ಸಾರಾಂಶ
ಕನ್ನಡಪ್ರಭ ವಾರ್ತೆ ಚನ್ನಪಟ್ಟಣ
ತಾಲೂಕಿನ ಕೆರೆಗಳು ಒತ್ತುವರಿ, ಸೂಕ್ತ ನಿರ್ವಹಣೆ ಇಲ್ಲದೇ ಕಲುಷಿತಗೊಳ್ಳುತ್ತಿರುವ ಬಗ್ಗೆ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ರಾಜ್ಯದ ಉಪ ಲೋಕಾಯುಕ್ತ ನ್ಯಾ. ಕೆ.ಎನ್. ಫಣೀಂದ್ರ ತಾಲೂಕಿಗೆ ಭೇಟಿ ನೀಡಿ ವಿವಿಧ ಕೆರೆಗಳನ್ನು ಪರಿಶೀಲನೆ ನಡೆಸಿದರು.ತಾಲೂಕಿನ ಕೂಡ್ಲೂರು ಕೆರೆ, ಹೊಡಿಕೆ ಹೊಸಹಳ್ಳಿ, ಶೆಟ್ಟಿಹಳ್ಳಿ, ರಾಮಮ್ಮನ ಕೆರೆ ಸೇರಿದಂತೆ ವಿವಿಧ ಕೆರೆಗಳಿಗೆ ಅಧಿಕಾರಿಗಳ ಜೊತೆ ಭೇಟಿ ನೀಡಿ ಪರಿಶೀಲಿಸಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ರಾಮನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಭೆಯಲ್ಲಿ ಚನ್ನಪಟ್ಟಣ ತಾಲೂಕಿನ ಕೆರೆಗಳ ದುಸ್ಥಿತಿಯ ಬಗ್ಗೆ ಅಹವಾಲುಗಳು ಸಲ್ಲಿಕೆಯಾಗಿದ್ದವು. ಕೆಲವು ದಿನಪತ್ರಿಕೆಗಳಲ್ಲಿ ಸಹ ಈ ಕುರಿತು ವರದಿಗಳು ಪ್ರಕಟವಾಗಿದ್ದವು. ಕೆಲವೊಂದು ಕೆರೆಗಳಲ್ಲಿನ ಮೀನುಗಳು ಮರಣಹೊಂದಿದ ಕುರಿತು ದೂರುಗಳು ಬಂದಿದ್ದವು. ಅವುಗಳ ಆಧಾರದ ಮೇಲೆ ಸ್ವಯಂಪ್ರೇರಿತ ದೂರುಗಳನ್ನು ದಾಖಲಿಸಿಕೊಳ್ಳಲಾಗಿತ್ತು. ಅವುಗಳನ್ನು ಪರಿಶೀಲಿಸಿ ಅಗತ್ಯ ಕ್ರಮವಹಿಸಲು ಈ ಭೇಟಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.ರಾಜ್ಯಾದ್ಯಂತ ಕೆರೆ ಒತ್ತುವರಿಗೆ ಸಂಬಂಧಿಸಿದಂತೆ ಸುಮಾರು ೫೦೦ಕ್ಕೂ ಹೆಚ್ಚು ಸುಮೋಟೋ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಪ್ರಕರಣ ದಾಖಲಿಸಿಕೊಂಡ ನಂತರ ಅದರ ಸಮಗ್ರ ತನಿಖೆ ನಡೆಸಲಾಗುವುದು. ಪ್ರತಿತಿಂಗಳು ಆ ಪ್ರಕರಣದ ಕುರಿತು ಪರಿಶೀಲನೆ ನಡೆಸಿ, ಸಮಸ್ಯೆಯನ್ನು ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದರು.
