇಡ:

ಕೃಷಿ ಅಧಿಕಾರಿಗಳಾದ ಶರಣಗೌಡ, ಸುರೇಶ ಭಾವಿಕಟ್ಟಿ ಹಾಗೂ ಮುತ್ತಣ್ಣ ಹಳ್ಳೂರ ಅವರು ಹೊಲದಲ್ಲಿ ಸಜ್ಜೆ ಬೆಳೆ ಪರಿಶೀಲನೆ ನಡೆಸಿದಾಗ ಬೆಳೆ ಒಣಗಿರುವುದು ಕಂಡುಬಂದಿದೆ. ರೈತರು ಸಜ್ಜೆ ಬರುವುದಿಲ್ಲ ಎಂದು ಹೇಳುತ್ತಿದ್ದರೂ, ಮಳೆ ಬಂದರೆ ಚಿಗುರುತ್ತದೆ ಎಂಬ ರೀತಿಯಲ್ಲಿ ಹೇಳಲಾಗುತ್ತಿದೆ. ರೈತರ ಹೊಲಗಳ ವಾಸ್ತವ ಪರಿಸ್ಥಿತಿ ಅರಿಯದೆ ಫೋಟೋಶೂಟ್ ಮಾಡಿಸುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ ಎಂದು ಟೀಕಿಸಿದರು.

ರಾಜ್ಯದಲ್ಲಿ 190 ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಲಾಗಿದ್ದು, 79 ಲಕ್ಷ ರೈತರಿಗೆ ತಲಾ ₹25 ಸಾವಿರ ಪರಿಹಾರ ನೀಡಬೇಕು. ರೈತರ ಸಂಕಷ್ಟಕ್ಕೆ ಸರ್ಕಾರ ತಕ್ಷಣ ಸ್ಪಂದಿಸಬೇಕು. ಇಂಡಿ, ದೇವರಹಿಪ್ಪರಗಿ ಹಾಗೂ ತಾಳಿಕೋಟಿ ಭಾಗಗಳಲ್ಲಿ ರೈತ ಸಂಘಟನೆಗಳ ನೇತೃತ್ವದಲ್ಲಿ ಹೋರಾಟ ನಡೆಯುತ್ತಿದೆ. ಅದೇ ರೀತಿಯಲ್ಲಿ ಮುದ್ದೇಬಿಹಾಳ ಕ್ಷೇತ್ರದ ರೈತರೂ ಪಕ್ಷಾತೀತವಾಗಿ ಒಂದಾಗಿ ಹೋರಾಟಕ್ಕೆ ಇಳಿದು ಸರ್ಕಾರವನ್ನು ಎಚ್ಚರಿಸಬೇಕು ಎಂದು ಕರೆ ನೀಡಿದರು.

ಸಮೀಕ್ಷೆ ಮಾಡಲು ಬಿಡಲಿಲ್ಲ; ತಪ್ಪು ಯಾರದ್ದು?:

ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಕರೆದುಕೊಂಡು ಬಂದು ವಾಸ್ತವ ಪರಿಸ್ಥಿತಿಯ ವರದಿ ತಯಾರಿಸಲು ಮುಂದಾದಾಗ ಅವಕಾಶ ನೀಡಲಿಲ್ಲ ಎಂಬ ಆರೋಪಗಳಿವೆ. ಸಮೀಕ್ಷೆ ಮಾಡಲು ಬಿಡಲಿಲ್ಲ ಎಂದಾದರೆ ತಪ್ಪು ಯಾರದ್ದು? ಏಕೆ ಸಮೀಕ್ಷೆ ಬೇಡವೆಂದಿರಿ? ಇದರ ಹಿಂದಿನ ಉದ್ದೇಶವೇನು? ಎಂದು ನಡಹಳ್ಳಿ ಪ್ರಶ್ನಿಸಿದರು.

ಧರಣಿಯಲ್ಲಿ ಮುಖಂಡರಾದ ಹೇಮರಡ್ಡಿ ಮೇಟಿ, ಮಲಕೇಂದ್ರಗೌಡ ಪಾಟೀಲ, ಗುರುನಾಥಗೌಡ ಬಿರಾದಾರ, ಸೋಮನಗೌಡ ಬಿರಾದಾರ, ವೆಂಕನಗೌಡ ಪಾಟೀಲ, ಜಗದೀಶ ಪಂಪಣ್ಣವರ, ಬಸವರಾಜ ಚಿತ್ತರಗಿ, ಲಕ್ಷ್ಮಣ ಬಿಜ್ಜೂರ, ಸಂಗಮೇಶ ಹತ್ತಿ, ಶಂಕರಗೌಡ ಶಿವಣಗಿ ಸೇರಿದಂತೆ ನೂರಾರು ರೈತರು ಪಾಲ್ಗೊಂಡಿದ್ದರು.

ಜಿಲ್ಲೆಯನ್ನು ಬರಪೀಡಿತ ಎಂದು ಘೋಷಿಸಲಿ:

ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರವನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕು. ಸರ್ಕಾರ ಕೂಡಲೇ ಈ ಕುರಿತು ತೀರ್ಮಾನ ಕೈಗೊಂಡು ಸಂಕಷ್ಟದಲ್ಲಿರುವ ರೈತರಿಗೆ ಪರಿಹಾರ ನೀಡಬೇಕು. ಇಲ್ಲವಾದಲ್ಲಿ ರೈತರನ್ನು ಪಕ್ಷಾತೀತವಾಗಿ ಒಗ್ಗೂಡಿಸಿ ಬೀದಿಗಿಳಿದು ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್. ಪಾಟೀಲ (ನಡಹಳ್ಳಿ) ಎಚ್ಚರಿಸಿದರು.

ಸರ್ಕಾರಕ್ಕೆ ಮಗ್ಗುಲ ಮುಳ್ಳಾಗಿ ಚುಚ್ಚುವ ಕೆಲಸ ಮಾಡಬೇಕು. ರೈತರು ಸ್ವಯಂಪ್ರೇರಣೆಯಿಂದ ಧರಣಿ ಸತ್ಯಾಗ್ರಹಕ್ಕೆ ಬೆಂಬಲ ನೀಡಿ ಸರ್ಕಾರದ ಗಮನ ಸೆಳೆಯಬೇಕು ಎಂದು ಕರೆ ನೀಡಿದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ನೇತೃತ್ವದಲ್ಲಿ ಬರದ ವಿಚಾರವಾಗಿ ಪಾದಯಾತ್ರೆ ಆರಂಭವಾಗಿದೆ. ಸರ್ಕಾರ ರೈತರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಮುದ್ದೇಬಿಹಾಳ ಸೇರಿದಂತೆ ವಿಜಯಪುರ ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕು. ಇಲ್ಲವಾದಲ್ಲಿ ರೈತರ ಹೋರಾಟ ಮತ್ತಷ್ಟು ತೀವ್ರಗೊಳ್ಳಲಿದೆ ಎಂದು ಹೇಳಿದರು.