ವಿಧಾನಸಭಾ ಕ್ಷೇತ್ರದ ದಶಕಗಳ ಬೇಡಿಕೆಯಾಗಿದ್ದ ಪ್ರಮುಖ ರಸ್ತೆ ಹಾಗೂ ಸೇತುವೆ ಅಭಿವೃದ್ಧಿ ಕಾಮಗಾರಿಗಳಿಗೆ ರಾಜ್ಯ ಸರ್ಕಾರದಿಂದ ಅನುಮೋದನೆ ದೊರೆತಿರುವುದು ಸಂತಸದ ಸಂಗತಿಯಾಗಿದೆ ಎಂದು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಹಾಗೂ ಪರಾಜಿತ ಅಭ್ಯರ್ಥಿ ಮುರಳಿ ಮೋಹನ್ ಹೇಳಿದರು. ಈ ಸೇತುವೆಯಿಂದ ಹೆತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಯೂರು ಹಾಗೂ ಉಚ್ಚಂಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳ ನಡುವಿನ ಸಂಪರ್ಕ ಸುಗಮವಾಗಲಿದೆ ಎಂದು ಹೇಳಿದರು.
ಕನ್ನಡಪ್ರಭ ವಾರ್ತೆ ಸಕಲೇಶಪುರ
ವಿಧಾನಸಭಾ ಕ್ಷೇತ್ರದ ದಶಕಗಳ ಬೇಡಿಕೆಯಾಗಿದ್ದ ಪ್ರಮುಖ ರಸ್ತೆ ಹಾಗೂ ಸೇತುವೆ ಅಭಿವೃದ್ಧಿ ಕಾಮಗಾರಿಗಳಿಗೆ ರಾಜ್ಯ ಸರ್ಕಾರದಿಂದ ಅನುಮೋದನೆ ದೊರೆತಿರುವುದು ಸಂತಸದ ಸಂಗತಿಯಾಗಿದೆ ಎಂದು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಹಾಗೂ ಪರಾಜಿತ ಅಭ್ಯರ್ಥಿ ಮುರಳಿ ಮೋಹನ್ ಹೇಳಿದರು.ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ಷೇತ್ರದ ವಿವಿಧ ಮೂಲಸೌಕರ್ಯ ಸಮಸ್ಯೆಗಳ ಕುರಿತು ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ ಅವರನ್ನು ಖುದ್ದಾಗಿ ಭೇಟಿ ಮಾಡಿ ಸುದೀರ್ಘ ಚರ್ಚೆ ನಡೆಸಿ, 2025ರ ನವೆಂಬರ್ 14ರಂದು ಸಲ್ಲಿಸಿದ್ದ ಮನವಿಗೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಅದರ ಫಲವಾಗಿ ತುರ್ತಾಗಿ ಎರಡು ಪ್ರಮುಖ ರಸ್ತೆ ಸೇತುವೆ ಕಾಮಗಾರಿಗಳಿಗೆ ಅನುಮೋದನೆ ನೀಡಿದ್ದಾರೆ. ಉಳಿದ ಕಾಮಗಾರಿಗಳಿಗೆ ಮುಂದಿನ ದಿನಗಳಲ್ಲಿ ಹಂತಹಂತವಾಗಿ ಮಂಜೂರಾತಿ ನೀಡುವುದಾಗಿ ಸಚಿವರು ಭರವಸೆ ನೀಡಿದ್ದಾರೆ ಎಂದು ತಿಳಿಸಿದರು. ಕರಗೂರು – ಕರಗೂರು ಕೊಪ್ಪಲು – ಹಳ್ಳಿಯೂರು – ಹಾಡ್ಯ – ಹೆತ್ತೂರು ರಸ್ತೆ ಮಾರ್ಗದಲ್ಲಿ 2.950 ಕಿ.ಮೀ. ಉದ್ದದ ಹೊಸ ಸೇತುವೆ ನಿರ್ಮಾಣಕ್ಕೆ 4 ಕೋಟಿ 10 ಲಕ್ಷ ವೆಚ್ಚದಲ್ಲಿ ಅನುಮೋದನೆ ಸಿಕ್ಕಿದೆ. ಈ ಸೇತುವೆಯಿಂದ ಹೆತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಯೂರು ಹಾಗೂ ಉಚ್ಚಂಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳ ನಡುವಿನ ಸಂಪರ್ಕ ಸುಗಮವಾಗಲಿದೆ ಎಂದು ಹೇಳಿದರು.ಅದೇ ರೀತಿ ಆಡ್ರಹಳ್ಳಿ – ಪಾಲಹಳ್ಳಿ ರಸ್ತೆಯ 2.40 ಕಿ.ಮೀ ಮಾರ್ಗದಲ್ಲಿ ₹2 ಕೋಟಿ 50 ಲಕ್ಷ ರು. ವೆಚ್ಚದಲ್ಲಿ ಹೊಸ ಸೇತುವೆ ನಿರ್ಮಾಣವಾಗಲಿದೆ. ಇದು ಈ ಭಾಗದ ಜನರ ದಶಕಗಳ ಬೇಡಿಕೆಯಾಗಿತ್ತು ಎಂದು ತಿಳಿಸಿದರು.ಕ್ಷೇತ್ರದ ಅಭಿವೃದ್ಧಿಗೆ ಯಾವುದೇ ಅಧಿಕೃತ ಸ್ಥಾನಮಾನಕ್ಕಿಂತ ಜನಸೇವೆಯೇ ಮುಖ್ಯವೆಂದು ನಂಬಿ, ಅಭಿವೃದ್ಧಿ ಕಾಮಗಾರಿಯಲ್ಲಿ ರಾಜಕೀಯ ಮಾಡುತ್ತಿಲ್ಲ. ಮುಂದಿನ ದಿನಗಳಲ್ಲಿ ಕ್ಷೇತ್ರದ ಪ್ರತಿಯೊಂದು ಸಮಸ್ಯೆಯನ್ನು ಹಂತ ಹಂತವಾಗಿ ಬಗೆಹರಿಸಲು ಶ್ರಮಿಸುವುದಾಗಿ ಹೇಳಿದರು. ನಮ್ಮ ಬೇಡಿಕೆಗೆ ಸ್ಪಂದಿಸಿದ ಸಚಿವರಿಗೆ ಹಾಗೂ ರಾಜ್ಯ ಸರ್ಕಾರಕ್ಕೆ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ಮುರಳಿ ಮೋಹನ್ ತಿಳಿಸಿದರು.