ಈಗಾಗಲೇ ರಾಜ್ಯಾದ್ಯಂತ ಪ್ರವಾಸ ಮಾಡಿ, ಜಿಲ್ಲಾಮಟ್ಟದಲ್ಲೂ ಭೇಟಿಕೊಟ್ಟು ಸಮಸ್ಯೆ ಆಲಿಸಿ ಪರಿಹರಿಸುವ ಕೆಲಸ ಮಾಡಲಾಗಿದೆ. ಅದರ ಮುಂದುವರಿದ ಭಾಗವಾಗಿ ತಾಲೂಕುಗಳಿಗೆ ಭೇಟಿಕೊಟ್ಟು ಸಾರ್ವಜನಿಕರ ಸಮಸ್ಯೆ ಆಲಿಸುತ್ತಿದ್ದೇವೆ. ಕೆರೆಗಳ ಅಭಿವೃದ್ಧಿಗೆ ಕ್ರಮ ಸೂಕ್ತಕ್ರಮ ಕೈಗೊಳ್ಳಲಾಗುವುದು ಎಂದರು.ತಾಲೂಕಿನಲ್ಲಿ ಆರೇಳು ಕೆರೆಗಳು ಒತ್ತುವರಿಯಾಗಿರುವುದರ ಕುರಿತು ದೂರು ಬಂದಿದೆ. ಮೊದಲು ಕೆರೆಗಳ ಅಳತೆ ಮಾಡಿ, ಬಳಿಕ ಎಲ್ಲೆಲ್ಲಿ ಒತ್ತುವರಿಯಾಗಿದೆ ಎಂಬುದನ್ನು ಪತ್ತೆ ಹಚ್ಚಲು ಸೂಚಿಸಲಾಗಿದೆ. ನಂತರ ಕೆರೆಗಳನ್ನು ಸ್ವಚ್ಛಗೊಳಿಸಿ ಅಭಿವೃದ್ಧಿಪಡಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಇದಕ್ಕೆ ಬೇಕಾದ ಸಹಕಾರ ನೀಡಲು ಸರಕಾರಕ್ಕೂ ಸೂಚನೆ ನೀಡುತ್ತೇನೆ. ಅಧಿಕಾರಿಗಳು ಸಬೂಬು ಹೇಳದೆ ಕೆಲಸ ಮಾಡಬೇಕು ಎಂದರು.
ತಾಲೂಕಿನ ಕೂಡ್ಲೂರು ಕೆರೆ ಸೂಕ್ತ ರೀತಿಯಲ್ಲಿ ನಿರ್ವಹಣೆಯಾಗಿಲ್ಲ, ಮೇಲ್ನೋಟಕ್ಕೆ ಸಾಕಷ್ಟು ಒತ್ತುವರಿಯಾಗಿರುವುದು ಕಂಡು ಬಂದಿದೆ. ಊರಿನಿಂದ ಚರಂಡಿ ನೀರು ಕೆರೆಗೆ ಬಿಡುತ್ತಿರುವುದರಿಂದ ಕೆರೆಯ ನೀರು ಕಲುಷಿತವಾಗುತ್ತಿದೆ. ಇದೇ ರೀತಿಯಾದಲ್ಲಿ ಕ್ರಮೇಣ ಈ ಕೆರೆಯ ನೀರು ಯಾವುದಕ್ಕೂ ಉಪಯೋಗಕ್ಕೆ ಬಾರದಂತೆ ತ್ಯಾಜ್ಯದ ನೀರಾಗಲಿದೆ. ಈ ಬಗ್ಗೆ ಪರಿಶೀಲಿಸಲಾಗಿ ಸುಮಾರು ೯೪ ಕೋಟಿ ರು.ಗಳ ಅನುದಾನ ಈಗಾಗಲೇ ಈ ಕೆರೆಗೆ ಮಂಜೂರಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಊರಿನಿಂದ ಬರುವ ಚರಂಡಿ ನೀರು ಇಲ್ಲಿ ಸ್ಥಾಪಿಸಲಾಗುವ ವೆಟ್ ವೆಲ್‌ನಲ್ಲಿ ಶೋಧನೆಯಾಗಿ, ಸಂಸ್ಕರಣೆಯಾಗಿ ಆನಂತರ ಕೆರೆಗೆ ನೀರು ಬಿಟ್ಟಲ್ಲೀ ಶುದ್ಧಿಗೊಂಡ ನೀರು ಕೆರೆಗೆ ಹೋಗುತ್ತದೆ. ಆ ನೀರನ್ನು ಇತರೆ ಉಪಯೋಗಕ್ಕೆ ಬಳಸಬಹುದಾಗಿದೆ ಎಂದರು.