ನಮ್ಮ ರಾಜ್ಯದ ಬೆನ್ನೆಲುಬಾಗಿರುವ ರೈತರಿಗೆ ಮಾರುಕಟ್ಟೆ ಹಂತದಲ್ಲಿ ಯಾವುದೇ ರೀತಿಯ ತೊಂದರೆಯಾಗದಂತೆ ಸುಸಜ್ಜಿತ ವ್ಯವಸ್ಥೆ ನಿರ್ಮಿಸುವುದು ನಮ್ಮ ಸರ್ಕಾರದ ಆದ್ಯತೆಯಾಗಿದೆ ಎಂದು ಮಾಜಿ ಸಚಿವ ಹಾಗೂ ಶಾಸಕ ಶಿವಾನಂದ ಪಾಟೀಲ ಹೇಳಿದರು

ಕನ್ನಡಪ್ರಭ ವಾರ್ತೆ ಕೊಲ್ಹಾರ

ನಮ್ಮ ರಾಜ್ಯದ ಬೆನ್ನೆಲುಬಾಗಿರುವ ರೈತರಿಗೆ ಮಾರುಕಟ್ಟೆ ಹಂತದಲ್ಲಿ ಯಾವುದೇ ರೀತಿಯ ತೊಂದರೆಯಾಗದಂತೆ ಸುಸಜ್ಜಿತ ವ್ಯವಸ್ಥೆ ನಿರ್ಮಿಸುವುದು ನಮ್ಮ ಸರ್ಕಾರದ ಆದ್ಯತೆಯಾಗಿದೆ ಎಂದು ಮಾಜಿ ಸಚಿವ ಹಾಗೂ ಶಾಸಕ ಶಿವಾನಂದ ಪಾಟೀಲ ಹೇಳಿದರು.

ಶನಿವಾರ ಪಟ್ಟಣದಲ್ಲಿ ಹಮ್ಮಿಕೊಂಡ ತಾಲೂಕಾ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮಕ್ಕೆ ಆಗಮಿಸಿ ನಂತರ ಪಟ್ಟಣದ ದಿಗಂಬರೇಶ್ವರ ಮಠದ ಹತ್ತಿರ ನೂತನವಾಗಿ ಅಂದಾಜು₹8 ಕೋಟಿ ವೆಚ್ಚದಲ್ಲಿ 7 ಎಕರೆ ಜಾಗದಲ್ಲಿ ನಿರ್ಮಾಣವಾಗುತ್ತಿರುವ ನೂತನ ಬೃಹತ್ ಸಂತೆ ಮಾರುಕಟ್ಟೆ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲನೆ ನಡೆಸಿ ಪ್ರಗತಿಯಲ್ಲಿರುವ ಕಾಮಗಾರಿಗಳ ಕುರಿತು ಅಧಿಕಾರಿಗಳಿಂದ ಸಮಗ್ರ ಮಾಹಿತಿ ಪಡೆದು, ನಿಗದಿತ ಸಮಯದೊಳಗೆ ಗುಣಮಟ್ಟದೊಂದಿಗೆ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಿದರು.

ಈ ಸಂದರ್ಭದಲ್ಲಿ ಜನಪ್ರತಿನಿಧಿಗಳು, ಇಲಾಖೆಯ ಉನ್ನತಾಧಿಕಾರಿಗಳು ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.

ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಗೆ ಭೇಟಿ: ಪಟ್ಟಣದ ಹೊರವಲಯದಲ್ಲಿರುವ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಗೆ ಆಕಸ್ಮಿಕವಾಗಿ ಭೇಟಿ ನೀಡಿ ಶಿಕ್ಷಕರ ಕಾರ್ಯ ವೈಖರಿಯನ್ನು ಪರಿಶೀಲಿಸಿದರು. ಶಾಲೆಗೆ ಗೈರಿದ್ದ ಶಿಕ್ಷಕರ ಮಾಹಿತಿ ಪಡೆದು ತರಾಟೆಗೆ ತೆಗೆದುಕೊಂಡರು. ಮಕ್ಕಳೊಂದಿಗೆ ಸಂವಾದ ನಡೆಸಿ ಮಕ್ಕಳ ಸಮಸ್ಯೆಗಳನ್ನ ಹಾಗೂ ಕುಂದುಕೊರತೆಗಳನ್ನು ಆಲಿಸಿ ಪರಿಹರಿಸಲು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದರು. ಮತ್ತೊಮ್ಮೆ ಭೇಟಿ ನೀಡಿದಾಗ ಯಾವುದೇ ರೀತಿ ಸಮಸ್ಯೆಗಳು ಇರಬಾರದು ಎಂದು ಎಚ್ಚರಿಕೆ ನೀಡಿದರು.

ಈ ವೇಳೆ ದಿಗಂಬರೇಶ್ವರ ಮಠದ ಪೀಠಾಧಿಪತಿ ಯೋಗಿ ಕಲ್ಲಿನಾಥ ದೇವರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್ ಬಿ ಪಕಾಲಿ, ಪ ಪಂ ಅಧ್ಯಕ್ಷ ಚನಮಲ್ಲಪ್ಪ ಗಿಡ್ಡಪ್ಪಗೋಳ , ಮಾಜಿ ಜಿ ಪಂ ಸದಸ್ಯ ಕಲ್ಲು ದೇಸಾಯಿ, ಮುಖಂಡರಾದ ತಾನಾಜಿ ನಾಗರಾಳ, ಹನಿಪ್ ಮಕಾನದಾರ , ಪ ಪಂ ಸದಸ್ಯರು ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರು ಸೇರಿದಂತೆ ಅನೇಕರು ಇದ್ದರು.