ಸಾರಾಂಶ
ಧಾರವಾಡ: ಕೃಷಿ ಕ್ಷೇತ್ರದಲ್ಲಿ ಸಂಶೋಧನೆ ಹಾಗೂ ಕೃಷಿ ವಿಸ್ತರಣಾ ಕಾರ್ಯಚಟುವಟಿಕೆ ಉತ್ತೇಜಿಸಲು ಈಗಿರುವ ಕೃಷಿ ವಿವಿಗಳಿಗೆ ಪೂರಕವಾಗಿ ಧಾರವಾಡದ ಕೃಷಿ ವಿವಿ ಮೂಲಕ ಕೆಎಎಲ್‌ಇ ಸಂಸ್ಥೆ ಸೇರಿದಂತೆ ರಾಜ್ಯದ ಮೂರು ಕಡೆಗಳಲ್ಲಿ ಖಾಸಗಿ ಕೃಷಿ ಕಾಲೇಜುಗಳಿಗೆ ಅನುಮತಿ ನೀಡಲಾಗಿದೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದರು.
ಧಾರವಾಡ ಕೃಷಿ ವಿಶ್ವವಿದ್ಯಾಲಯದ 39ನೇ ಸಂಸ್ಥಾಪನಾ ದಿನಾಚರಣೆಯನ್ನು ಶುಕ್ರವಾರ ಉದ್ಘಾಟಿಸಿದ ಅವರು, ಪ್ರತಿ ವರ್ಷ ಒಂದು ಲಕ್ಷ ವಿದ್ಯಾರ್ಥಿಗಳು ಕೃಷಿ ವಿಜ್ಞಾನ ಓದಲು ಅರ್ಜಿ ಸಲ್ಲಿಸುತ್ತಿದ್ದಾರೆ. ಆದರೆ, ಬರೀ ಐದು ಸಾವಿರ ವಿದ್ಯಾರ್ಥಿಗಳಿಗೆ ಸೀಟುಗಳು ಲಭ್ಯ ಇವೆ. ಈ ಹಿನ್ನೆಲೆಯಲ್ಲಿ ಧಾರವಾಡ ಕೃಷಿ ವಿಶ್ವವಿದ್ಯಾಲಯದಿಂದ ಕೆಎಲ್‌ಇ ಸಂಸ್ಥೆ, ರಾಮನಗರ ಜಿಲ್ಲೆಯ ಕನಕಪುರದ ಎಸ್. ಕರಿಯಪ್ಪ ಕೃಷಿ ಕಾಲೇಜು ಹಾಗೂ ತುಮಕೂರಿನಲ್ಲಿ ಆದಿಚುಂಚನಗಿರಿ ಟ್ರಸ್ಟ್‌ಗೆ ಖಾಸಗಿ ಕೃಷಿ ಕಾಲೇಜು ನಡೆಸಲು ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. ಇನ್ನು ಅನೇಕ ಶಿಕ್ಷಣ ಸಂಸ್ಥೆಗಳು ಖಾಸಗಿ ಕೃಷಿ ಪದವಿ ನಡೆಸಲು ಅರ್ಜಿಗಳನ್ನು ನೀಡಿದ್ದು, ಹಂತ ಹಂತವಾಗಿ ಪರಿಗಣಿಸಲಾಗುವುದು ಎಂದು ಕೃಷಿ ಸಚಿವರು ತಿಳಿಸಿದರು.ದೇಶದಲ್ಲಿಯೇ ಪ್ರತಿಷ್ಠಿತ ರೈತರ ವಿಶ್ವವಿದ್ಯಾಲಯ ಎಂದು ಖ್ಯಾತಿ ಹೊಂದಿರುವ ಧಾರವಾಡ ಕೃಷಿ ವಿವಿ ಇದೇ ಅಕ್ಟೋಬರ್ ತಿಂಗಳಿಗೆ 39 ವರ್ಷಗಳನ್ನು ಪೂರೈಸಿದೆ. ರಾಜ್ಯದಲ್ಲಿ 2ನೇ ಕೃಷಿ ವಿವಿಯಾಗಿ ಸ್ಥಾಪನೆಯಾಗಿದೆ. ಕಳೆದ ಮೂರೂವರೆ ದಶಕಗಳ ಅವಧಿಯಲ್ಲಿ ಶೈಕ್ಷಣಿಕ, ಸಂಶೋಧನಾ ಹಾಗೂ ವಿಸ್ತರಣಾ ಕಾರ್ಯಗಳಲ್ಲಿ ಈ ವಿಶ್ವವಿದ್ಯಾಲಯದಿಂದ ಗಣನೀಯ ಪ್ರಮಾಣದಲ್ಲಿ ಪ್ರಗತಿ ದಾಖಲಿಸಿದೆ ಎಂದ ಅವರು, ಈ ವಿವಿ ಮೂಲಕ ಕೆಎಲ್‌ಇ ಸಂಸ್ಥೆಯು ಸವದತ್ತಿ ತಾಲೂಕಿನ ತೆನಿಕೊಳ್ಳ ಗ್ರಾಮದಲ್ಲಿ ಖಾಸಗಿ ಕೃಷಿ ಪದವಿ ನಡೆಸಲಿದೆ ಎಂದರು.
