ಕೊಪ್ಪಳ: ಜಿಲ್ಲೆಯಲ್ಲಿನ ಎಲ್ಲ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಶಿಸ್ತಿನಿಂದ ಹಾಗೂ ಸಮಯ ಪ್ರಜ್ಞೆಯೊಂದಿಗೆ ಕಾರ್ಯ ನಿರ್ವಹಿಸಬೇಕು. ಅಶಿಸ್ತು ಮುಂದುವರೆಸಿದರೆ ಶಿಸ್ತು ಕ್ರಮ ಜರುಗಿಸುವುದಾಗಿ ಜಿಲ್ಲಾಧಿಕಾರಿ ಡಾ.ಸುರೇಶ ಬಿ. ಇಟ್ನಾಳ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿ ಮಾತನಾಡಿದರು.

ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಕಚೇರಿಗೆ ಬರಬೇಕು ಎಂದು ಹೇಳುವ ಪರಿಸ್ಥಿತಿ ಬರಬಾರದು ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು, ನೀವೆಲ್ಲ ಜಿಲ್ಲಾಮಟ್ಟದ ಅಧಿಕಾರಿಗಳು,ನಿಮಗೆ ಸಮಯ ಪ್ರಜ್ಞೆ ಇರಬೇಕು. ನೀವೇ ಕಚೇರಿಗೆ ತಡವಾಗಿ ಬಂದು ಸಿಬ್ಬಂದಿಗೆ ಇನ್ನೇನು ಪಾಠ ಹೇಳುತ್ತೀರಿ. ನಾನು ಜವಾಬ್ದಾರಿಯುತ ಸ್ಥಾನದಲ್ಲಿರುವ ಅಧಿಕಾರಿ ಎಂಬುದಾಗಿ ನಿಮಗೆ ನೀವೇ ಅರಿತು ಕಚೇರಿಗೆ ಸರಿಯಾದ ಸಮಯಕ್ಕೆ ಹಾಜರಾಗಿ ಕಚೇರಿಯ ಇನ್ನೀತರ ಸಿಬ್ಬಂದಿಗೆ ಉತ್ತಮ ಪರಿಪಾಠ ಹಾಕಬೇಕು ಎಂದು ಸಲಹೆ ಮಾಡಿದರು.

ನೀವು ಯಾವ ಸಮಯಕ್ಕೆ ಕಚೇರಿಗೆ ಬಂದಿದ್ದೀರಿ? ನೀವು ಬಂದಾಗ ನಿಮ್ಮ ಸಿಬ್ಬಂದಿ ಕಚೇರಿಯಲ್ಲಿದ್ರಾ? ಎಂದು ಇಲಾಖಾವಾರು ಅಧಿಕಾರಿಗಳ ಹಾಜರಾತಿಯ ಬಗ್ಗೆ ಜಿಲ್ಲಾಧಿಕಾರಿಗಳು ಇದೆ ವೇಳೆ ಪರಿಶೀಲಿಸಿ, ಅಧಿಕಾರಿಗಳಿಗೆ ಅರ್ಧಗಂಟೆಗೂ ಹೆಚ್ಚು ಕಾಲ ಶಿಸ್ತಿನ ಪಾಠ ಮಾಡಿದರು.

ಬಿಸಿಲಿನ ಪ್ರಖರತೆ ಮತ್ತು ತೀವ್ರತೆ ಕಾರಣದಿಂದ ಕಲ್ಯಾಣ ಕರ್ನಾಟಕ ಒಳಗೊಂಡಂತೆ ಉತ್ತರ ಕರ್ನಾಟಕ ಭಾಗದ ವಿವಿಧ ಜಿಲ್ಲೆಗಳಲ್ಲಿ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಕಚೇರಿ ಕೆಲಸದ ಸಮಯ ಬೆಳಗ್ಗೆ 8 ರಿಂದ ಮಧ್ಯಾಹ್ನ 1.30 ರವರೆಗೆ ಬದಲಾವಣೆ ಮಾಡಿ ಸರ್ಕಾರ ಆದೇಶಿಸಿದೆ. ಜಿಲ್ಲೆಯ ಕೆಲ ಇಲಾಖೆಗಳಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ನಿಗದಿತ ಸಮಯಕ್ಕೆ ಕಚೇರಿಗೆ ಹಾಜರಾಗುತ್ತಿಲ್ಲ; ಕಚೇರಿಯಲ್ಲಿ ಕಾಣುವುದಿಲ್ಲ ಎಂದು ಕೆಲವು ಪತ್ರಿಕೆಗಳಲ್ಲಿ ವರದಿಯಾಗಿದ್ದನ್ನು ಜಿಲ್ಲಾಡಳಿತವು ಗಂಭೀರವಾಗಿ ಪರಿಗಣಿಸಿದೆ. ಅದಕ್ಕಾಗಿಯೇ ಏ.21ರಂದು ಖುದ್ದು ಕೆಲ ಕಚೇರಿಗಳಿಗೆ ಆಕಸ್ಮಿಕ ಭೇಟಿ ನೀಡಿ ಪರಿಶೀಲನೆ ಮಾಡಿಸಿದ್ದೇವೆ. 10 ಗಂಟೆಯಾದರು ಕೆಲ ಅಧಿಕಾರಿಗಳು ಕಾಣಿಸಿರುವುದಿಲ್ಲ. ಸಿಬ್ಬಂದಿಯು ಇರಲಿಲ್ಲ. ಇದು ನಾಚಿಕೆಗೇಡಿನ ಸಂಗತಿ. ನಿಮಗೆ ಅರಿವಿಲ್ಲವೇ? ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.


ಕಾರಣ ಕೇಳಿ ನೋಟೀಸ್: ಅಧಿಕಾರಿಗಳ ತಂಡ ರಚಿಸಿ ಇನ್ಮುಂದೆ ವಾರಕ್ಕೊಮ್ಮೆ ಆಯಾ ಕಚೇರಿಗಳಿಗೆ ಆಕಸ್ಮಿಕ ಭೇಟಿ ಮಾಡಲಾಗುತ್ತದೆ. ಆ ವೇಳೆ ಅಧಿಕಾರಿಗಳು ಮತ್ತು ಸಿಬ್ಬಂದಿ ಕಚೇರಿಯಲ್ಲಿ ಕಾಣಿಸದಿದ್ದರೆ ಆಯಾ ಅಧಿಕಾರಿಗಳು ಮತ್ತು ಸಿಬ್ಬಂದಿಯ ಮೇಲೆ ಶಿಸ್ತುಕ್ರಮಕ್ಕಾಗಿ ಮೇಲಧಿಕಾರಿಗಳಿಗೆ ವರದಿ ಮಾಡುವುದಾಗಿ ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದರು. ಕಚೇರಿಗೆ ವಿಳಂಬವಾಗಿ ಆಗಮಿಸುವುದನ್ನು ಮುಂದುವರೆಸಿದರೆ ಅಂತಹ ಅಧಿಕಾರಿಗಳಿಗೆ ಇನ್ಮುಂದೆ ಕಾರಣ ಕೇಳಿ ನೋಟೀಸ್ ಜಾರಿ ಮಾಡಲಾಗುವುದು ಎಂದು ತಿಳಿಸಿದರು.

ಕಚೇರಿಯಲ್ಲಿ ಚಲನವಲನ ವಹಿ ಇದ್ದಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಎಲ್ಲಿದ್ದಾರೆ ಎಂಬುದು ತಿಳಿಯುತ್ತದೆ. ಹಾಗಾಗಿ ಇನ್ನುಂದೆ ಎಲ್ಲ ಇಲಾಖೆಗಳಲ್ಲಿ ಕಡ್ಡಾಯವಾಗಿ ಚಲನವಲನ ವಹಿ ನಿರ್ವಹಣೆ ಮಾಡಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.

ವೈದ್ಯರ ಮೇಲೆ ಸಾಕಷ್ಟು ದೂರು: ವೈದ್ಯಾಧಿಕಾರಿಗಳು ಮತ್ತು ವೈದ್ಯರ ಮೇಲೆ ಸಾಕಷ್ಟು ದೂರು ಬರುತ್ತಿವೆ. ಇದು ಇಲ್ಲಿಗೆ ನಿಲ್ಲಬೇಕು. ಬರೀ ದೂರುಗಳನ್ನು ಕೇಳುತ್ತ ಕೂಡುವುದೇ ನಮ್ಮ ಕೆಲಸವಲ್ಲ. ಯಾವುದೇ ದೂರು ಹಗುರವಾಗಿ ಪರಿಗಣಿಸದೇ ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಬೇಕು. ಈ ಬಗ್ಗೆ ಸರಿಯಾಗಿ ಮೇಲ್ವಿಚಾರಣೆ ಮಾಡಬೇಕು ಎಂದು ಜಿಲ್ಲಾಧಿಕಾರಿಗಳು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಬೆಳಗಿನ ಅವಧಿಯಲ್ಲಿ ಕೆಲ ಕಚೇರಿಗಳಿಗೆ ಭೇಟಿ ನೀಡಿದಾಗ ಕಚೇರಿ ಮುಂದಿನ ಕಾರಿಡಾರದಲ್ಲಿ ಅಶುಚಿತ್ವ ಕಾಣಿಸಿತು. ಎಲ್ಲೆಂದರಲ್ಲಿ ಪೋಸ್ಟರ್ ಅಂಟಿಸಿದ್ದು ಕಾಣಿಸಿತು. ಯಾವುದೇ ಪತ್ರ ಅಚ್ಚುಕಟ್ಟಾಗಿ ಸೂಚನಾ ಫಲಕದಲ್ಲಿ ಹಾಕಲು ತಿಳಿಸಿದ್ದರೂ ಎಲ್ಲೆಂದರಲ್ಲಿ ಹಾಕಿರುವುದು ಗಮನಕ್ಕೆ ಬಂದಿತು. ಈ ಅಶಿಸ್ತು ದೂರಾಗಬೇಕು. ಕಚೇರಿಯಲ್ಲಿ ಶಿಸ್ತು ಕಾಯ್ದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಹೇಮಂತಕುಮಾರ, ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಸಹಾಯಕ ಆಯುಕ್ತ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಜಿಪಂ ಮುಖ್ಯ ಯೋಜನಾಧಿಕಾರಿ ಡಿ.ಮಂಜುನಾಥ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಂಜುನಾಥ ಗುಂಡೂರು, ಜಂಟಿ ಕೃಷಿ ನಿರ್ದೇಶಕ ಜಿ.ಡಿ.ಕೃಷ್ಣಮೂರ್ತಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಅಜ್ಜಪ್ಪ ಸೋಗಲದ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಟಿ.ಲಿಂಗರಾಜು, ಪಶು ಇಲಾಖೆ ಉಪನಿರ್ದೇಶಕ ಡಾ. ಪಿ.ಎಂ.ಮಲ್ಲಯ್ಯ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಜಗದೀಶ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.