ಸಾರಾಂಶ
ಜಿಲ್ಲೆಯಲ್ಲಿ ಜಿಪಂ ವ್ಯಾಪ್ತಿಯಲ್ಲಿ 2024-25 ಸಾಲಿನಲ್ಲಿ 214 ಕೋಟಿ ರು.3811 ಕಾಮಗಾರಿಗಳಿಗೆ ಅನುಮೋದನೆ ದೊರೆತಿದ್ದು ಕೆಲಸ ಪ್ರಾರಂಭವಾಗಿವೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದರು.
ಕನ್ನಡಪ್ರಭ ವಾರ್ತೆ ಕೊರಟಗೆರೆ/ ತುಮಕೂರು
ಜಿಲ್ಲೆಯಲ್ಲಿ ಜಿಪಂ ವ್ಯಾಪ್ತಿಯಲ್ಲಿ 2024-25 ಸಾಲಿನಲ್ಲಿ 214 ಕೋಟಿ ರು.3811 ಕಾಮಗಾರಿಗಳಿಗೆ ಅನುಮೋದನೆ ದೊರೆತಿದ್ದು ಕೆಲಸ ಪ್ರಾರಂಭವಾಗಿವೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದರು.ಪಟ್ಟಣದ ತಾಪಂ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿ, ಕಾಮಗಾರಿಗಳಲ್ಲಿ ಶಾಲೆಯ ದುರಸ್ತಿ, ಅಂಗನವಾಡಿ, ಆಸ್ಪತ್ರೆ ದುರಸ್ತಿ ಸೇರಿದಂತೆ ಹಲವು ಅಭಿವೃದ್ಧಿ ಕೆಲಸಗಳು ನಡೆಯಲಿದೆ, ಜಿಲ್ಲೆಯಲ್ಲಿ ₹27 ಕೋಟಿ ಸಿಎಸ್ ಆರ್ ಅನುದಾನದಲ್ಲಿ ಶಾಲಾ ಕೊಠಡಿಗಳ ದುರಸ್ತಿ ಮತ್ತು ಆರೋಗ್ಯ ಕ್ಷೇತ್ರಗಳಿಗೆ ಬಳಸಲಾಗುತ್ತದೆ ಎಂದರು. ಕೊರಟಗೆರೆ ತಾಲೂಕಿನಲ್ಲಿ 48 ಗ್ರಾಮಗಳನ್ನು ನೂತನವಾಗಿ ಮಾಡಲಾಗಿದ್ದು ಇವುಗಳಲ್ಲಿ ಲಂಬಾಣಿ ತಾಂಡ ಮತ್ತು ಗೊಲ್ಲರಹಟ್ಟಿಗಳು ಸೇರಿದ್ದು ಈಗಾಗಲೇ 800 ಜನರಿಗೆ ಹಕ್ಕು ಪತ್ರಗಳನ್ನು ವಿತರಿಸಲಾಗಿದೆ. ತಾಲೂಕಿನಲ್ಲಿ 4422 ನರೇಗಾ ಕಾಮಗಾರಿಗಳು, ₹39 ಕೋಟಿ ಪ್ರಾರಂಭವಾಗಿದ್ದು, ₹20 ಕೋಟಿ ವ್ಯಯವಾಗಿದೆ, ತಾಲೂಕಿನಲ್ಲಿ ಎತ್ತಿನ ಹೊಳೆ ಯೋಜನೆಯಲ್ಲಿ ಕೆರೆ ತುಂಬಿಸುವ ಕಾಮಗಾರಿಗಳನ್ನು ಪ್ರಾರಂಭಿಸಲಾಗಿದ್ದು, ಬೈರಗೊಂಡ್ಲು ಬಳಿಯ ಬಫರ್ ಡ್ಯಾಂ ಪುನರ್ ಪರಿಶೀಲನೆಗೆ ರಾಜ್ಯದ ಉಪಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಬರಲಿದ್ದಾರೆ ಎಂದರು. ಅಧಿಕಾರಿಗಳ ಸಭೆಯಲ್ಲಿ ಹೂಲೀಕುಂಟೆ ಗ್ರಾಮದಲ್ಲಿ ಹಲವು ವರ್ಷಗಳಿಂದ ಪಾಳು ಬಿದ್ದಿರುವ ಜೇನು ಕೃಷಿ ಕಚೇರಿಯನ್ನು ಕೂಡಲೇ ವಶಕ್ಕೆ ಪಡೆದು ಅಭಿವೃದ್ಧಿ ಪಡಿಸುವಂತೆ ತೋಟಗಾರಿಕೆ ಇಲಾಖಾಧಿಕಾರಿಗೆ ಸೂಚಿಸಿದರು, ಹೊಳವನಹಳ್ಳಿ ಗ್ರಾಮದಲ್ಲಿನ ಜನತಾ ಕಾಲೋನಿ ಬಳಿ ಪಾಳು ಬಿದ್ದಿದ್ದ ವಿದ್ಯಾರ್ಥಿ ನಿಲಯವನ್ನು ಸಮಾಜ ಕಲ್ಯಾಣ ಇಲಾಖೆಯವರು ಸುಪರ್ದಿಗೆ ಪಡೆದು ಅಭಿವೃದ್ಧಿ ಪಡಿಸುವಂತೆ ಅದೇಶಿಸಿದರು.ಪಟ್ಟಣದ ಪಂಚಾಯಿತಿ ವತಿಯಿಂದ ಪೌರ ಕಾರ್ಮಿಕರಿಗೆ ಮನೆಗಳನ್ನು ನಿರ್ಮಿಸಿ 2 ವರ್ಷಗಳಾದರೂ ನೀಡದೇ ಇರುವುದಕ್ಕೆ ಗರಂ ಆದ ಸಚಿವರು ಕೂಡಲೇ ಅವುಗಳನ್ನು ಪೌರಕಾರ್ಮಿರಿಗೆ ವಿತರಿಸುವಂತೆ ಮತ್ತು ಗಿರಿನಗರದ ಸ್ಲಂ ಬೋರ್ಡ್ ಮನೆಗಳ ಬಗ್ಗೆ ವಿವರ ನೀಡುವಂತೆ ಸೂಚಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಎಲ್ಲಾ ಶಾಲೆಗಳ ಶೌಚಾಲಯಗಳನ್ನು ಸುಸರ್ಜಿತವಾಗಿ ಇಟ್ಟುಕೊಳ್ಳುವಂತೆ ಆದೇಶಿಸಿದರು.ಕೇಂದ್ರದ ಜಲಜೀವನ್ ಮಿಷನ್ ಉತ್ತಮ ಯೋಜನೆಯಾದರೂ ಸಹ ಕಳಪೆ ಕಾಮಗಾರಿ ಮತ್ತು ನೀರಿನ ಕೊರತೆ ಇರುವ ಕಡೆಯೂ ಕಾಮಗಾರಿ ನಡೆದಿರುವುದು ಈ ಯೋಜನೆಗೆ ಹಿನ್ನಡೆಯಾಗಿದೆ. ನಮ್ಮ ಕ್ಷೇತ್ರದಲ್ಲಿ ಈ ರೀತಿಯ ಲೋಪಗಳು ಮುಂದೆ ಆಗದಂತೆ ಎಚ್ಚರ ವಹಿಸುವಂತೆ ಕುಡಿಯುವ ನೀರು ಮತ್ತು ನೈಮಲ್ಯ ಎಇಇಗೆ ಎಚ್ಚರಿಸಿ, ಲೋಕೋಪಯೋಗಿ ಇಲಾಖೆಯ ಕಾಮಗಾರಿಯ ಬಗ್ಗೆ ಅಸಮಾದಾನ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶುಭಕಲ್ಯಾಣ್, ಜಿ.ಪಂ ಸಿಇಓ ಪ್ರಭು, ಪೊಲೀಸ್ ವರಿಷ್ಠಾಧಿಕಾರಿಅಶೋಕ್, ತಹಶೀಲ್ದಾರ್ ಮಂಜುನಾಥ್,ತಾ.ಪಂ ಇಓ ಅಪೂರ್ವ ಸೇರಿದಂತೆತಾಲ್ಲೂಕು ಮಟ್ಟದ ಅಧಿಕಾರಿಗಳು ಇದ್ದರು.
ಪೋಟೋಕೊರಟಗೆರೆ ತಾಪಂ ಸಭಾಂಗಣದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಸಚಿವ ಪರಮೇಶ್ವರ್ ಮಾತನಾಡಿದರು.