ಮೊದಲು ಅಧಿಕಾರಿಗಳು ಕೆರೆಯನ್ನು ಅಳತೆ ಮಾಡಬೇಕು, ಎಲ್ಲೆಲ್ಲಿ ಒತ್ತುವರಿಯಾಗಿದೆ ಅದನ್ನು ಸಂಬಂಧಿಸಿದವರಿಗೆ ನೋಟಿಸ್ ನೀಡಿ ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು. ಕೆರೆಯಲ್ಲಿ ಬಹಳಷ್ಟು ಹೂಳು ತುಂಬಿದೆ, ಗಿಡ ಬಳ್ಳಿಗಳು ಬೆಳೆದು ನಿಂತಿದೆ, ಇದರಿಂದ ಕೆರೆ ಹರಡಲು ಸಾಧ್ಯವಾಗುವುದಿಲ್ಲ. ಇದೆಲ್ಲವನ್ನು ಸ್ವಚ್ಛ ಮಾಡಿ ಕೆರೆಯನ್ನು ಅಭಿವೃದ್ಧಿಪಡಿಸಲು ಜಿಲ್ಲಾಧಿಕಾರಿಯವರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿಕೊಂಡು ಶೀಘ್ರವಾಗಿ ಈ ಸಮಸ್ಯೆಯನ್ನು ಪರಿಹರಿಸುವಂತೆ ಸಂಬಂಧಿಸಿದ ಎಲ್ಲಾ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಸರ್ಕಾರದಿಂದ ಕೆರೆಗಳ ಅಭಿವೃದ್ಧಿಗೆ ಅನುದಾನ ಮಂಜೂರು ಮಾಡಲು ಶಿಫಾರಸ್ಸು ಮಾಡಲಾಗುವುದು. ಕೂಡ್ಲೂರಿನ ಶ್ರೀರಾಮ ದೇವಸ್ಥಾನದ ಅಭಿವೃದ್ಧಿಗಾಗಿ ಹಣ ಮಂಜೂರು ಮಾಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು, ಈವರೆಗೂ ಅನುದಾನ ಮಂಜೂರಾಗಿರುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದೇವಸ್ಥಾನ ಜೀರ್ಣೋದ್ಧಾರ ಮಾಡಲು ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದರು.ನಗರದ ಹೃದಯಭಾಗದಲ್ಲಿರುವ ಶೆಟ್ಟಿಹಳ್ಳಿ ಕೆರೆ ಒತ್ತುವರಿಯಾಗಿರುವ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಶೆಟ್ಟಿಹಳ್ಳಿ ಕೆರೆ ಎಷ್ಟು ವಿಸ್ತೀರ್ಣದಲ್ಲಿ ಇದೆ ಎಂದು ಅಳತೆ ಮಾಡಬೇಕು. ಒತ್ತವರಿಯನ್ನು ತೆರವುಗೊಳಿಸಬೇಕು. ಪ್ರತಿತಿಂಗಳು ಬಂದು ಆ ಪ್ರಕರಣದ ಪ್ರಗತಿ ಕುರಿತು ವರದಿ ನೀಡಬೇಕು. ಇಲ್ಲದಿದಲ್ಲಿ ಸಂಬಂಧಿಸಿದ ಅಧಿಕಾರಿಗಳನ್ನು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್, ಜಿಲ್ಲಾ ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಸ್ನೇಹ, ಉಪವಿಭಾಗಾಧಿಕಾರಿ ಬಿನೋಯ್, ತಹಸೀಲ್ದಾರ್ ಗಿರೀಶ್, ಚನ್ನಪಟ್ಟಣ ತಾಪಂ ಕಾರ್ಯನಿರ್ವಾಹಣಾಧಿಕಾರಿ ಸಂದೀಪ್, ಪೌರಾಯುಕ್ತ ಮಹೇಂದ್ರ, ಸರ್ವೇ ಇಲಾಖಾ ಅಧಿಕಾರಿಗಳು, ನೀರಾವರಿ ಇಲಾಖಾ ಅಧಿಕಾರಿಗಳು, ಪೊಲೀಸ್ ಇಲಾಖಾ ಅಧಿಕಾರಿಗಳು ಇದ್ದರು.