ವಿಶ್ವವಿದ್ಯಾಲಯದಿಂದ ಇಲ್ಲಿಯವರೆಗೆ ಬೆಳೆ ಸುಧಾರಣೆಯಲ್ಲಿ ಒಟ್ಟು 267 ವಿವಿಧ ಬೆಳೆಗಳ ತಳಿಗಳು, 241 ಉತ್ಪಾದನಾ ತಂತ್ರಜ್ಞಾನಗಳು ಹಾಗೂ ಬೆಳೆ ಸಂರಕ್ಷಣೆ ವಿಭಾಗದಲ್ಲಿ ಒಟ್ಟು 331 ತಾಂತ್ರಿಕತೆಗಳನ್ನು ಅಭಿವೃದ್ಧಿ ಪಡಿಸಲಾಗಿದ್ದು, ಒಟ್ಟಾರೆ 1139 ತಂತ್ರಜ್ಞಾನಗಳು ಅಭಿವೃದ್ಧಿಗೊಂಡಿವೆ. 2006ರಲ್ಲಿ ಬಿಡುಗಡೆಯಾಗಿರುವ ಜಗತ್ತಿನಲ್ಲಿಯೇ ಮೊಟ್ಟಮೊದಲ ಹೈಬ್ರಿಡ್ ವರಲಕ್ಷ್ಮಿ ಹಾಗೂ ಜಯಲಕ್ಷ್ಮಿ ಹತ್ತಿ ತಳಿಗಳು ಈ ಭಾಗದ ರೈತರ ಆರ್ಥಿಕ ಸ್ವಾವಲಂಬನೆಗೆ ಗಣನೀಯ ಕೊಡುಗೆ ನೀಡಿವೆ. ಅದೇ ರೀತಿ ಈ ಭಾಗದ ಮುಖ್ಯ ಬೆಳೆಗಳಾದ ಕಡಲೆ, ಹೆಸರು, ಹಿಂಗಾರಿ ಜೋಳ, ಕುಸುಬೆ ಮುಂತಾದ ಬೆಳೆಗಳ ಅಧಿಕ ಇಳುವರಿ ನೀಡುವ ಹಾಗೂ ಸೋಯಾಬಿನ್ ಬೆಳೆಯಲ್ಲಿ ರೋಗ ನಿರೋಧಕ ತಳಿಗಳು ರೈತರಿಗೆ ವರದಾನ ಎಂದರು.ಅಧ್ಯಕ್ಷತೆ ವಹಿಸಿದ್ದ ಕೃಷಿ ವಿವಿ ಕುಲಪತಿ ಪ್ರೊ. ಪಿ.ಎಲ್. ಪಾಟೀಲ ಮಾತನಾಡಿ, ನಮ್ಮ ವಿವಿ ಕೃಷಿ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಗೆ ಆದ್ಯತೆ ನೀಡುತ್ತಿದೆ. ಹೊಸ ತಳಿಗಳ ಅಭಿವೃದ್ಧಿ, ರೋಗ ಮುಕ್ತ ಬೆಳೆಗಳ ಉತ್ಪಾದನೆ ಮತ್ತು ಸುಧಾರಿತ ಕೃಷಿ ಪದ್ಧತಿಗಳ ಕುರಿತು ನಿರಂತರವಾಗಿ ಕೆಲಸ ಮಾಡುತ್ತಿದ್ದೇವೆ. ಈ ಎಲ್ಲದರ ಅಂತಿಮ ಉದ್ದೇಶ ರೈತರಿಗೆ ಲಾಭದಾಯಕ ಕೃಷಿಯನ್ನು ಖಚಿತಪಡಿಸುವುದಾಗಿದೆ ಎಂದರು.
ಶಾಸಕರಾದ ರವಿ ಗಣಿಗ, ಮಧು ಜಿ. ಮಾದೇಗೌಡ, ವಿವಿ ಆಡಳಿತ ಮಂಡಳಿಯ ಸದಸ್ಯರಾದ ಪಾರ್ವತಿ ಎಸ್. ಕುರಲೇ, ಬಸವರಾಜ ಕುಂದಗೋಳಮಠ, ವೀರನಗೌಡ ಪೊಲೀಸ್‌ಪಾಟೀಲ್, ರವಿಕುಮಾರ ಮಾಳಿಗೇರ, ಮಾಲತೇಶ ಶ್ಯಾಗೋಟಿ ಇದ್ದರು. ಕುಲಸಚಿವರಾದ ಜಯಶ್ರೀ ಶಿಂತ್ರಿ ಇದ್ದರು. ಸ್ಮರಣ ಸಂಚಿಕೆ ಹಾಗೂ ಪುಸ್ತಕ ಬಿಡುಗಡೆ ಮಾಡಲಾಯಿತು. ಕ್ರೀಡೆ, ಸಾಂಸ್ಕೃತಿಕ, ಅತ್ಯುತ್ತಮ ಸಿಬ್ಬಂದಿ ವರ್ಗ, ಸಂಶೋಧನೆ ಮತ್ತು ವಿಸ್ತರಣೆ ವಿಜ್ಞಾನಿಗಳಿಗೆ ಗೌರವ ಸಲ್ಲಿಸಲಾಯಿತು. ಡಾ. ಬಿ.ಡಿ. ಬಿರಾದರ ಸ್ವಾಗತಿಸಿದರು. ಡಾ.ಎಂ.ಬಿ. ಮಂಜುನಾಥ ವಂದಿಸಿದರು.